ಕೊಲೆ ಪ್ರಕರಣದ ವಿಚಾರಣೆ; ನಟ ದರ್ಶನ್ಗೆ ಎಚ್ಚರಿಕೆ ಕೊಟ್ಟ ನ್ಯಾಯಾಲಯ!
ಎ1 ಆರೋಪಿ ಪವಿತ್ರಾ ಗೌಡ ಹಾಗೂ ಇನ್ನೂ ಕೆಲವು ಆರೋಪಿಗಳು ಹಾಜರಾಗಿದ್ದರು. ಆದರೆ ನಟ ದರ್ಶನ್ ಅವರಿಗೆ ಬೆನ್ನು ನೋವು ಉಲ್ಬಣಗೊಂಡ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು. ಈ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.;
ನಟ ದರ್ಶನ್
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮಂಗಳವಾರ ವಿಚಾರಣೆಗೆ ಗೈರಾಗಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ‘ವಿಚಾರಣೆ ಇದ್ದಾಗ ಕಡ್ಡಾಯವಾಗಿ ಹಾಜರಾಗಬೇಕು’ ಎಂದು ದರ್ಶನ್ ಪರ ವಕೀಲರಿಗೆ ಎಚ್ಚರಿಕೆ ನೀಡಿದೆ.
ಮಂಗಳವಾರ (ಏಪ್ರಿಲ್ 8) ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಇನ್ನೂ ಕೆಲವು ಆರೋಪಿಗಳು ಹಾಜರಾಗಿದ್ದರು. ಆದರೆ ನಟ ದರ್ಶನ್ ಬೆನ್ನು ನೋವು ಉಲ್ಬಣದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು.
ಈ ವಿಷಯವನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಹೈಕೊರ್ಟ್ ಜಾಮೀನು ಷರತ್ತಿನಲ್ಲಿ ಬೆಂಗಳೂರು ವ್ಯಾಪ್ತಿ ಬಿಟ್ಟು ತೆರಳಲು ