ಹೊಸದಿಲ್ಲಿ, ಜು.18 : ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪಾಟ್ನಾದ ಏಮ್ಸ್‌ನ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಗುರುವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಬಿಬಿಎಸ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಚಂದನ್ ಸಿಂಗ್, ರಾಹುಲ್ ಅನಂತ್ ಮತ್ತು ಕುಮಾರ್ ಶಾನು ಹಾಗೂ ಎರಡನೇ ವರ್ಷದ ವಿದ್ಯಾರ್ಥಿ ಕರಣ್ ಜೈನ್ ಅವರನ್ನು ಸಿಬಿಐ ತಂಡ ಬಂಧಿಸಿದೆ.
ಏಮ್ಸ್‌ನ ಹಿರಿಯ ಅಧ್ಯಾಪಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಬುಧವಾರ ಹಾಸ್ಟೆಲ್ ಕೊಠಡಿಗಳಿಂದ ಕರೆದೊಯ್ಯಲಾಯಿತು. ತನಿಖೆ ಬಗ್ಗೆ ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಲಾಗಿತ್ತು. ಸಿಬಿಐ ವಿದ್ಯಾರ್ಥಿಗಳ ಹಾಸ್ಟೆಲ್ ಕೊಠಡಿಗಳನ್ನು ಸೀಲ್ ಮಾಡಿದೆ ಎಂದು ಹೇಳಿದರು.
ʻಸಿಬಿಐ ಚಂದನ್ ಸಿಂಗ್, ರಾಹುಲ್ ಅನಂತ್, ಕುಮಾರ್ ಶಾನು ಮತ್ತು ಕರಣ್ ಜೈನ್ ಅವರನ್ನು ಬಂಧಿಸಿದೆ ʼ ಎಂದು ಎಐಐಎಂಎಸ್ ಪಾಟ್ನಾ ನಿರ್ದೇಶಕ ಜಿ.ಕೆ. ಪಾಲ್ ಹೇಳಿದ್ದಾರೆ.
ವಿದ್ಯಾರ್ಥಿಗಳ ಛಾಯಾಚಿತ್ರಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ಹಿರಿಯ ಸಿಬಿಐ ಅಧಿಕಾರಿಯೊಬ್ಬರು ಕಳುಹಿಸಿದ್ದರು. ಡೀನ್, ಹಾಸ್ಟೆಲ್ ವಾರ್ಡನ್ ಮತ್ತು ಒಎಸ್‌ಡಿ ಅವರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗಿದೆ ಎಂದು ನಿರ್ದೇಶಕರು ಹೇಳಿದರು.
ಜಮ್‌ಶೆಡ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 2017 ರ ಬ್ಯಾಚಿನ ಸಿವಿಲ್ ಇಂಜಿನಿಯರ್ ಪಂಕಜ್ ಕುಮಾರ್ ಅಲಿಯಾಸ್ ಆದಿತ್ಯ ಅವರನ್ನು ಸಿಬಿಐ ಬಂಧಿಸಿದ ಎರಡು ದಿನಗಳ ನಂತರ ವೈದ್ಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.