ಹಿಂದೂ ದೇವಾಲಯಗಳನ್ನು ಹಿಂದೂಗಳಿಗೆ ಹಸ್ತಾಂತರಿಸಿ: ವಿಶ್ವಪ್ರಸನ್ನ ತೀರ್ಥ ಶ್ರೀ

ಹಿಂದೂ ಧರ್ಮ ಹಾಗೂ ಬ್ರಾಹ್ಮಣರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ಈ ದಬ್ಬಾಳಿಕೆ ನಿಲ್ಲಬೇಕು. ದೇಶದಲ್ಲಿರುವ ಹಿಂದೂ ದೇವಾಲಯಗಳನ್ನು ಹಿಂದೂಗಳಿಗೆ ಹಸ್ತಾಂತರ ಮಾಡಬೇಕು ಎಂದು ಉಡುಪಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಆಗ್ರಹಿಸಿದ್ದಾರೆ.;

Update: 2024-05-09 12:06 GMT
ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಗಳು

ʻದೇಶದಲ್ಲಿರುವ ಹಿಂದೂ ದೇವಾಲಯಗಳನ್ನು ಹಿಂದೂಗಳಿಗೆ ಹಸ್ತಾಂತರ ಮಾಡಬೇಕುʼ ಎಂದು ಉಡುಪಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಆಗ್ರಹಿಸಿದ್ದಾರೆ.

ʻಇತರ ಧರ್ಮದಲ್ಲಿ ಯಾವ ರೀತಿ ಆಯಾ ಧರ್ಮದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆಯೋ ಅದೇ ರೀತಿ ಹಿಂದೂ ದೇವಾಲಯಗಳನ್ನು ಹಿಂದೂಗಳಿಗೆ ಒಪ್ಪಿಸಬೇಕುʼ ಎಂದು ಹೇಳಿದ್ದಾರೆ.

ʻಹಿಂದೂ ಧರ್ಮ ಹಾಗೂ ಬ್ರಾಹ್ಮಣರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ಈ ದಬ್ಬಾಳಿಕೆ ನಿಲ್ಲಬೇಕು. ಸುಪ್ರೀಂ ಕೋರ್ಟ್‌ನ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಇನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮಮಂದಿರವನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿಲ್ಲ. ಸುಪ್ರೀಂ ಕೋರ್ಟ್‌ನ ಆದೇಶದಂತೆ ಹಿಂದೂಗಳ ಟ್ರಸ್ಟ್‌ನಿಂದ ನಿರ್ಮಿಸಲಾಗಿದೆ. ಅಯೋಧ್ಯೆ ರಾಮಮಂದಿರ ಕೆಡವುತ್ತೇನೆ ಎನ್ನುವುದು ಸುಪ್ರೀಂ ಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆ ಆಗುತ್ತದೆ. ಹಲವು ವರ್ಷಗಳ ಹೋರಾಟದ ನಂತರ ರಾಮಮಂದಿರ ನಿರ್ಮಾಣವಾಗಿದೆ. ಶ್ರೀ ರಾಮ ಮಂದಿರವನ್ನು ಮಂದಿರವಾಗಿ ಉಳಿಸಿಕೊಳ್ಳುವುದಕ್ಕೆ ಹಿಂದೂ ಧರ್ಮ ಉಳಿಯಬೇಕು. ರಾಷ್ಟ್ರ, ದೇಶ ಪ್ರೇಮ ಉಳಿಸಬೇಕು ಹಾಗೂ ದೇಶದ ಎಲ್ಲ ಭಾಗದಲ್ಲೂ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆಯಾಗಬೇಕುʼ ಎಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ ಚರ್ಚೆಯಾಗುತ್ತಿರುವ ವಿಷಯ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಟೌನ್​ ​ಕೋಟೆಯಲ್ಲಿರುವ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿಯನ್ನು ನೇಮಿಸಿದೆ ಎಂದು ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿಯು ವಾಗ್ದಾಳಿ ನಡೆಸಿ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿತ್ತು. ಆದರೆ, ಸಮಿತಿಯಲ್ಲಿ ಸರ್ವ ಸಮುದಾಯದ ಸದಸ್ಯರನ್ನು ನೇಮಕಗೊಳಿಸುವುದು ದೇಗುಲದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದ ಬಳಿಕ ಬಿಜೆಪಿ ಪೋಸ್ಟ್‌ ತೆಗೆದಿತ್ತು.

ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವ ಕಾರಣ ಸಮಿತಿ ರಚಿಸುವಂತೆ ಶಾಸಕ ಶರತ್ ಬಚ್ಚೇಗೌಡ ಸರ್ಕಾರಕ್ಕೆ ಮನವಿ ಮಾಡಿದ್ದರು. ಶಾಸಕರ ಮನವಿ ಮೇರೆಗೆ ತಹಶಿಲ್ದಾರ್ 12 ಜನ ಸದಸ್ಯರನ್ನು ನೇಮಕ ಮಾಡಿದ್ದಾರೆ. ಈ 12 ಜನರಲ್ಲಿ ನವಾಜ್​ ಎಂಬ ಓರ್ವ ಮುಸ್ಲಿಂ ವ್ಯಕ್ತಿಯನ್ನು ಆಯ್ಕೆ ಮಾಡಿದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.ಈ ಬೆಳವಣಿಗೆಯ ನಂತರ ರಾಜ್ಯದಲ್ಲಿ ಪರ - ವಿರೋಧ ಚರ್ಚೆ ನಡೆದಿದೆ.  

Tags:    

Similar News