ಚೆನ್ನೈನಲ್ಲಿ ಮೇಘಸ್ಫೋಟ: ಕುಂಭದ್ರೋಣ ಮಳೆಗೆ ಜನಜೀವನ ಅಸ್ತವ್ಯಸ್ತ, ವಿಮಾನಗಳ ಮಾರ್ಗ ಬದಲಾವಣೆ
ಮನಾಲಿಯಲ್ಲಿ 27 ಸೆಂ.ಮೀ ಮೀಟರ್ ಮಳೆಯಾಗಿದ್ದರೆ, ನ್ಯೂ ಮನಾಲಿ ಟೌನ್ನಲ್ಲಿ 26 ಸೆಂ.ಮೀ ಮಳೆಯಾಗಿದೆ. ವಿಮ್ಕೋ ನಗರ: 23 ಸೆಂ.ಮೀ ಮಳೆಯಾಗಿದೆ.;
ಶನಿವಾರ ರಾತ್ರಿ ಸಂಭವಿಸಿದ ಮೇಘಸ್ಫೋಟದ ಪರಿಣಾಮ, ಚೆನ್ನೈ ನಗರದಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಚೆನ್ನೈ ಭಾಗದಲ್ಲಿ, ಕುಂಭದ್ರೋಣ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದಾಗಿ, ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಹಲವು ವಿಮಾನಗಳನ್ನು ಬೆಂಗಳೂರಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಪ್ರಾದೇಶಿಕ ಹವಾಮಾನ ಕೇಂದ್ರದ ಪ್ರಕಾರ, ಶನಿವಾರ ರಾತ್ರಿ 10 ರಿಂದ 12 ಗಂಟೆಯ ನಡುವೆ, ಉತ್ತರ ಚೆನ್ನೈನಲ್ಲಿ ಅತಿ ಭಾರಿ ಮಳೆಯಾಗಿದೆ. ಮನಾಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಘಸ್ಫೋಟ ಸಂಭವಿಸಿದ್ದರಿಂದ, ಈ ಭಾಗದಲ್ಲಿ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ದಾಖಲೆಯ ಪ್ರಮಾಣದ ಮಳೆಯಾಗಿದೆ.
ಮನಾಲಿಯಲ್ಲಿ 27 ಸೆಂ.ಮೀ ಮೀಟರ್ ಮಳೆಯಾಗಿದ್ದರೆ, ನ್ಯೂ ಮನಾಲಿ ಟೌನ್ನಲ್ಲಿ 26 ಸೆಂ.ಮೀ ಮಳೆಯಾಗಿದೆ. ವಿಮ್ಕೋ ನಗರ: 23 ಸೆಂ.ಮೀ ಮಳೆಯಾಗಿದೆ. ಮನಾಲಿ ಪ್ರದೇಶದಲ್ಲಿ ರಾತ್ರಿ 10 ರಿಂದ 11 ಗಂಟೆಯ ನಡುವೆ 106.2 ಮಿ.ಮೀ ಮತ್ತು 11 ರಿಂದ 12 ಗಂಟೆಯ ನಡುವೆ 126.6 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತನ್ನ ಬುಲೆಟಿನ್‌ನಲ್ಲಿ ತಿಳಿಸಿದೆ.
ವಿಮಾನಗಳ ಮಾರ್ಗ ಬದಲಾವಣೆ
ಭಾನುವಾರ ಮುಂಜಾನೆ, ಭಾರಿ ಮಳೆಯಿಂದಾಗಿ, ಚೆನ್ನೈನಲ್ಲಿ ಇಳಿಯಬೇಕಾಗಿದ್ದ ಬೆಂಗಳೂರು, ದೆಹಲಿ, ಫ್ರಾನ್ಸ್ ಮತ್ತು ಮಂಗಳೂರಿನಿಂದ ಆಗಮಿಸುತ್ತಿದ್ದ ವಿಮಾನಗಳನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ನಂತರ, ಚೆನ್ನೈನಲ್ಲಿ ಮಳೆಯ ಅಬ್ಬರ ಕಡಿಮೆಯಾದ ಬಳಿಕ, ಪ್ರಯಾಣಿಕರನ್ನು ಬೇರೆ ಬೇರೆ ವಿಮಾನಗಳ ಮೂಲಕ ಬೆಂಗಳೂರಿನಿಂದ ಚೆನ್ನೈಗೆ ವಾಪಸ್ ಕರೆತರಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮುಂದಿನ 24 ಗಂಟೆಗಳಲ್ಲಿ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.