ಬಾಂಗ್ಲಾದೇಶದಲ್ಲಿ ಮತ್ತಿಬ್ಬರು ಹಿಂದೂ ಸಂತರ ಬಂಧನ; ಮುಂದುವರಿದ ಸಂಘರ್ಷ
ಬಾಂಗ್ಲಾದೇಶ ಸಮ್ಮಿಲಿತಾ ಸನಾತನ ಜಾಗರಣ್ ಜೋಟೆಯ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದ ಚಿನ್ಮಯ್ ದಾಸ್ ಅವರನ್ನು. ರ್ಯಾಲಿಯಲ್ಲಿ ಭಾಗವಹಿಸಲು ಚಟ್ಟೋಗ್ರಾಮ್ಗೆ ತೆರಳುತ್ತಿದ್ದಾಗ ಢಾಕಾದ ಹಜರತ್ ಶಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿದೆ.;
ಬಾಂಗ್ಲಾದೇಶದಲ್ಲಿ ಮತ್ತಿಬ್ಬರು ಹಿಂದೂ ಪುರೋಹಿತರನ್ನು ಬಂಧಿಸಲಾಗಿದೆ ಎಂದು ಇಸ್ಕಾನ್ ಕೋಲ್ಕತಾ ವಕ್ತಾರ ರಾಧಾರಾಮ್ ದಾಸ್ ಶನಿವಾರ ಹೇಳಿದ್ದಾರೆ. ಪಿಟಿಐ ಜೊತೆ ಮಾತನಾಡಿದ ರಾಧಾರಾಮ್, "ಬಾಂಗ್ಲಾದೇಶದಲ್ಲಿ ಇನ್ನೂ ಇಬ್ಬರು ಇಸ್ಕಾನ್ ಸಂತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನನಗೆ ಮಾಹಿತಿ ಬಂದಿದೆ" ಎಂದು ಹೇಳಿದರು.
ಶುಕ್ರವಾರ ರಾತ್ರಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಧಾರಾಮ ದಾಸ್, " ಮತ್ತೊಂದು ಕೆಟ್ಟ ಸುದ್ದಿ ಬಂದಿದೆ. ದೇವಸ್ಥಾನಕ್ಕೆ ಹಿಂದಿರುಗುತ್ತಿದ್ದ ಇಬ್ಬರು ಭಕ್ತರನ್ನು ಬಂಧಿಸಲಾಗಿದೆ. ಚಿನ್ಮಯ ಪ್ರಭು ಅವರ ಕಾರ್ಯದರ್ಶಿ ಕೂಡ ಕಾಣೆಯಾಗಿದ್ದಾರೆ. ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ,ʼʼ ಎಂದು ಬರೆದುಕೊಂಡಿದ್ದಾರೆ.
"ಶ್ರೀ ಶ್ಯಾಮ್ ದಾಸ್ ಪ್ರಭು ಅವರನ್ನು ಇಂದು ಚಟ್ಟೋಗ್ರಾಮ್ ಪೊಲೀಸರು ಬಂಧಿಸಿದ್ದಾರೆ,ʼʼ ಎಂದು ರಾಧಾರಾಮನ್ ಶುಕ್ರವಾರ ಪೋಸ್ಟ್ ಮಾಡಿದ್ದರು. "ಅವರು ಭಯೋತ್ಪಾದಕರಂತೆ ಕಾಣುತ್ತಿದ್ದಾರೆಯೇ?. ಮುಗ್ಧ ಇಸ್ಕಾನ್ ಸಂತರ ಬಂಧನವು ತೀವ್ರ ಆಘಾತಕಾರಿ ಮತ್ತು ಆತಂಕಕಾರಿಯಾಗಿದೆ" ಎಂದು ರಾಧಾರಾಮನ್ ಶನಿವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಧ್ಯಾತ್ಮಿಕ ಗುರು ಚಿನ್ಮಯ್ ದಾಸ್ ಬಂಧನದ ಕೆಲವು ದಿನಗಳ ನಂತರ ಇನ್ನೂ ಮೂವರು ಇಸ್ಕಾನ್ ಸನ್ಯಾಸಿಗಳ ಬಂಧನದ ಸುದ್ದಿ ವರದಿಯಾಗಿದೆ.
ಬಾಂಗ್ಲಾದೇಶ ಸಮ್ಮಿಲಿತಾ ಸನಾತನ ಜಾಗರಣ್ ಜೋಟೆಯ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದ ಚಿನ್ಮಯ್ ದಾಸ್ ಅವರನ್ನು. ರ್ಯಾಲಿಯಲ್ಲಿ ಭಾಗವಹಿಸಲು ಚಟ್ಟೋಗ್ರಾಮ್ಗೆ ತೆರಳುತ್ತಿದ್ದಾಗ ಢಾಕಾದ ಹಜರತ್ ಶಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿದೆ. ಚಟ್ಟೋಗ್ರಾಮ್ ಆರನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿ ಮಂಗಳವಾರ ಜೈಲಿಗೆ ಕಳುಹಿಸಿತ್ತು.
1971ರ ವಿಮೋಚನಾ ಯುದ್ಧದ ಸಮಯದಲ್ಲಿ ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ ಹಿಂದೂಗಳು ಸರಿಸುಮಾರು 22 ಪ್ರತಿಶತದಷ್ಟಿದ್ದರು. ಇದೀಗ ಅವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಅಲ್ಪಸಂಖ್ಯಾತ ಸಮುದಾಯವು ಈಗ ದೇಶದ ಒಟ್ಟು ಜನಸಂಖ್ಯೆಯ ಕೇವಲ 8 ಪ್ರತಿಶತದಷ್ಟಿದೆ. ಇದು ರಾಜಕೀಯ ಹಾಗೂ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದೆ.