NEET UG 2024| ಜಾರ್ಖಂಡ್‌ ನ 6 ಮಂದಿ ಬಂಧನ

ಬಂಧಿತರ ಮಂಪರು ಪರೀಕ್ಷೆ ಮತ್ತು ಮಿದುಳಿನ ಮ್ಯಾಪಿಂಗ್ ಪರೀಕ್ಷೆ ನಡೆಸುವ ಸಾಧ್ಯತೆ ಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.;

Update: 2024-06-22 13:47 GMT

ನೀಟ್‌ ಯುಜಿ-2024  ಪೇಪರ್ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ (ಇಒಯು), ಪರೀಕ್ಷೆಯ ಉಲ್ಲೇಖಿತ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಂಡಿದ್ದು,ಇವುಗಳನ್ನು ಪಾಟ್ನಾದಲ್ಲಿ ವಶಪಡಿಸಿಕೊಂಡ ದಾಖಲೆಗಳೊಂದಿಗೆ ತಾಳೆ ನೋಡುವುದಾಗಿ ಹೇಳಿದೆ. 

ಪ್ರಕರಣದಲ್ಲಿ ಬಂಧಿತರಾಗಿರುವ ಕೆಲವು ಆರೋಪಿಗಳ ಮಂಪರು ಪರೀಕ್ಷೆ ಮತ್ತು ಮಿದುಳಿನ ಮ್ಯಾಪಿಂಗ್ ಪರೀಕ್ಷೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮೇ ತಿಂಗಳಲ್ಲಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತು ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಮಾಡಬಹುದು ಎಂದು ಪೊಲೀಸರು ಹೇಳಿದ್ದಾರೆ.

ಇಡಿಯಿಂದ ತನಿಖೆ ಸಾಧ್ಯತೆ: ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕದ ಉನ್ನತ ಅಧಿಕಾರಿಗಳು ದೆಹಲಿಗೆ ಭೇಟಿ ನೀಡಿ, ಕೇಂದ್ರ ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಇತರ ಸಂಬಂಧಿತ ವಿಭಾಗಗಳೊಂದಿಗೆ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಿದರು.

ʻಇಒಯುನ ಎಫ್‌ಐಆರ್ ಆಧರಿಸಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಇಡಿ ತನಿಖೆ ನಡೆಸಬಹುದು. ಆನಂತರ ಕೇಂದ್ರೀಯ ಏಜೆನ್ಸಿಯು ಶಂಕಿತರಿಗೆ ಸೇರಿದ ಆಸ್ತಿಗಳನ್ನು ಲಗತ್ತಿಸುವ ಪ್ರಕ್ರಿಯೆ ಪ್ರಾರಂಭಿಸುತ್ತದೆ, ʼಎಂದು ಆರ್ಥಿಕ ಅಪರಾಧಗಳ ಘಟಕದ ಮತ್ತೊಂದು ಮೂಲ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರದ ಮಾಜಿ ಡಿಜಿಪಿ ಅಭಯಾನಂದ್ ಅವರು,ʻನೀಟ್-ಯುಜಿ 2024 ಪರೀಕ್ಷೆಯಲ್ಲಿ ಗಂಭೀರ ಅಪರಾಧ ನಡೆದಿದೆ ಎಂಬುದರಲ್ಲಿ ಸಂದೇಹವಿಲ್ಲ.ಪ್ರಕರಣದಲ್ಲಿ ಕಪ್ಪುಹಣ ಭಾಗಿಯಾಗಿರುವುದರಿಂದ ಪಿಎಂಎಲ್‌ಎಯ ನಿಬಂಧನೆಗಳ ಅಡಿಯಲ್ಲಿ ತನಿಖೆ ನಡೆಸಬೇಕು,ʼ ಎಂದು ಹೇಳಿದ್ದಾರೆ.

ನೀಟ್-ಯುಜಿ 2024 ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತನಿಖೆಯ ಭಾಗವಾಗಿ ಇಒಯು ಕಳೆದ ತಿಂಗಳು 13 ಜನರನ್ನು ಬಂಧಿಸಿತ್ತು. ಏತನ್ಮಧ್ಯೆ, ಬಿಹಾರ ಪೊಲೀಸರು ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಆರು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ದೇವಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಏಮ್ಸ್ ದಿಯೋಘರ್ ಬಳಿಯ ಮನೆಯೊಂದರಿಂದ ಅವರನ್ನು ಬಂಧಿಸಲಾಗಿದೆ. ಶಂಕಿತರನ್ನು ಬಿಹಾರಕ್ಕೆ ಕರೆದೊಯ್ಯಲಾಗಿದೆ ಎಂದು ಎಸ್‌ಡಿಪಿಒ (ದಿಯೋಘರ್ ಸದರ್) ರಿತ್ವಿಕ್ ಶ್ರೀವಾಸ್ತವ ತಿಳಿಸಿದರು.

ಶಂಕಿತರು ಜುನು ಸಿಂಗ್ ಎಂಬುವರ ಮನೆಯಲ್ಲಿ ವಾಸಿಸುತ್ತಿದ್ದರು. ಬಿಹಾರದ ನಳಂದ ಜಿಲ್ಲೆಯ ಪರಮ್‌ಜಿತ್ ಸಿಂಗ್ ಅಲಿಯಾಸ್ ಬಿಟ್ಟು, ಚಿಂಟು ಅಲಿಯಾಸ್ ಬಲದೇವ್ ಕುಮಾರ್, ಕಾಜು ಅಲಿಯಾಸ್ ಪ್ರಶಾಂತ್ ಕುಮಾರ್, ಅಜಿತ್ ಕುಮಾರ್, ರಾಜೀವ್ ಕುಮಾರ್ ಅಲಿಯಾಸ್ ಕರು ಮತ್ತು ಪಂಕು ಕುಮಾರ್ ಬಂಧಿತರು ಎಂದು ತಿಳಿಸಿದರು.

Tags:    

Similar News