ಮೇಘಾಲಯದ ಬಂಡುಕೋರರ ಗುಂಪು ಎಚ್ಎನ್ಎಲ್‌ಸಿ ಐದು ವರ್ಷ ನಿಷೇಧ

ನವೆಂಬರ್ 2019ರಿಂದ ಜೂನ್ 2024 ರವರೆಗೆ ಮೇಘಾಲಯದಲ್ಲಿ ಸ್ಫೋಟ ಅಥವಾ ಸ್ಫೋಟಕಗಳನ್ನು ಇಡುವುದು ಸೇರಿದಂತೆ 48 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದೆ. ಈ ಗುಂಪು ಈಶಾನ್ಯ ಪ್ರದೇಶದ ಇತರ ದಂಗೆಕೋರ ಗುಂಪುಗಳೊಂದಿಗೆ ಸಂಪರ್ಕ ಹೊಂದಿದೆ.

Update: 2024-11-14 12:17 GMT
ಪ್ರಾತಿನಿಧಿಕ ಚಿತ್ರ

ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿರುವುದಕ್ಕೆ ಮತ್ತು ಭಾರತ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ನಡೆಸುತ್ತಿರುವ ಮೇಘಾಲಯ ಮೂಲದ ದಂಗೆಕೋರ ಗುಂಪು ಹಿನ್ನಿವ್ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ ಅನ್ನು (ಎಚ್ಎನ್ಎಲ್‌ಸಿ )ಕೇಂದ್ರ ಸರಕಾರವು ಐದು ವರ್ಷಗಳ ಕಾಲ ನಿಷೇಧಿಸಿದೆ.

ಖಾಸಿ ಮತ್ತು ಜೈನ್ತಿಯಾ ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುವ ಮೇಘಾಲಯದ ಪ್ರದೇಶಗಳನ್ನು ಪ್ರತ್ಯೇಕಿಸುವ ಉದ್ದೇಶವನ್ನು ಎಚ್ಎನ್ಎಲ್‌ಸಿ ಘೋಷಿಸಿದೆ. ಅದೇ ರೀತಿ. ಸಂಘಟನೆ ಕಟ್ಟಲು ಹಣಕ್ಕಾಗಿ ನಾಗರಿಕರನ್ನು ಬೆದರಿಸುವುದನ್ನು ಮುಂದುವರಿಸಿದೆ ಎಂದು ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ನವೆಂಬರ್ 2019ರಿಂದ ಜೂನ್ 2024 ರವರೆಗೆ ಮೇಘಾಲಯದಲ್ಲಿ ಸ್ಫೋಟ ಮಾಡುವುದು ಮತ್ತು ಸ್ಫೋಟಕಗಳನ್ನು ಇಡುವುದು ಸೇರಿದಂತೆ 48 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದೆ. ಈ ಗುಂಪು ಈಶಾನ್ಯ ಪ್ರದೇಶದ ಇತರ ದಂಗೆಕೋರ ಗುಂಪುಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಅದು ಹೇಳಿದೆ.

ಈ ಅವಧಿಯಲ್ಲಿ, ಸಂಘಟನೆಯ 73 ಕಾರ್ಯಕರ್ತರನ್ನು ಭದ್ರತಾ ಪಡೆಗಳು ಬಂಧಿಸಿದ್ದವು .

"ಎಚ್ಎನ್ಎಲ್‌ಸಿ ತನ್ನ ಎಲ್ಲಾ ಬಣಗಳು, ವಿಭಾಗಗಳು ಮತ್ತು ಮೇಘಾಲಯದ ಮುಂಚೂಣಿ ಸಂಘಟನೆಗಳೊಂದಿಗೆ ಸೇರಿಕೊಂಡು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ದಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿದೆ" ಎಂದು ಗೃಹ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇಂಥ ಸಂಘಟನೆಗಳನ್ನು ತಕ್ಷಣವೇ ನಿಗ್ರಹಿಸದಿದ್ದರೆ ಮತ್ತು ನಿಯಂತ್ರಿಸದಿದ್ದರೆ ಎಚ್ಎನ್ಎಲ್‌ಸಿ ತನ್ನನ್ನು ಮರುಸಂಘಟಿಸಬಹುದು, ತನ್ನ ಕಾರ್ಯಕರ್ತರ ಪಡೆಯನ್ನು ವಿಸ್ತರಿಸಬಹುದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಬಹುದು, ನಾಗರಿಕರು ಮತ್ತು ಭದ್ರತಾ ಪಡೆಗಳು ಮತ್ತು ಆಸ್ತಿಪಾಸ್ತಿಗಳ ಪ್ರಾಣಹಾನಿಗೆ ಕಾರಣವಾಗಬಹುದು. ಆ ಮೂಲಕ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ವೇಗಗೊಳಿಸಬಹುದು ಎಂದು ಸಚಿವಾಲಯ ಹೇಳಿದೆ.

ಮೇಲೆ ತಿಳಿಸಿದ ಕಾರಣಗಳಿಗಾಗಿ, ಎಚ್ಎನ್ಎಲ್ಸಿಯನ್ನು ಅದರ ಬಣಗಳು, ಘಟಕಗಳು ಮತ್ತು ಮುಂಚೂಣಿ ಸಂಘಟನೆಗಳೊಂದಿಗೆ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸುವುದು ಅಗತ್ಯ ಎಂದು ಅದು ಅಭಿಪ್ರಾಯಪಟ್ಟಿದೆ.

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967 (1967ರ 37) ಅಡಿಯಲ್ಲಿ ಎಚ್ಎನ್ಎಲ್ಸಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳವರೆಗೆ ಕಾನೂನುಬಾಹಿರವೆಂದು ಘೋಷಿಸಲು ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Tags:    

Similar News