ಜಿ7 ಶೃಂಗಸಭೆ: ಫ್ರೆಂಚ್ ಅಧ್ಯಕ್ಷ, ಬ್ರಿಟನ್ ಪ್ರಧಾನಿ ಭೇಟಿ ಮಾಡಿದ ಮೋದಿ

ಮೂರನೇ ಅವಧಿಯಲ್ಲಿ ಪ್ರಧಾನಿ ಮೋದಿಯವರ ಮೊದಲ ವಿದೇಶ ಪ್ರವಾಸ ಇದಾಗಿದೆ.;

Update: 2024-06-14 12:07 GMT
ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಶುಕ್ರವಾರ (ಜೂನ್ 14) ಭೇಟಿಯಾಗಿ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಿಕೆ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು.

ದಕ್ಷಿಣ ಇಟಲಿಯ ಪಟ್ಟಣ ಬೋರ್ಗೋ ಎಗ್ಜಾನಿಯಾದಲ್ಲಿ ಉಭಯ ನಾಯಕರು ಭೇಟಿಯಾದರು. ಮೂರನೇ ಬಾರಿ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಿ ಮೋದಿಯವರ ಮೊದಲ ವಿದೇಶ ಪ್ರವಾಸ ಇದಾಗಿದೆ. ಜನವರಿಯಲ್ಲಿ ನಡೆದ 75 ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಫ್ರೆಂಚ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಾಗ, ಉಭಯ ನಾಯಕರ ಭೇಟಿ ನಡೆದಿತ್ತು. ಈ ಭೇಟಿಯಲ್ಲಿ ದ್ವಿಪಕ್ಷೀಯ ಸಹಕಾರ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಗಾಗಿ ಮುನ್ನೋಟವನ್ನು ಪುನರುಚ್ಚರಿಸಿದರು.

ಹೊರೈಜಾನ್ 2047 ರ ಮಾರ್ಗಸೂಚಿಯು ಭಾರತದ ಸ್ವಾತಂತ್ರ್ಯದ ಶತಮಾನೋತ್ಸವ ವರ್ಷವಾದ 2047 ಕ್ಕೆ ದ್ವಿಪಕ್ಷೀಯ ಸಂಬಂಧದ ಮಹತ್ವಾಕಾಂಕ್ಷಿ ಮತ್ತು ವಿಶಾಲ ವ್ಯಾಪ್ತಿಯ ಮುನ್ನೋಟವನ್ನು ಒಳಗೊಂಡಿದೆ.

ಬ್ರಿಟನ್ ಪ್ರಧಾನಿ ಭೇಟಿ: ಪ್ರಧಾನಿ ಮೋದಿ ಅವರು ಬ್ರಿಟಿಷ್ ಸಹವರ್ತಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿದರು. ಕಳೆದ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಸುನಕ್ ಮತ್ತು ಮೋದಿ ಕೊನೆಯದಾಗಿ ಭೇಟಿಯಾಗಿದ್ದರು. ದ್ವಿಪಕ್ಷೀಯ ಸಂಬಂಧಗಳು ಮತ್ತು ಸಾಮಾನ್ಯ ಹಿತಾಸಕ್ತಿಯ ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದು ನಂಬಲಾಗಿದೆ. ಕಳೆದ ಭೇಟಿಯಲ್ಲಿ ಎಫ್‌ಟಿಎ ಮಾತುಕತೆಗಳನ್ನು ಮುಂದುವರಿಸಲು ಒಪ್ಪಿಕೊಂಡಿದ್ದರು. ಆದರೆ, ಜುಲೈ 4 ರಂದು ಇಂಗ್ಲೆಂಡಿನಲ್ಲಿ ಹೊಸ ಸರ್ಕಾರ ಚುನಾಯಿತರಾದ ನಂತರವಷ್ಟೇ ವ್ಯಾಪಾರ ಮಾತುಕತೆ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. 

ಜನವರಿ 2022 ರಲ್ಲಿ ಪ್ರಾರಂಭವಾದ ಭಾರತ-ಇಂಗ್ಲೆಂಡ್‌ ನಡುವಿನ ಎಫ್‌ಟಿಎ ಮಾತುಕತೆಗಳು ದ್ವಿಪಕ್ಷೀಯ ವ್ಯಾಪಾರವನ್ನು ವರ್ಷಕ್ಕೆ ಸುಮಾರು 38.1 ಶತಕೋಟಿ ಪೌಂಡ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿವೆ.

Tags:    

Similar News