ಭಾರತದಲ್ಲಿ ಈ ಬಾರಿ ಹರಡುತ್ತಿರುವ ಕೋವಿಡ್ ವೈರಸ್ನ ವೇರಿಯೆಂಟ್ ಪತ್ತೆ; ಇಲ್ಲಿದೆ ಅದರ ಪೂರ್ಣ ವಿವರ
ವಿಶ್ವ ಆರೋಗ್ಯ ಸಂಸ್ಥೆಯ (WHO) ಮೇ 2025ರ ವರ್ಗೀಕರಣದ ಪ್ರಕಾರ, LF.7 ಮತ್ತು NB.1.8 (NB.1.8.1 ಇದರ ಭಾಗ) ಉಪತಳಿಗಳನ್ನು "ನಿಗಾದಲ್ಲಿರುವ ರೂಪಾಂತರಗಳು " (Variants Under Monitoring) ಎಂದು ಗುರುತಿಸಲಾಗಿದೆ.;
ಭಾರತದಲ್ಲಿ ಕೊರೊನಾ ಸೋಂಕು ಸಣ್ಣ ಮಟ್ಟಿಗೆ ಏರಿಕೆಯಾಗುತ್ತಿರುವ ನಡುವೆಯೇ ಸಣ್ಣ ಪ್ರಮಾಣದ ಆತಂಕ ಶುರುವಾಗಿದೆ. ಆದರೆ, ಈ ಬಾರಿಯ ವೈರಸ್ ಅಷ್ಟೊಂದು ಅಪಾಯಕಾರಿ ಅಲ್ಲ ಎಂದು ಹೇಳುತ್ತಿರುವ ನಡುವೆಯೇ ಭಾರತದಲ್ಲಿ ಕೋವಿಡ್-19 ವೈರಾಣುವಿನ ಎರಡು ಹೊಸ ಉಪತಳಿಗಳು ಪತ್ತೆಯಾಗಿವೆ ಎಂಬುದಾಗಿ ವರದಿಯಾಗಿದೆ.
NB.1.8.1 ಉಪತಳಿಯ ಒಂದು ಪ್ರಕರಣ ಮತ್ತು LF.7 ಉಪತಳಿಯ ನಾಲ್ಕು ಪ್ರಕರಣಗಳು ದೃಢಪಟ್ಟಿವೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸಾರ್ಟಿಯಂ (INSACOG) ತನ್ನ ಇತ್ತೀಚಿನ ಅಂಕಿ ಅಂಶಗಳ ಆಧಾರದಲ್ಲಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಮೇ 2025ರ ವರ್ಗೀಕರಣದ ಪ್ರಕಾರ, LF.7 ಮತ್ತು NB.1.8 (NB.1.8.1 ಇದರ ಭಾಗ) ಉಪತಳಿಗಳನ್ನು "ನಿಗಾದಲ್ಲಿರುವ ರೂಪಾಂತರಗಳು " (Variants Under Monitoring) ಎಂದು ಗುರುತಿಸಲಾಗಿದೆ. ಆದರೆ, ಇವುಗಳನ್ನು "ಆತಂಕಕಾರಿ ರೂಪಾಂತರಗಳು" (Variants of Concern) ಅಥವಾ "ಗಮನಾರ್ಹ ರೂಪಾಂತರಗಳು" (Variants of Interest) ಎಂದು ಇನ್ನೂ ಪಟ್ಟಿ ಮಾಡಲಾಗಿಲ್ಲ. ಆದಾಗ್ಯೂ, ಚೀನಾ ಮತ್ತು ಏಷ್ಯಾದ ಕೆಲವು ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಈ ಉಪತಳಿಗಳು ಕಾರಣ ಎಂಬುದಾಗಿ ವರದಿಯಾಗಿದೆ.
