Lok Sabha Election 2024 | ಚುನಾವಣಾ ಅಕ್ರಮ: ರಾಜ್ಯದಲ್ಲಿ ಕೋಟ್ಯಾಂತರ ರೂ. ವಶಕ್ಕೆ

ಚುನಾವಣಾ ಆಯೋಗಕ್ಕೆ ದೂರುಗಳ ಸುರಿಮಳೆ !

Update: 2024-03-26 14:03 GMT
ಹಣ (ಚಿತ್ರ ಕೃಪೆ: pexels )

ಲೋಕಸಭೆ ಚುನಾವಣೆಯ ಸಮಯದಲ್ಲಿ ಅಕ್ರಮ ಹಣ ವರ್ಗಾವಣೆ, ಸೀರೆ ಹಾಗೂ ಬಟ್ಟೆ ಹಂಚಿಕೆ ಸೇರಿದಂತೆ ಚುನಾವಣಾ ಅಕ್ರಮಗಳು ಜೋರಾಗಿದ್ದು, ಪೊಲೀಸರು ಹಾಗೂ ಚುನಾವಣಾ ವಿಚಕ್ಷಣದಳ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಇಲ್ಲಿಯ ವರೆಗೆ ಬರೋಬ್ಬರಿ 1.30 ಕೋಟಿಗೂ ಹೆಚ್ಚಿನ (1,30,34,469) ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ 2024ಕ್ಕೆ ನೀತಿ ಸಂಹಿತೆ ಜಾರಿಯಾದ ಮೇಲೆ ಚುನಾವಣಾ ಅಕ್ರಮಗಳೂ ಹೆಚ್ಚಾಗುತ್ತಿದ್ದು, ಇಲ್ಲಿಯ ವರೆಗೆ 1.30 ಕೋಟಿಗೂ ಹೆಚ್ಚಿನ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟಾರೆ ಪ್ರಗತಿ ಹಂತದಲ್ಲಿರುವ ಜಪ್ತಿ ಮೊತ್ತವೂ ಸೇರಿ 48,56,59,844 ರೂ. ಆಗಿದೆ. ಚುನಾವಣಾ ಸಮಯದಲ್ಲಿ ಅಕ್ರಮ ಹಣ ವರ್ಗಾವಣೆಯಲ್ಲದೇ ಮಾದಕ ವಸ್ತುಗಳು, ಉಚಿತ ಉಡುಗೊರೆ, ಚಿನ್ನ, ಬೆಳ್ಳಿ ಹಾಗೂ ವಜ್ರವೂ ಸೇರಿದೆ.

ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಹಾಗೂ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಹಣ, ಮದ್ಯ, ಡ್ರಗ್ಸ್ ಬೆಲೆ ಬಾಳುವ ಲೋಹ ಮತ್ತು ಉಚಿತ ಉಡುಗೊರ (Freebies)ಗೆ ಸಂಬಂಧಿಸಿದಂತೆ 760 ಎಫ್ಐಆರ್ ದಾಖಲಾಗಿದೆ. 89,624 ಶಸ್ತ್ರಾಸ್ತ್ರಗಳನ್ನು ಠೇವಣೆ ಇರಿಸಿಕೊಳ್ಳಲಾಗಿದ್ದು, 850 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 14 ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.

ಅಬಕಾರಿ ಇಲಾಖೆ ಘೋರ ಅಪರಾಧ ಅಡಿಯಲ್ಲಿ 765 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಪರವಾನಗಿ ಉಲ್ಲಂಘನೆ ಅಡಿಯಲ್ಲಿ 597 ಪ್ರಕರಣ ದಾಖಲಿಸಲಾಗಿದೆ. NDPS ಅಡಿಯಲ್ಲಿ 43 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15(a) ಅಡಿಯಲ್ಲಿ 2,636 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ 452 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಿರ ಕಣಾವಲು ತಂಡದ ವತಿಯಿಂದ 20,00,000 ಲಕ್ಷ ಮೊತ್ತದ ನಗದನ್ನು ಬಳ್ಳಾರಿ ಲೋಕಸಭಾ ಕ್ಷೇತ್ರ ಡಿ. ಸಿದ್ಧಾಪುರ ಚೆಕ್ಪೋಸ್ಟ್ (ವಿಜಯನಗರ)ದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇನ್ನು ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15,36,000 ಮೌಲ್ಯದ ಸೀರೆಗಳನ್ನು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕರು ಸೇರಿದಂತೆ ಒಟ್ಟು 5,957 ದೂರು ಕರೆಗಳನ್ನು ವಿಲೇವಾರಿ ಮಾಡಲಾಗಿದ್ದು, ಹೆಚ್ಚುವರಿಯಾಗಿ NGRS ಪೋರ್ಟಲ್‌ನಲ್ಲಿ 4,533 ಸಾರ್ವಜನಿಕರಿಂದ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಇವುಗಳಲ್ಲಿ 4,238 ದೂರುಗಳನ್ನು ವಿಲೆವಾರಿ ಮಾಡಲಾಗಿದೆ. CVIGIL ಅಪ್ಲಿಕೇಶನ್ ಮೂಲಕ 4,924 ದೂರುಗಳನ್ನು ಸ್ವೀಕರಿಸಲಾಗಿದೆ. ಸ್ವೀಕರಿಸಿದ ಪ್ರಮುಖ 2,888 ದೂರುಗಳು ಅನುಮತಿಯಿಲ್ಲದ ಪೋಸ್ಟರ್‌ಗಳು ಹಾಗೂ ಬ್ಯಾನರ್‌ಗಳಿಗೆ ಸಂಬಂಧಿಸಿದಂತೆಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇ ಮೇಲ್ ಮೂಲಕ ಸ್ವೀಕರಿಸಿದ 58 ದೂರುಗಳು ಮತ್ತು ಪತ್ರಗಳ ಮೂಲಕ ಸ್ವೀಕರಿಸಿದ 174 ದೂರುಗಳು ಸುದ್ದಿ ಪತ್ರಿಕೆಗಳು ಮೂಲಕ ಸ್ವೀಕರಿಸಿದ 8 ದೂರುಗಳು, ಟಿವಿ ಚಾನೆಲ್‌ಗಳ ಮೂಲಕ ಸ್ವೀಕರಿಸಿದ 11 ದೂರುಗಳು ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮ ಮೂಲಕ ಸ್ವೀಕರಿಸಿದ 22 ದೂರುಗಳು ಹೀಗೆ ಒಟ್ಟು ಸ್ವೀಕರಿಸಿದ 273 ದೂರುಗಳ ಪೈಕಿ 273 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

ಇನ್ನು ಸುವಿಧಾ ಅಡಿಯಲ್ಲಿ ಅನುಮತಿಗಳಿಗಾಗಿ, 747 ಅರ್ಜಿಗಳು ಸ್ವೀಕರಿಸಲಾಗಿದೆ. ಅದರಲ್ಲಿ 493 ಅರ್ಜಿಗಳನ್ನು ಅಂಗೀಕರಿಸಲಾಗಿದೆ ಮತ್ತು 149 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 5 ಅರ್ಜಿಗಳು ಪ್ರಗತಿಯಲ್ಲಿದ್ದು, 72 ಅರ್ಜಿಗಳು ಬಾಕಿ ಉಳಿದಿವೆ ಮತ್ತು 28 ಅರ್ಜಿಗಳನ್ನು ರದ್ದು ಮಾಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.  

Tags:    

Similar News