ರೈತ ನಾಯಕ ದಲ್ಲೇವಾಲ್ ಉಪವಾಸ ಸತ್ಯಾಗ್ರಹ ಅಂತ್ಯ : ಸುಪ್ರೀಂ ಕೋರ್ಟ್‌ನಿಂದ ಪ್ರಶಂಸೆ
ರೈತರ ಸಮಸ್ಯೆಗಳಿಗೆ ಪರಿಹಾರ ಸಿಗದಂತೆ ಕೆಲವರು ಬಯಸಿದ್ದರು ಎಂಬುದು ನಮಗೆ ಗೊತ್ತು. ನಾವು ದಂತ ಗೋಪುರದಲ್ಲಿ ಕುಳಿತಿಲ್ಲ, ಎಲ್ಲವೂ ನಮಗೆ ತಿಳಿದಿದೆ" ಎಂದು ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.;
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪಂಜಾಬ್‌ನ ರೈತ ಮುಖಂಡ ಜಗ್ಜಿತ್ ಸಿಂಗ್ ದಲ್ಲೇವಾಲ್, ಶುಕ್ರವಾರ (ಮಾರ್ಚ್ 28, 2025) ಬೆಳಗ್ಗೆ ನೀರು ಕುಡಿಯುವ ಮೂಲಕ ತಮ್ಮ ನಿರಶನ ಅಂತ್ಯಗೊಳಿಸಿದ್ದಾರೆ ಎಂದು ಪಂಜಾಬ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಪಂಜಾಬ್ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರನ್ನೊಳಗೊಂಡ ಪೀಠಕ್ಕೆ ಮಾಹಿತಿ ನೀಡಿದ್ದಾರೆ.
ಶಂಭು ಮತ್ತು ಖನೌರಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ವಿಮುಖರಾಗಿದ್ದಾರೆ. ಮುಚ್ಚಲಾಗಿದ್ದ ರಸ್ತೆಗಳು ಮತ್ತು ಹೆದ್ದಾರಿಗಳನ್ನು ಮತ್ತೆ ತೆರವುಗೊಳಿಸಲಾಗಿದೆ ಎಂದೂ ಅವರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. .
ಸುಪ್ರೀಂ ಕೋರ್ಟ್ ದಲ್ಲೇವಾಲ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದು, ಅವರನ್ನು"ಯಾವುದೇ ರಾಜಕೀಯ ಉದ್ದೇಶವಿಲ್ಲದ ನಿಜವಾದ ರೈತ ನಾಯಕ" ಎಂದು ಬಣ್ಣಿಸಿದೆ. ಮುಂದುವರಿದು, "ರೈತರ ಸಮಸ್ಯೆಗಳಿಗೆ ಪರಿಹಾರ ಸಿಗದಂತೆ ಕೆಲವರು ಬಯಸಿದ್ದರು ಎಂಬುದು ನಮಗೆ ಗೊತ್ತು. ನಾವು ದಂತ ಗೋಪುರದಲ್ಲಿ ಕುಳಿತಿಲ್ಲ, ಎಲ್ಲವೂ ನಮಗೆ ತಿಳಿದಿದೆ" ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಪ್ರತಿಭಟನಾ ಸ್ಥಳಗಳ ತೆರವು
ಪಂಜಾಬ್ ಪೊಲೀಸರು ಶಂಭು ಮತ್ತು ಖನೌರಿ ಗಡಿಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಹಾಕಲಾಗಿದ್ದ ಪ್ರತಿಭಟನಾ ಸ್ಥಳಗಳನ್ನು ತೆರವುಗೊಳಿಸಿದ್ದಾರೆ. ತಾತ್ಕಾಲಿಕ ವೇದಿಕೆಗಳನ್ನು ಒಡದು, ಟ್ರಾಲಿಗಳನ್ನು ತೆಗೆದು, ಪ್ರತಿಭಟನೆಗೆ ಬಳಸಲಾಗಿದ್ದ ಇತರ ವಾಹನಗಳನ್ನು ಸ್ಥಳಾಂತರಿಸುವ ಮೂಲಕ ಅವರನ್ನು ತೆರವುಗೊಳಿಸಲಾಗಿದೆ ಎಂದು ಪಂಜಾಬ್ ಸರ್ಕಾರ ಕೋರ್ಟ್‌ಗೆ ಮಾಹಿತಿ ನೀಡಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಒಕ್ಕೂಟಗಳ ಬ್ಯಾನರ್ ಅಡಿಯಲ್ಲಿ ರೈತರು ಫೆಬ್ರವರಿ 13, 2024 ರಿಂದ ಈ ಗಡಿ ಪ್ರದೇಶಗಳಲ್ಲಿ ಪ್ರತಿಭಟನಾ ಶಿಬಿರಗಳನ್ನು ಸ್ಥಾಪಿಸಿದ್ದರು. ಅವರು 'ದೆಹಲಿ ಚಲೋ' ಮೆರವಣಿಗೆಗೆ ಹೊರಟಿದ್ದರೂ ಭದ್ರತಾ ಪಡೆಗಳು ಮುಂದುವರಿಯಲು ಬಿಟ್ಟಿರಲಿಲ್ಲ.
ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು
ರೈತರ ಸಮಸ್ಯೆಗಳನ್ನು ಪರಿಹರಿಸಲು ನೇಮಿಸಲಾಗಿರುವ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಉನ್ನತ-ಶಕ್ತಿ ಸಮಿತಿಗೆ ಪೂರಕ ಸಲ್ಲಿಸುವಂತೆ ಕೋರ್ಟ್ ವಿಚಾರಣೆ ವೇಳೆ ಸೂಚಿಸಿತು. ಜೊತೆಗೆ, ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೂ ಪರಿಸ್ಥಿತಿ ಬಗ್ಗೆ ತಿಳಿಸುವಂತೆ ಹೇಳಿತು.