Axiom-4| ರಾಕೆಟ್ನಲ್ಲಿ ತಾಂತ್ರಿಕ ದೋಷ; ಆಕ್ಸಿಯಮ್-4 ಉಡಾವಣೆ ಮತ್ತೆ ವಿಳಂಬ
ಫಾಲ್ಕನ್ -9 ರಾಕೆಟ್ನಲ್ಲಿ ಆಮ್ಲಜನಕ ಸೋರಿಕೆಯ ಸಮಸ್ಯೆ ಕಂಡುಬಂದಿದೆ. ಅದನ್ನು ಸರಿಪಡಿಸಲು ಎಂಜಿನಿಯರ್ಗಳು ಹೆಚ್ಚಿನ ಸಮಯ ಕೇಳಿದ್ದಾರೆ. ಹಾಗಾಗಿ ಉಡಾವಣೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ.;
ಭಾರತೀಯ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವ ಆಕ್ಸಿಯಮ್ -4 ಬಾಹ್ಯಾಕಾಶ ನೌಕೆಯ ಉಡಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಉಡ್ಡಯನ ಸಂಸ್ಥೆ ಸ್ಪೇಸ್ ಎಕ್ಸ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಪೋಸ್ಟ್ ಸ್ಟ್ಯಾಟಿಕ್ ಫೈರ್ ಬೂಸ್ಟರ್ ತಪಾಸಣೆಯ ಸಮಯದಲ್ಲಿ ಫಾಲ್ಕನ್ -9 ರಾಕೆಟ್ನಲ್ಲಿ ಆಮ್ಲಜನಕ ಸೋರಿಕೆ ಸಮಸ್ಯೆ ಕಂಡು ಬಂದಿತ್ತು. ರಾಕೆಟ್ ದುರಸ್ತಿಗೆ ಎಂಜಿನಿಯರ್ಗಳು ಹೆಚ್ಚಿನ ಸಮಯ ಕೇಳಿರುವ ಹಿನ್ನೆಲೆಯಲ್ಲಿ ಉಡಾವಣೆಯನ್ನು ಮುಂದೂಡಲಾಗಿದೆ. ಶೀಘ್ರದಲ್ಲೇ ಹೊಸ ಉಡಾವಣೆಯ ದಿನಾಂಕ ತಿಳಿಸಲಾಗುವುದು ಎಂದು ಸ್ಪೇಸ್ಎಕ್ಸ್ ಟ್ವೀಟ್ನಲ್ಲಿ ತಿಳಿಸಿದೆ.
ನಾಲ್ಕನೇ ಬಾರಿಗೆ ಉಡಾವಣೆ ಮುಂದೂಡಿಕೆ
ಬಹುನಿರೀಕ್ಷಿತ ಬಾಹ್ಯಾಕಾಶ ಯಾನವನ್ನು ನಾಲ್ಕನೇ ಬಾರಿಗೆ ಮುಂದೂಡಲಾಗಿದೆ. ಈ ಮೊದಲು ಅದರ ಉಡಾವಣಾ ದಿನಾಂಕವನ್ನು ಮೇ 29 ಕ್ಕೆ ನಿಗದಿಪಡಿಸಲಾಗಿತ್ತು. ನಂತರ ಜೂನ್ 8 ಕ್ಕೆ ವಿಸ್ತರಿಸಲಾಯಿತು. ಬಳಿಕ ಉಡಾವಣಾ ದಿನಾಂಕವನ್ನು ಜೂನ್ 10 ರಂದು ಸಂಜೆ 5.30 ಕ್ಕೆ ಬದಲಾಯಿಸಿತ್ತು. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಮತ್ತೆ ಜೂನ್ 11 ಕ್ಕೆ ಮುಂದೂಡಲಾಯಿತು. ಈಗ ನಾಲ್ಕನೇ ಬಾರಿಗೆ ಆಕ್ಸಿಯಮ್ -4 ಉಡಾವಣೆಯನ್ನು ಮತ್ತೆ ಮುಂದೂಡಲಾಗಿದೆ. ಆದರೆ, ಉಡಾವಣೆ ದಿನಾಂಕ ಪ್ರಕಟಿಸಿಲ್ಲ.
ಬಾಹ್ಯಾಕಾಶ ನಿಲ್ದಾಣ ತಲುಪಿದ ಎರಡನೇ ಭಾರತೀಯ
ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಪ್ರಯಾಣಿಸುವ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಪಾತ್ರರಾಗಲಿದ್ದಾರೆ. ಈ ಮೊದಲು ರಷ್ಯಾ ಬಾಹ್ಯಾಕಾಶ ನೌಕೆಯ ಮೂಲಕ ಭಾರತದ ರಾಕೇಶ್ ಶರ್ಮಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಈಗ ಅಮೆರಿಕದ ಬಾಹ್ಯಾಕಾಶ ನೌಕೆಯ ಮೂಲಕ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶ ಯಾನ ಕೈಗೊಂಡರೆ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಭಾಜನರಾಗಲಿದ್ದಾರೆ.
ಕಲ್ಪನಾ ಚಾವ್ಲಾ ಹಾಗೂ ಸುನಿತಾ ವಿಲಿಯಮ್ಸ್ ಅವರು ಗಗನಯಾನ ಕೈಗೊಂಡರೂ ಅವರು ಅಮೆರಿಕ ಮೂಲದ ಭಾರತೀಯರಾಗಿದ್ದರು.