ಚುನಾವಣಾ ಬಾಂಡ್ ಯೋಜನೆಗೆ ಪರ್ಯಾಯ ಅಗತ್ಯ: ಅಮಿತ್ ಶಾ

ರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡುವ ಇತರ ವಿಧಾನಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಿ,ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

Update: 2024-05-27 14:05 GMT

ʻಚುನಾವಣೆ ಬಾಂಡ್ ಯೋಜನೆಯನ್ನು ರದ್ದುಗೊಳಿಸಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಕಪ್ಪುಹಣದ ಪ್ರಭಾವ ಹೆಚ್ಚಾಗಲಿದೆ. ಇದಕ್ಕೆ ಪರ್ಯಾಯವೊಂದನ್ನು ಕಂಡುಕೊಳ್ಳುವ ಅಗತ್ಯವಿದೆ,ʼ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ʻರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡುವ ಇತರ ವಿಧಾನಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳ ಬೇಕು. ಎಸ್‌ಬಿಐನಿಂದ ಬಾಂಡ್‌ ಖರೀದಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ನೀಡಲು ದಾನಿಗಳಿಗೆ ಅವಕಾಶ ನೀಡುವ ಯೋಜನೆಯನ್ನು ನಿರ್ಣಾಯಕ ಸಮಯದಲ್ಲಿ ರದ್ದುಗೊಳಿಸಲಾಗಿದೆ,ʼ ಎಂದು ಅವರು ತಿಳಿಸಿದರು.

ಲೋಕಸಭೆ ಚುನಾವಣೆ ಘೋಷಣೆಗೆ ಒಂದು ತಿಂಗಳ ಮೊದಲು ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಈ ಯೋಜನೆಯನ್ನು ರದ್ದುಗೊಳಿಸಿತ್ತು.

ಸಂಸತ್ತಿನಲ್ಲಿ ಚರ್ಚೆ: ʻಚುನಾವಣೆ ಮತ್ತು ರಾಜಕೀಯದಲ್ಲಿ ಕಪ್ಪುಹಣದ ಪ್ರಭಾವವನ್ನು ಹೆಚ್ಚಿಸುತ್ತದೆ ಎಂದು ನಂಬುತ್ತೇನೆ ಮತ್ತು ಇದು ನನ್ನ ಊಹೆ. ರಾಜಕೀಯ ಪಕ್ಷಗಳು ಈ ವರ್ಷ ವಿವರ ಸಲ್ಲಿಸಿದಾಗ, ಎಷ್ಟು ಹಣ ನಗದು ಮತ್ತು ಚೆಕ್ ಮೂಲಕ ಎಷ್ಟು ಹಣ ಸಂದಾಯವಾಗಿದೆ ಎಂಬುದು ತಿಳಿಯುತ್ತದೆ. ಬಾಂಡ್‌ ಇದ್ದಾಗ ದೇಣಿಗೆಯಲ್ಲಿ ಚೆಕ್‌ ಮೂಲಕ ದೇಣಿಗೆ ಶೇ. 96 ಇದ್ದಿತ್ತು,ʼ ಎಂದರು.

ʻಕಪ್ಪುಹಣದ ಪ್ರಭಾವ ಹೆಚ್ಚಾಗದಂತೆ ಪರ್ಯಾಯವನ್ನು ಹುಡುಕಬೇಕು. ಸಂಸತ್ತಿನಲ್ಲಿ ಚರ್ಚೆಯಾಗಬೇಕು.ಬಾಂಡ್ ಯೋಜನೆಗೆ ಪರ್ಯಾಯವನ್ನು ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಚರ್ಚಿಸಬೇಕಿದೆ,ʼ ಎಂದು ಹೇಳಿದರು.

ʻಸುಪ್ರೀಂ ಕೋರ್ಟ್‌ನ ಅಭಿಪ್ರಾಯವೂ ಬಹಳ ಮುಖ್ಯ. ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರ ಸಲಹೆಯನ್ನೂ ಪಡೆಯಬೇಕು. ಸಾಮೂಹಿಕವಾಗಿ ಚರ್ಚಿಸಿ ಹೊಸ ಪರ್ಯಾಯವನ್ನು ನಿರ್ಧರಿಸಬೇಕು,ʼ ಎಂದು ಹೇಳಿದರು.

ಹಕ್ಕುಗಳ ಉಲ್ಲಂಘನೆ: ಚುನಾವಣಾ ಬಾಂಡ್ ಯೋಜನೆಯು ಮಾಹಿತಿ ಹಕ್ಕು ಮತ್ತು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಕೇಂದ್ರ ಸರ್ಕಾರವು, ಯೋಜನೆ ರಾಜಕೀಯದಲ್ಲಿ ಕಪ್ಪುಹಣದ ಪ್ರಭಾವವನ್ನು ತಡೆಗಟ್ಟುವ ಗುರಿ ಹೊಂದಿದೆ ಮತ್ತು ದಾನಿಗಳು ಅನಾಮಧೇಯರಾಗಿ ಉಳಿಯಲು ಅವಕಾಶ ನೀಡುತ್ತದೆ ಎಂದು ಹೇಳಿತ್ತು.

ʻವ್ಯಾಪಾರ ಹಿತಾಸಕ್ತಿಗಳಿಂದ ಲಂಚವನ್ನು ಕಾನೂನುಬದ್ಧಗೊಳಿಸಲು ಬಿಜೆಪಿಯು ಈ ಯೋಜನೆಯನ್ನು ಬಳಸಿಕೊಂಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು. ಆದರೆ, ಆಡಳಿತ ಪಕ್ಷ ಈ ಆರೋಪವನ್ನು ತಿರಸ್ಕರಿಸಿತು.

Tags:    

Similar News