2020ರ ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್ ಸೇರಿ ಎಲ್ಲಾ ಆರೋಪಿಗಳ ಜಾಮೀನು ಅರ್ಜಿ ವಜಾ
ಮಂಗಳವಾರ ನ್ಯಾಯಮೂರ್ತಿ ನವೀನ್ ಚಾವ್ಲಾ ಮತ್ತು ನ್ಯಾಯಮೂರ್ತಿ ಶೈಲೀಂದರ್ ಕೌರ್ ಅವರ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿತು.;
ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶಗಳನ್ನು ಪ್ರಶ್ನಿಸುವಾಗ, ಇಮಾಮ್, ಖಾಲಿದ್ ಮತ್ತು ಇತರರು ತಮ್ಮ ದೀರ್ಘಾವಧಿಯ ಪ್ರಕರಣವನ್ನು ಉಲ್ಲೇಖಿಸಿದರು.
2020 ರಲ್ಲಿ ನಡೆದ ದೆಹಲಿ ಗಲಭೆಗೆ ಸಂಬಂಧಿಸಿದ ಪಿತೂರಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜೆಎನ್‌ಯುನ ಮಾಜಿ ವಿದ್ಯಾರ್ಥಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರ ಏಳು ಮಂದಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಮಂಗಳವಾರ (ಸೆಪ್ಟೆಂಬರ್ 2) ತಿರಸ್ಕರಿಸಿದೆ.
ಮಂಗಳವಾರ ನ್ಯಾಯಮೂರ್ತಿ ನವೀನ್ ಚಾವ್ಲಾ ಮತ್ತು ನ್ಯಾಯಮೂರ್ತಿ ಶೈಲೀಂದರ್ ಕೌರ್ ಅವರ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿತು. ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೊಹಮ್ಮದ್ ಸಲೀಂ ಖಾನ್, ಶಿಫಾ ಉರ್ ರೆಹಮಾನ್, ಅಥರ್ ಖಾನ್, ಮೀರನ್ ಹೈದರ್, ಅಬ್ದುಲ್ ಖಾಲಿದ್ ಸೈಫಿ ಮತ್ತು ಗುಲ್ಫಿಶಾ ಫಾತಿಮಾ ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತು.
2020ರಿಂದ ಜೈಲಿನಲ್ಲಿರುವ ಆರೋಪಿಗಳು
ನ್ಯಾಯಾಲಯದಲ್ಲಿ ವಿಚಾರಣೆಯ ಸಮಯದಲ್ಲಿ, ಉಮರ್ ಖಾಲಿದ್ ಮತ್ತು ಇತರರ ಪರವಾಗಿ ಹಾಜರಾದ ವಕೀಲರು ತಮ್ಮ ಕಕ್ಷಿದಾರರು ನಿರಪರಾಧಿಗಳು ಎಂದು ವಾದಿಸಿದರು. ಆದರೆ, ಹೈಕೋರ್ಟ್ ಈ ವಾದಗಳನ್ನು ತಿರಸ್ಕರಿಸಿ, ಈ ಹಂತದಲ್ಲಿ ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಪ್ರತಿವಾದಿಗಳು ಸ್ಪಷ್ಟಪಡಿಸಿದ್ದಾರೆ.
'ಚೆನ್ನಾಗಿ ಯೋಚಿಸಿ ರೂಪಿಸಿದ ಪಿತೂರಿ'
ಪ್ರಾಸಿಕ್ಯೂಷನ್ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಇದು ಸ್ವಯಂಪ್ರೇರಿತ ಗಲಭೆ ಅಲ್ಲ, ಬದಲಾಗಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡುವ ಗುರಿಯೊಂದಿಗೆ ಮುಂಚಿತವಾಗಿ ರೂಪಿಸಿದ ಪಿತೂರಿ” ಎಂದು ವಾದಿಸಿದರು. ನೀವು ರಾಷ್ಟ್ರದ ವಿರುದ್ಧ ಏನಾದರೂ ಮಾಡಿದರೆ, ಖುಲಾಸೆಯಾಗುವವರೆಗೂ ಜೈಲಿನಲ್ಲಿರಬೇಕಾಗುತ್ತದೆ” ಎಂದು ಹೇಳಿದರು.
