ಯಮುನಾ ಪ್ರವಾಹ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳಿಗೆ ಹೈಕೋರ್ಟ್ ನಿಷೇಧ

Update: 2024-07-19 12:01 GMT

ಹೊಸದಿಲ್ಲಿ, ಜು.19- ಪರಿಸರ ಸೂಕ್ಷ್ಮ ವಲಯವಾಗಿರುವ ಯಮುನಾ ಪ್ರವಾಹ ಪ್ರದೇಶವನ್ನು ಅತಿಕ್ರಮಣದಿಂದ ರಕ್ಷಿಸಬೇಕು. ಧಾರ್ಮಿಕ ಅಥವಾ ಇನ್ನಿತರ ಯಾವುದೇ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು. ನಿರ್ಮಾಣ ಗೊಂಡಿರುವ ಕಟ್ಟಡಗಳನ್ನು ಕೆಡವಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರ ನೇತೃತ್ವದ ವಿಭಾಗೀಯ ಪೀಠವು ಗೀತಾ ಕಾಲೋನಿ ಪ್ರದೇಶದಲ್ಲಿ ನದಿ ಸಮೀಪ ನಿರ್ಮಿಸಿರುವ ಶಿವ ಮಂದಿರವನ್ನು ಕೆಡವಲು ಅನುಮತಿ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಅರ್ಜಿದಾರರಾದ ಪ್ರಾಚೀನ ಶಿವ ಮಂದಿರ ಆವಂ ಅಖಾಡ ಸಮಿತಿ ಬಳಿ ಭೂಮಿಗೆ ಸಂಬಂಧಿಸಿದಂತೆ ʻಒಂದು ತುಣುಕು ದಾಖಲೆʼ ಕೂಡ ಇಲ್ಲಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದರು. 

ʻಅರ್ಜಿದಾರರು ದೇವಾಲಯವು ಯಮುನಾ ನದಿಯ ಪುನಃಸ್ಥಾಪನೆ ಮತ್ತು ಪುನರುಜ್ಜೀವನಗೊಂಡ ಪ್ರದೇಶದಲ್ಲಿದೆ ಎಂಬುದನ್ನು ನಿರಾಕರಿಸಿಲ್ಲ. ಪರಿಸರ ಸೂಕ್ಷ್ಮ ವಲಯದಲ್ಲಿ ಅತಿಕ್ರಮಣ ಭೂಮಿಯಲ್ಲಿ ದೇವಸ್ಥಾನವನ್ನು ಅನಧಿಕೃತ ವಾಗಿ ನಿರ್ಮಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಂಥ ಪ್ರದೇಶದಲ್ಲಿ ಧಾರ್ಮಿಕ ಅಥವಾ ಇತರ ಯಾವುದೇ ಕಟ್ಟಡಗಳಿಗೆ ಅನುಮತಿ ನೀಡಲಾಗುವುದಿಲ್ಲ ಮತ್ತು ನಿರ್ಮಿಸಿದ್ದಲ್ಲಿ ಕೆಡಬೇಕಾಗುತ್ತದೆ. ಯಮುನಾ ನದಿಯ ಪ್ರವಾಹ ಪ್ರದೇಶವನ್ನು ಇಂತಹ ಅತಿಕ್ರಮಣ ಮತ್ತು ಅನಧಿಕೃತ ನಿರ್ಮಾಣಗಳಿಂದ ರಕ್ಷಿಸಬೇಕು,ʼಎಂದು ನ್ಯಾ. ತುಷಾರ್ ರಾವ್ ಗೆಡೆಲಾ ಅವರ ಪೀಠ ಜುಲೈ 10 ರಂದು ಆದೇಶ ನೀಡಿತ್ತು. 

ದೇವಾಲಯವನ್ನು ಒಳಗೊಂಡ ಸಂಪೂರ್ಣ ಕಟ್ಟಡವನ್ನು ಡಿಡಿಎ ಈಗಾಗಲೇ ಕೆಡವಿರುವುದರಿಂದ, ಪರಿಗಣನೆಗೆ ಏನೂ ಉಳಿದಿಲ್ಲ ಎಂದು ಹೈಕೋರ್ಟ್ ಹೇಳಿದೆ. 

ಕೆಡವಲು ಶಿಫಾರಸು ಮಾಡುವ ಮೊದಲು ಧಾರ್ಮಿಕ ಸಮಿತಿ ವಾದ ಮಂಡಿಸಲು ಯಾವುದೇ ಅವಕಾಶ ನೀಡಲಿಲ್ಲ ಎಂದು ಅರ್ಜಿದಾರರು ದೂರಿದ್ದರು. ʻಯಾವುದೇ ರೀತಿ ನೋಡಿದರೂ ದೇವಾಲಯವನ್ನು ಅಕ್ರಮವಾಗಿ ನಿರ್ಮಿಸ ಲಾಗಿದೆ. ಇಂಥ ಅನಧಿಕೃತ ನಿರ್ಮಾಣಗಳನ್ನು ಕೆಡವಲು ಡಿಡಿಎಗೆ ಅಧಿಕಾರವಿದೆʼ ಎಂದು ನ್ಯಾಯಾಲಯ ಹೇಳಿದೆ.

ಮೇ 29 ರಂದು ನ್ಯಾಯಾಲಯ, ʻಶಿವನನ್ನು ಯಾರೂ ರಕ್ಷಿಸುವ ಅಗತ್ಯವಿಲ್ಲ.ಯಮುನಾ ನದಿ ಪಾತ್ರ ಮತ್ತು ಪ್ರವಾಹ ಬಯಲು ಪ್ರದೇಶಗಳ ಅತಿಕ್ರಮಣ ಮತ್ತು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿದರೆ ಸಂತೋಷವಾಗುತ್ತದೆ,ʼ ಎಂದು ಹೇಳಿತ್ತು.

Tags:    

Similar News