Waqf Assets Dispute | ಜೆಪಿಸಿ ಅಧ್ಯಕ್ಷರ ಭೇಟಿ ರಾಜಕೀಯ ಪ್ರೇರಿತ; ಕಾಂಗ್ರೆಸ್‌ ನಾಯಕರ ವಾಗ್ದಾಳಿ

ರಾಜ್ಯಕ್ಕೆ ಜಂಟಿ ಸಂಸದೀಯ ಸಮಿತಿ ಭೇಟಿ ರಾಜಕೀಯ ಪ್ರೇರಿತವಾಗಿದೆ. ಜಂಟಿ ಸದನ ಸಮಿತಿ ಅಂದರೆ ಏನು?, ಸಮಿತಿಯ ಭೇಟಿ ಅಂದರೆ ಎಲ್ಲಾ ಸದಸ್ಯರು ಬರಬೇಕಲ್ಲವೇ, ಬರೀ ಅಧ್ಯಕ್ಷರು ಮಾತ್ರ ಬಂದಿದ್ದಾರೆ ಅಂದರೆ ಏನರ್ಥ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.;

Update: 2024-11-07 13:43 GMT

ಕರ್ನಾಟಕದ ವಕ್ಫ್ ಆಸ್ತಿ ಇಂಡೀಕರಣ ವಿವಾದ ತೀವ್ರಗೊಂಡಿದೆ. ವಿವಾದಿತ ಜಿಲ್ಲೆಗಳಿಗೆ ಭೇಟಿ ನೀಡಿರುವ ಕೇಂದ್ರ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ವಿರುದ್ಧ ಗುರುವಾರ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಹುಬ್ಬಳ್ಳಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಿ ರೈತರಿಂದ ಅಹವಾಲು ಸ್ವೀಕರಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಕ್ಫ್ ಜಂಟಿ ಸದನ ಸಮಿತಿ ಭೇಟಿ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಜೆಪಿಸಿ ಒಂದು ನಾಟಕ ಕಂಪನಿ. ವಕ್ಫ್ ಜಂಟಿ ಸದನ ಸಮಿತಿ ಅಧ್ಯಕ್ಷರು ಪಕ್ಷದ ಪ್ರಚಾರಕ್ಕಾಗಿ ಬಂದಿದ್ದಾರೆ ಎಂದು ಆರೋಪಿಸಿದರು.

ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಆಗಿರುವ ಪಹಣಿ ತಿದ್ದುಪಡಿಗಳು ಕುರಿತು ಒಮ್ಮೆ ಪರಿಶೀಲಿಸಿ. ಕಾಂಗ್ರೆಸ್‌ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಆಸ್ತಿ ಕಬಳಿಸಲ್ಲ. ನಾವು ರೈತರನ್ನು ಉಳಿಸುತ್ತೇವೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯಕ್ಕೆ ಜಂಟಿ ಸಂಸದೀಯ ಸಮಿತಿ ಭೇಟಿ ರಾಜಕೀಯ ಪ್ರೇರಿತವಾಗಿದೆ. ಜಂಟಿ ಸದನ ಸಮಿತಿ ಅಂದರೆ ಏನು?, ಸಮಿತಿಯ ಭೇಟಿ ಅಂದರೆ ಎಲ್ಲಾ ಸದಸ್ಯರು ಬರಬೇಕಲ್ಲವೇ, ಬರೀ ಅಧ್ಯಕ್ಷರು ಮಾತ್ರ ಬಂದಿದ್ದಾರೆ ಅಂದರೆ ಏನರ್ಥ. ಅವರ ಜೊತೆ ಯಾರಾರು ಇದ್ದಾರೆ. ಬಿಜೆಪಿಯ ಮಾಜಿ ಸಂಸದರಿಗೂ, ಸಮಿತಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ವಕ್ಫ್ ಬೋರ್ಡ್ ಕಿತ್ತುಹಾಕಬೇಕು ಎಂದು ಬಿಜೆಪಿಯವರೇ ಹೇಳುತ್ತಾರೆ. ಒಂದೂವರೆ ವರ್ಷದ ಅವರದ್ದೇ ಸರ್ಕಾರ ರಾಜ್ಯದಲ್ಲಿತ್ತು. ಆಗ ಕತ್ತೆ ಕಾಯುತ್ತಿದ್ದರಾ ಎಂದು ವಾಗ್ದಾಳಿ ನಡೆಸಿದರು.

ಹಾವೇರಿಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿ, ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರ ಭೇಟಿ ಚುನಾವಣಾ ಗಿಮಿಕ್ ಆಗಿದೆ. ಬಿಜೆಪಿಯವರು ಮಾಡಿರುವ ತಪ್ಪನ್ನು ನಮ್ಮ ಮೇಲೆ ಹಾಕಲಾಗುತ್ತಿದೆ. ತಮ್ಮ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ‌

ಕಾಂಗ್ರೆಸ್ ಸರ್ಕಾರ ಯಾವುದೇ ರೈತರನ್ನು ಒಕ್ಕಲೆಬ್ಬಿಸಿಲ್ಲ, ಎಬ್ಬಿಸುವುದೂ ಇಲ್ಲ ಎಂದು ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ನಾಟಕ ಮಾಡಲು ಜಂಟಿ ಸದನ ಸಮಿತಿ ಬಂದಿದೆ. ಮುಗ್ದ ರೈತರನ್ನು ದಿಕ್ಕುತಪ್ಪಿಸುತ್ತಿದೆ. ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ರಾಜ್ಯದ ಉಪ ಚುನಾವಣೆ ಪ್ರಚಾರಕ್ಕಾಗಿ ಜೆಪಿಸಿ ಅಧ್ಯಕ್ಷರು ಬಂದಿದ್ದಾರೆ ಎಂದು ಆರೋಪಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸದನ ಸಮಿತಿ ಅಧ್ಯಕ್ಷರು ಒಬ್ಬರೇ ಭೇಟಿ ನೀಡಿರುವುದು ರಾಜಕೀಯ ಉದ್ದೇಶ ಹೊಂದಿದೆ ಎಂದು ವಾಗ್ದಾಳಿ ನಡೆಸಿದರು.

Tags:    

Similar News