ಇದಕ್ಕೆ ವಿರುದ್ಧವಾಗಿ ಇಮಾಮ್ ಅವರ ವಕೀಲರು, ಅವರು ಯಾವುದೇ ಅಶಾಂತಿಗೆ ಕರೆ ನೀಡಿಲ್ಲ ಹಾಗೂ ಸಹ-ಆರೋಪಿಗಳೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ಹೇಳಿದರು.
UAPA ಅಡಿಯಲ್ಲಿ ಪ್ರಕರಣ
ಫೆಬ್ರವರಿ 2020 ರಲ್ಲಿ ದೆಹಲಿಯಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಭುಗಿಲೆದ್ದಿತು ಎಂಬುದು ಗಮನಿಸಬೇಕಾದ ಸಂಗತಿ. ಈ ಹಿಂಸಾಚಾರದ ಹಿಂದಿನ ಮಾಸ್ಟರ್ ಮೈಂಡ್‌ಗಳು ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಎಂದು ದೆಹಲಿ ಪೊಲೀಸರು ಹೆಸರಿಸಿದ್ದರು. ಪೊಲೀಸರು ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಅಂದರೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಗಲಭೆಯಲ್ಲಿ 53 ಜನರು ಮೃತಪಟ್ಟಿದ್ದು, 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಲಭೆಗಳು CAA ಮತ್ತು NRC ವಿರುದ್ಧ ನಡೆದ ಪ್ರತಿಭಟನೆಗಳು ಹತೋಟಿ ಮೀರಿತ್ತು.
ಇಮಾಮ್ ಅವರನ್ನು 2020ರ ಆಗಸ್ಟ್ 25ರಂದು ಬಂಧಿಸಲಾಯಿತು. ಅವರು ಹಾಗೂ ಇತರರು, ತಮ್ಮ ದೀರ್ಘಾವಧಿಯ ಸೆರೆವಾಸ ಹಾಗೂ ಇತರ ಸಹ-ಆರೋಪಿಗಳಿಗೆ ಜಾಮೀನು ಸಿಕ್ಕಿರುವ ಸಮಾನತೆಯನ್ನು ಉಲ್ಲೇಖಿಸಿ ನ್ಯಾಯಾಲಯವನ್ನು ಮನವಿ ಮಾಡಿದ್ದರು.
"ಖಾಲಿದ್, ಇಮಾಮ್ ಮತ್ತು ಇತರರ ಭಾಷಣಗಳು CAA–NRC, ಬಾಬರಿ ಮಸೀದಿ, ತ್ರಿವಳಿ ತಲಾಖ್ ಮತ್ತು ಕಾಶ್ಮೀರದ ಉಲ್ಲೇಖಗಳ ಮೂಲಕ ಭಯ ಹುಟ್ಟಿಸುವ ಪ್ರಯತ್ನ ಮಾಡಿದ್ದವು. ಇಂತಹ ಗಂಭೀರ ಅಪರಾಧಗಳಲ್ಲಿ ಜಾಮೀನು ನಿಯಮ, ಜೈಲು ಅಪವಾದ” ಎಂಬ ತತ್ವ ಅನ್ವಯಿಸುವುದಿಲ್ಲ ಎಂದು ಪೊಲೀಸರು ವಾದಿಸಿದರು. ಜೊತೆಗೆ, ತ್ವರಿತ ವಿಚಾರಣೆಯ ಹಕ್ಕು ಉಚಿತ ಪಾಸ್ ಆಗಲಾರದು ಎಂದು ಪ್ರತಿಪಾದಿಸಿದರು.