Hema committee fallout| ನಾಲ್ಕು ವರ್ಷದಿಂದ ಏನು ಮಾಡುತ್ತಿದ್ದೀರಿ?: ಕೇರಳ ಹೈಕೋರ್ಟ್

ನ್ಯಾ.ಹೇಮಾ ಸಮಿತಿಯ ಸಂಪೂರ್ಣ ವರದಿಯನ್ನು ಎಸ್‌ಐಟಿ ತನಿಖೆಗೆ ಒಪ್ಪಿಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಘಟನೆ ಬಗ್ಗೆ ಮಾಧ್ಯಮಗಳು ವರದಿ ಮಾಡುವುದನ್ನು ತಡೆಯುವುದಿಲ್ಲ ಎಂದು ತಿಳಿಸಿದೆ.;

Update: 2024-09-10 07:06 GMT

ನ್ಯಾ.ಕೆ. ಹೇಮಾ ಸಮಿತಿಯ ವರದಿಯನ್ನು ಆಧರಿಸಿ, ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರವನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 

ನ್ಯಾ. ಕೆ. ಹೇಮಾ ಸಮಿತಿಯನ್ನು 2017 ರಲ್ಲಿ ಸ್ಥಾಪಿಸಿದ್ದು, 2019ರಲ್ಲಿ ವರದಿ ನೀಡಿದೆ. ಆದರೆ, ಕಾನೂನು ಹೋರಾಟದ ನಂತರ ಕೆಲವು ಅಂಶಗಳನ್ನು ಮರೆಮಾಚಿದ ವರದಿಯನ್ನು ಆಗಸ್ಟ್ 19 ರಂದು ಬಿಡುಗಡೆ ಮಾಡಲಾಗಿದೆ. ಸಂಪೂರ್ಣ ವರದಿ ಇದ್ದರೂ, ನಾಲ್ಕು ವರ್ಷಗಳಿಂದ ಏನು ಮಾಡುತ್ತಿದ್ದೀರಿ? ಎಂದು ನ್ಯಾಯಾಲಯ ಸರ್ಕಾರವನ್ನು ಕೇಳಿದೆ. 

ಸಂಪೂರ್ಣ ವರದಿ ಎಸ್‌ಐಟಿಗೆ ಒಪ್ಪಿಸಿ: ಸಂಪೂರ್ಣ ವರದಿಯನ್ನು ಮಹಿಳೆಯರ ದೂರುಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ಕ್ಕೆ ಹಸ್ತಾಂತರಿಸಬೇಕು. ಘಟನೆ ಬಗ್ಗೆ ಮಾಧ್ಯಮಗಳು ವರದಿ ಮಾಡುವುದನ್ನು ತಡೆಯುವುದಿಲ್ಲ. ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನೀವು ಏನು ಮಾಡುತ್ತಿದ್ದೀರಿ? ಚಿತ್ರರಂಗ ಮಾತ್ರವಲ್ಲ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವ ನಮ್ಮ ರಾಜ್ಯದಲ್ಲೂ ಪರಿಸ್ಥಿತಿ ಹದಗೆಟ್ಟಿದೆ. ಇದು ಸಣ್ಣ ಸಮಸ್ಯೆಯಲ್ಲ,ʼ ಎಂದು ನ್ಯಾಯಾಲಯ ಹೇಳಿದೆ. 

ರಾಜ್ಯದ ಕ್ರಮಕ್ಕೆ ಅಸಮಾಧಾನ: ನ್ಯಾ.ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ನ್ಯಾ. ಸಿ.ಎಸ್.ಸುಧಾ ಅವರ ವಿಭಾಗೀಯ ಪೀಠವು ವರದಿಯನ್ನು ಆಧರಿಸಿ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಳಿತು. ಎಸ್‌ಐಟಿ ರಚಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಹೇಳಿದರು. ಆದರೆ, ವರದಿ ನಾಲ್ಕು ವರ್ಷದಿಂದ ರಾಜ್ಯದ ಬಳಿ ಇದ್ದರೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ʻಎಫ್‌ಐಆರ್‌ ದಾಖಲಿಸದೆ ಇರುವುದು ಸೇರಿದಂತೆ ರಾಜ್ಯದ ನಿಷ್ಕ್ರಿಯತೆ ಬಗ್ಗೆ ಆತಂಕಿತರಾಗಿದ್ದೇವೆ. ವರದಿ ಸಲ್ಲಿಕೆಯಾಗಿ 4 ವರ್ಷ ಆಗಿದ್ದರೂ, ನೀವು ಏನನ್ನೂ ಮಾಡಿಲ್ಲ,ʼ ಎಂದು ನ್ಯಾಯಾಲಯ ಹೇಳಿದೆ. 

11 ಮಂದಿ ಮೇಲೆ ಎ‌ಫ್‌ ಐಆರ್:‌ ವರದಿ ಪ್ರಕಟವಾದ ನಂತರ ಪೊಲೀಸರು ಕೇರಳ ಚಿತ್ರರಂಗದ 10 ಮಂದಿ ಸೇರಿದಂತೆ 11 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದರಲ್ಲಿ ನಿರ್ದೇಶಕ ರಂಜಿತ್, ನಟ ಸಿದ್ದಿಕ್ ಸೇರಿದಂತೆ ಉದ್ಯಮದ ದೊಡ್ಡ ಹೆಸರುಗಳು ಇವೆ. ನಟ ಮೋಹನ್‌ ಲಾಲ್‌ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಎಎಂಎಂಎ)ಕ್ಕೆ ರಾಜೀನಾಮೆ ನೀಡಿ, ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿದರು. ವರದಿಯು ರಾಜ್ಯದಲ್ಲಿ ಮೀಟೂ ಚಳವಳಿಯ ಎರಡನೇ ಅಲೆಗೆ ಕಾರಣವಾಗಿದೆ.

Tags:    

Similar News