INSACOG ಡೇಟಾ ಪ್ರಕಾರ, ತಮಿಳುನಾಡಿನಲ್ಲಿ ಏಪ್ರಿಲ್ ತಿಂಗಳಲ್ಲಿ NB.1.8.1 ತಳಿಯ ಒಂದು ಪ್ರಕರಣ ಪತ್ತೆಯಾಗಿದ್ದರೆ, ಗುಜರಾತ್‌ನಲ್ಲಿ ಮೇ ತಿಂಗಳಿನಲ್ಲಿ LF.7 ತಳಿಯ ನಾಲ್ಕು ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ಭಾರತದಲ್ಲಿ ಪರೀಕ್ಷೆಗೊಳಪಡಿಸಿದ ಮಾದರಿಗಳಲ್ಲಿ ಶೇಕಡ 53ರಷ್ಟು JN.1 ಉಪತಳಿಯು ಅತ್ಯಂತ ಸಾಮಾನ್ಯವಾಗಿ ಕಂಡುಬರುತ್ತಿದೆ. ಇದರ ನಂತರ BA.2 (ಶೇ. 26) ಮತ್ತು ಇತರ ಒಮಿಕ್ರಾನ್ ಉಪತಳಿಗಳು (ಶೇ. 20) ಇವೆ.
ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಆರಂಭಿಕ ಅಪಾಯದ ಮೌಲ್ಯಮಾಪನದ ಅನ್ವಯ, NB.1.8.1 ಉಪತಳಿಯು ಜಾಗತಿಕವಾಗಿ ಕಡಿಮೆ ಮಟ್ಟದ ಸಾರ್ವಜನಿಕ ಆರೋಗ್ಯ ಅಪಾಯ ಒಡ್ಡುತ್ತದೆ ಎಂದು ಹೇಳಲಾಗಿದೆ. ಆದರೆ, ಇದರ ಸ್ಪೈಕ್ ಪ್ರೋಟೀನ್‌ನಲ್ಲಿ ಕಂಡುಬಂದಿರುವ A435S, V445H, ಮತ್ತು T478I ನಂತಹ ರೂಪಾಂತರಗಳು, ಇತರ ಉಪತಳಿಗಳಿಗೆ ಹೋಲಿಸಿದರೆ ಹೆಚ್ಚು ವೇಗವಾಗಿ ಹರಡುವ ಮತ್ತು ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.
ಪರಿಸ್ಥಿತ ಅವಲೋಕನ
ಆರೋಗ್ಯ ಸೇವೆಗಳ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆಯೊಂದು ನಡೆದಿದ್ದು, ಇದರಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಇತರ ಪ್ರಮುಖ ಆರೋಗ್ಯ ಸಂಸ್ಥೆಗಳ ತಜ್ಞರು ಭಾಗವಹಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಇದೇ ವೇಳೆ, ದೇಶದ ಹಲವು ಪ್ರದೇಶಗಳಲ್ಲಿ ಸ್ಥಳೀಯವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ದೆಹಲಿಯಲ್ಲಿ 23 ಹೊಸ ಪ್ರಕರಣಗಳು ವರದಿಯಾಗಿದ್ದರೆ, ಆಂಧ್ರಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4 ಮತ್ತು ತೆಲಂಗಾಣದಲ್ಲಿ ಒಂದು ಹೊಸ ಪ್ರಕರಣ ದೃಢಪಟ್ಟಿದೆ. ಬೆಂಗಳೂರಿನಲ್ಲಿ, 9 ತಿಂಗಳ ಮಗುವೊಂದರಲ್ಲಿ ಸೇರಿದಂತೆ ಕಳೆದ 20 ದಿನಗಳಿಂದ ಸೋಂಕು ಕ್ರಮೇಣ ಏರಿಕೆಯಾಗುತ್ತಿರುವುದು ಕಂಡುಬಂದಿದೆ. ಕೇರಳದಲ್ಲಿ ಮೇ ತಿಂಗಳೊಂದರಲ್ಲೇ 273 ಪ್ರಕರಣಗಳು ವರದಿಯಾಗಿವೆ, ಇದು ಸ್ಥಳೀಯ ಮಟ್ಟದಲ್ಲಿ ಸೋಂಕು ಹರಡುತ್ತಿರುವುದನ್ನು ಸೂಚಿಸುತ್ತದೆ.