Fengal Cyclone: ಫೆಂಗಲ್ ಚಂಡಮಾರುತದ ಮಳೆ, ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಒಂದೇ ಕುಟುಂಬದ ಏಳು ಮಂದಿ
ತಮಿಳುನಾಡಿನಲ್ಲಿ (Tamil Nadu) ಫೆಂಗಲ್ ಚಂಡಮಾರುತ (Fengal Cyclone) ಅಬ್ಬರಿಸುತ್ತಿದೆ. ಈಗಾಗಲೇ ಚಂಡಮಾರುತದ ಪರಿಣಾಮವಾಗಿ ಹಲವಾರು ಸಂಕಷ್ಟಗಳು ಎದುರಾಗಿದೆ.
ಫೆಂಗಲ್ ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರಸಿದ್ಧ ಅಣ್ಣಾಮಲೈಯರ್ ಬೆಟ್ಟದ ಕೆಳ ಇಳಿಜಾರುಗಳಲ್ಲಿ ಮನೆಗಳ ಮೇಲೆ ಬೃಹತ್ ಬಂಡೆಯೊಂದು ಬಿದ್ದ ಪರಿಣಾಮ ಒಂದೇ ಕುಟುಂಬದ ಏಳು ಜನರು ಸಿಲುಕಿರುವ ಶಂಕೆ ಇದೆ ವ್ಯಕ್ತವಾಗಿದೆ.,
ಪಟ್ಟಣದಲ್ಲಿ ಭಾರಿ ಮಳೆಯಾಗುತ್ತಿದ್ದು ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಿ.ಭಾಸ್ಕರ ಪಾಂಡಿಯನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
"ಬೆಟ್ಟದ ಕೆಳ ಇಳಿಜಾರುಗಳಲ್ಲಿರುವ ಗುಡಿಸಲುಗಳ ಮೇಲೆ ದೊಡ್ಡ ಬಂಡೆಗಳ ಬಿದ್ದಿವೆ. ಭಾರಿ ಮಳೆಯಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಗಳ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
5ರಿಂದ7 ಜನರು ಸಿಕ್ಕಿಬಿದ್ದಿದ್ದಾರೆ ಎಂದು ನಮಗೆ ತಿಳಿದಿದೆ. ಕತ್ತಲು ಮತ್ತು ಮಳೆಯಾಗುತ್ತಿರುವುದರಿಂದ ಸ್ಪಷ್ಟ ಚಿತ್ರಣ ನೀಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
ಸತತ ಮಳೆ
ತಮಿಳುನಾಡಿನಲ್ಲಿ (Tamil Nadu) ಫೆಂಗಲ್ ಚಂಡಮಾರುತ (Fengal Cyclone) ಅಬ್ಬರಿಸುತ್ತಿದೆ. ಈಗಾಗಲೇ ಚಂಡಮಾರುತದ ಪರಿಣಾಮವಾಗಿ ಹಲವಾರು ಸಂಕಷ್ಟಗಳು ಎದುರಾಗಿದ್ದು, ಜನರು ಮನೆ ಕಳೆದುಕೊಂಡು ನಿರಾಶ್ರಿತ ಶಿಬಿರಗಳತ್ತ ತೆರಳುತ್ತಿದ್ದಾರೆ.
ಕೇರಳಕ್ಕೆ ಫೆಂಗಲ್ ಎಂಟ್ರಿ
ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಅಬ್ಬರಿಸಿದ್ದ ಚಂಡಮಾರುತ ಇದೀಗ ಕೇರಳಕ್ಕೆ ಎಂಟ್ರಿ ಕೊಟ್ಟಿದೆ. ಈಗಾಗಲೇ ಕೇರಳದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ರಾಜ್ಯದಲ್ಲೂ ಮಳೆ
ನೆರೆಯ ರಾಜ್ಯಕ್ಕೆ ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಬೆಂಗಳೂರಿಗೂ ತಟ್ಟಿದೆ. ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಭಾನುವಾರ ಇಡೀ ದಿನ ಮಳೆ ಸುರಿದಿದೆ. ಭಾನುವಾರ ಮಧ್ಯಾಹ್ನದ ನಂತರವಂತೂ ಬಿಡುವುಕೊಡದೇ ಮಳೆ ಸುರಿದಿದ್ದು, ಸೋಮವಾರ ಮುಂಜಾನೆಯೂ ಮಳೆಯಾಗುತ್ತಿದೆ. ಸೈಕ್ಲೋನ್ ಅಬ್ಬರದಿಂದ ಕರಾವಳಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಮುನ್ನಚ್ಚೆರಿಕಾ ಕ್ರಮವಾಗಿ ಕೋಲಾರ, ಮೈಸೂರು ಹಾಗೂ ಚಿಕ್ಕಬಳ್ಳಾಪುರ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆಯನ್ನು ಮಾಡಿದೆ.