Wayanad Landslide| ಪಿಣರಾಯಿ ಬಳಿ ಸ್ಟಾಲಿನ್ ಮಾತುಕತೆ, 5 ಕೋಟಿ ರೂ. ನೆರವು

Update: 2024-07-30 10:56 GMT

ಚೆನ್ನೈ, ಜು 30- ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ರಾಜ್ಯದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.

ನೆರೆಯ ರಾಜ್ಯಕ್ಕೆ ಪರಿಹಾರ ಚಟುವಟಿಕೆಗಳಿಗೆ 5 ಕೋಟಿ ರೂ.ಬಿಡುಗಡೆ ಮಾಡುವಂತೆ ತಮಿಳುನಾಡು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಮತ್ತು ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ನೆರವಾಗಲು ರಕ್ಷಣಾ ತಂಡವನ್ನು ಕೇರಳಕ್ಕೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿದರು. 

ವಿಜಯನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸ್ಟಾಲಿನ್, ಪ್ರಕೃತಿ ವಿಕೋಪದಿಂದ ಸಂಭವಿಸಿದ ಜೀವಹಾನಿಗೆ ದುಃಖ ವ್ಯಕ್ತ ಪಡಿಸಿದರು. ತಮಿಳುನಾಡು ಅಗತ್ಯ ಬೆಂಬಲ ನೀಡುತ್ತದೆ ಎಂದು ಭರವಸೆ ನೀಡಿದರು.

ತಮಿಳುನಾಡು ತಂಡವು ರಾಜ್ಯ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ 20 ಸಿಬ್ಬಂದಿ, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ 20 ಮತ್ತು 10 ವೈದ್ಯರು ಮತ್ತು ದಾದಿಯರನ್ನು ಒಳಗೊಂಡಿರುತ್ತದೆ. ಅವರು ಕೇರಳ ರಕ್ಷಣಾ ತಂಡಗಳೊಂದಿಗೆ ಕೆಲಸ ಮಾಡಲಿದ್ದು, ತಕ್ಷಣ ನೆರೆಯ ರಾಜ್ಯಕ್ಕೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಮಿಳುನಾಡು ರಕ್ಷಣಾ ತಂಡದ ನೇತೃತ್ವವನ್ನು ಹಿರಿಯ ಐಎಎಸ್ ಅಧಿಕಾರಿಗಳಾದ ಜಿ.ಎಸ್. ಸಮೀರನ್ ಮತ್ತು ಜಾನಿ ಟಾಮ್ ವರ್ಗೀಸ್ ವಹಿಸಲಿದ್ದಾರೆ. ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿಯನ್ನು ಜಂಟಿ ನಿರ್ದೇಶಕರು ಮತ್ತು ವಿಪತ್ತು ಪ್ರತಿಕ್ರಿಯೆ ಸಿಬ್ಬಂದಿಯನ್ನು ಪೊಲೀಸ್ ಅಧೀಕ್ಷಕರು ಮುನ್ನಡೆಸುತ್ತಾರೆ.

ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಸ್ಟಾಲಿನ್ ಬರೆದಿದ್ದಾರೆ, ʼವಯನಾಡಿನಲ್ಲಿ ಭಾರೀ ಭೂಕುಸಿತದಿಂದ ಬೆಲೆಬಾಳುವ ಜೀವಗಳಿಗೆ ಹಾನಿ ಆಗಿರುವುದರಿಂದ ಬಹಳ ನೋವಾಗಿದೆ. ಈ ಪ್ರದೇಶದಲ್ಲಿ ಇನ್ನೂ ಅನೇಕ ಜನರು ಸಿಕ್ಕಿಬಿದ್ದಿದ್ದಾರೆ. ಅವರನ್ನು ರಕ್ಷಿಸಲಾಗುತ್ತದೆ ಎಂಬ ಭರವಸೆ ನನಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಸಹೋದರ ರಾಜ್ಯ ಕೇರಳಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡಲು ಸಿದ್ಧವಿದ್ದೇವೆʼ.

Tags:    

Similar News