ಜಾಹೀರಾತು ಪ್ರಕರಣ: ರಾಮ್‌ದೇವ್ ಗೆ ಸುಪ್ರೀಂ ತಪರಾಕಿ
ʻಸುಪ್ರೀಂ ಕೋರ್ಟ್ ಮಾತ್ರವಲ್ಲದೆ, ಎಲ್ಲ ನ್ಯಾಯಾಲಯಗಳು ನೀಡುವ ಆದೇಶವನ್ನು ಗೌರವಿಸಬೇಕು.ನೀವು ಆದೇಶವನ್ನು ಧಿಕ್ಕರಿಸಿದ್ದೀರಿʼ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ಹೇಳಿದೆ. ʻನ್ಯಾಯಾಲಯಕ್ಕೆ ನೀಡಿದ ಭರವಸೆಗೆ ಬದ್ಧರಾಗಿರಬೇಕು. ನೀವು ಪ್ರತಿಯೊಂದು ಆದೇಶವನ್ನೂ ಧಿಕ್ಕರಿಸಿದ್ದೀರಿʼ ಎಂದು ಹಾಜರಿದ್ದ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಹೇಳಿತು.;
ಏಪ್ರಿಲ್ 2- ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕರಣದಲ್ಲಿ ಸಮರ್ಪಕ ಅನುಸರಣೆ ಪ್ರಮಾಣಪತ್ರ ಸಲ್ಲಿಸದ ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ (ಮ್ಯಾಜಿಕ್ ರೆಮಿಡೀಸ್) ಆಕ್ಟ್ ʻಪ್ರಾಚೀನʼ ಎಂಬ ಪತಂಜಲಿ ಎಂಡಿ ಹೇಳಿಕೆಯನ್ನುಕೂಡ ನ್ಯಾಯಾಲಯ ತಿರಸ್ಕರಿಸಿದೆ.
ʻಸುಪ್ರೀಂ ಕೋರ್ಟ್ ಮಾತ್ರವಲ್ಲದೆ, ಎಲ್ಲ ನ್ಯಾಯಾಲಯಗಳು ನೀಡುವ ಆದೇಶವನ್ನು ಗೌರವಿಸಬೇಕು.ನೀವು ಆದೇಶವನ್ನು ಧಿಕ್ಕರಿಸಿದ್ದೀರಿʼ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ಹೇಳಿದೆ. ʻನ್ಯಾಯಾಲಯಕ್ಕೆ ನೀಡಿದ ಭರವಸೆಗೆ ಬದ್ಧರಾಗಿರಬೇಕು. ನೀವು ಪ್ರತಿಯೊಂದು ಆದೇಶವನ್ನೂ ಧಿಕ್ಕರಿಸಿದ್ದೀರಿʼ ಎಂದು ಹಾಜರಿದ್ದ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಹೇಳಿತು. ಹಿಂದಿನ ಕ್ಷಮಾಪಣೆ ಮತ್ತು ಮಂಗಳವಾರ ವೈಯಕ್ತಿಕ ಕ್ಷಮೆಯಾಚನೆಯನ್ನುಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು. ʻನಿಮ್ಮ (ಹಿಂದಿನ) ಕ್ಷಮೆಯಾಚನೆಯಿಂದ ನಮಗೆ ಸಂತೋಷವಾಗಿಲ್ಲ. ಕ್ರಮ ಎದುರಿಸಲು ಸಿದ್ಧರಾಗಿರಿʼ ಎಂದು ರಾಮದೇವ್ ಅವರಿಗೆ ಹೇಳಿದೆ.
ʻನಾವು ಕ್ಷಮೆಯಾಚಿಸಲು ಬಯಸುತ್ತೇವೆ ಮತ್ತು ನ್ಯಾಯಾಲಯ ಏನು ಹೇಳಿದರೂ ಅದಕ್ಕೆ ಸಿದ್ಧರಿದ್ದೇವೆʼ ಎಂದು ರಾಮದೇವ್ ಮತ್ತು ಬಾಲಕೃಷ್ಣ ಅವರ ವಕೀಲರು ಹೇಳಿದರು.
ಕೇಂದ್ರದಿಂದ ಅಸಡ್ಡೆ: ʻಅಲೋಪಥಿಯಲ್ಲಿ ಕೋವಿಡ್‌ಗೆ ಯಾವುದೇ ಪರಿಹಾರವಿಲ್ಲ ಎಂದು ಪತಂಜಲಿ ಹೇಳಿದಾಗ ಕೇಂದ್ರ ಏಕೆ ಕಣ್ಣು ಮುಚ್ಚಿಕೊಂಡಿತು?ʼ ಎಂದು ನ್ಯಾಯಾಲಯ ಆಶ್ಚರ್ಯ ವ್ಯಕ್ತಪಡಿಸಿದೆ. ರಾಮ್‌ದೇವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಲ್ಬೀರ್ ಸಿಂಗ್, ವೈಯಕ್ತಿಕ ಉಪಸ್ಥಿತಿ ಮತ್ತು ಅವರ ಬೇಷರತ್ ಕ್ಷಮೆಯಾಚನೆಯನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ʻಏನಾಗಿದೆಯೋ ಅದು ಆಗಬಾರದಿತ್ತುʼ ಎಂದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಕಕ್ಷಿದಾರರ ವಕೀಲರಿಗೆ ಸಹಾಯ ಮಾಡಲು ಮುಂದಾದರು.
ʻಅಫಿಡವಿಟ್ ಸಲ್ಲಿಸಿರುವುದನ್ನು ನೀವು ಖಚಿತಪಡಿಸಿಕೊಳ್ಳಬೇಕುʼ ಎಂದು ನ್ಯಾ.ಕೊಹ್ಲಿಅವರು ಬಾಲಕೃಷ್ಣ ಪರ ವಕೀಲರಿಗೆ ಹೇಳಿದರು.
ಕೊನೆಯ ಅವಕಾಶ: ಅಫಿಡವಿಟ್ ಸಲ್ಲಿಸಲು ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಪೀಠ ಒಂದು ವಾರ ಕಾಲಾವಕಾಶ ನೀಡಿದೆ. ಏಪ್ರಿಲ್ 10 ರಂದು ವಿಚಾರಣೆಗೆ ದಿನ ನಿಗದಿಗೊಳಿಸಿದ್ದು,ಇಬ್ಬರೂ ಹಾಜರಾಗಬೇಕೆಂದು ಸೂಚಿಸಿದೆ.