Baba Ramdev : ತಪ್ಪು ದಾರಿಗೆಳೆಯುವ ಜಾಹೀರಾತು ಪ್ರಕರಣ; ಬಾಬಾ ರಾಮ್‌ದೇವ್‌ ವಿರುದ್ಧ ಜಾಮೀನು ರಹಿತ ವಾರಂಟ್‌

Baba Ramdev : ಫೆಬ್ರವರಿ 15ರಂದು ಅವರ ಹಾಜರಾಗುವಂತೆ ನ್ಯಾಯಾಲಯವು ವಾರಂಟ್ ಹೊರಡಿಸಿದೆ. ಇದಕ್ಕೂ ಮುನ್ನ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯವು ಫೆಬ್ರವರಿ 1 ರಂದು ಹಾಜರಾಗಲು ವಾರಂಟ್ ಹೊರಡಿಸಿತ್ತು.;

Update: 2025-02-02 08:38 GMT
ಬಾಬಾ ರಾಮ್‌ದೇವ್‌

ತಪ್ಪು ದಾರಿಗೆಳೆಯುವ ಜಾಹೀರಾತು ನೀಡಿದ ಪ್ರಕರಣವೊಂದರಲ್ಲಿ ಕೋರ್ಟ್‌ ಮುಂದೆ ಹಾಜರಾಗಲು ವಿಫಲಗೊಂಡ ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದದ ಸಹ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ವಿರುದ್ಧ ಕೇರಳ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ಇಂಗ್ಲಿಷ್ ಮತ್ತು ಮಲಯಾಳಂ ಪತ್ರಿಕೆಗಳಲ್ಲಿ ದಾರಿತಪ್ಪಿಸುವ ವೈದ್ಯಕೀಯ ಜಾಹೀರಾತುಗಳನ್ನು ಪ್ರಕಟಿಸಿದ ಆರೋಪದ ಮೇಲೆ ರಾಮ್‌ದೇವ್‌ ಮತ್ತು ಬಾಲಕೃಷ್ಣ ಮಾಲೀಕತ್ವದ ದಿವ್ಯಾ ಫಾರ್ಮಸಿ ವಿರುದ್ಧ ಕೇರಳ ಡ್ರಗ್ಸ್ ಇನ್‌ಸ್ಪೆಕ್ಟರ್‌ ಪ್ರಕರಣ ದಾಖಲಿಸಿದ್ದರು.

ಪತಂಜಲಿ ಉತ್ಪನ್ನಗಳು ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ಗುಣಪಡಿಸುತ್ತವೆ ಎಂದು ಹೇಳುವ ದಾರಿತಪ್ಪಿಸುವ ಜಾಹೀರಾತು ನೀಡಿದ ಪ್ರಕರಣ ಇದಾಗಿದೆ. ಫೆಬ್ರವರಿ 15ರಂದು ಅವರ ಹಾಜರಾಗುವಂತೆ ನ್ಯಾಯಾಲಯವು ವಾರಂಟ್ ಹೊರಡಿಸಿದೆ. ಇದಕ್ಕೂ ಮುನ್ನ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯವು ಫೆಬ್ರವರಿ 1 ರಂದು ಹಾಜರಾಗಲು ವಾರಂಟ್ ಹೊರಡಿಸಿತ್ತು. ಈ ವೇಳೆ ಅವರು ಹಾಜರಾಗಿರಲಿಲ್ಲ.

ಬಾಬಾ ರಾಮ್‌ದೇವ್‌, ಬಾಲಕೃಷ್ಣ ಮಾಲೀಕತ್ವದ  ಪತಂಜಲಿ ಆಯುರ್ವೇದದ ಭಾಗವಾಗಿರುವ ದಿವ್ಯಾ ಫಾರ್ಮಸಿ ವಿರುದ್ಧ 2024 ರ ಅಕ್ಟೋಬರ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಜನವರಿ 16 ರಂದು ಹಾಜರಾಗುವಂತೆ ನ್ಯಾಯಾಲಯವು ಅವರಿಗೆ ಸಮನ್ಸ್ ನೀಡಿತ್ತು, ಆದರೆ ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲರಾಗಿದ್ದರು.

ವಿಶೇಷವೆಂದರೆ, ಕೇರಳದ ಕೋಯಿಕ್ಕೋಡ್ ಮತ್ತು ಉತ್ತರಾಖಂಡದ ಹರಿದ್ವಾರದ ನ್ಯಾಯಾಲಯಗಳಲ್ಲಿ ಇದೇ ರೀತಿಯ ಪ್ರಕರಣಗಳು ನಡೆಯುತ್ತಿವೆ. ಅಲ್ಲಿ ಅನೇಕ ಬಾರಿ ಸಮನ್ಸ್ ನೀಡಲಾಗಿದೆ. ಆದರೆ ರಾಮ್‌ದೇವ್‌ ಮತ್ತು ಬಾಲಕೃಷ್ಣ ಅಲ್ಲಿಗೂ ಹಾಜರಾಗಿಲ್ಲ .

ಸಂಸ್ಥೆಯಿ ವಿರುದ್ಧ ಕೋಯಿಕ್ಕೋಡ್‌ನಲ್ಲಿ 4, ಪಾಲಕ್ಕಾಡ್‌ನಲ್ಲಿ 3, ಎರ್ನಾಕುಲಂನಲ್ಲಿ 2, ತಿರುವನಂತಪುರಂನಲ್ಲಿ 1 ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ.

ಸುಪ್ರೀಂ ಕೋರ್ಟ್ ಜನವರಿ 15 ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿ, ದಾರಿ ತಪ್ಪಿಸುವ ವೈದ್ಯಕೀಯ ಜಾಹೀರಾತುಗಳನ್ನು ನೀಡುವ   ವ್ಯಕ್ತಿಗಳು ಮತ್ತು ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರೆ ನ್ಯಾಯಾಂಗ ನಿಂದನೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು.

Tags:    

Similar News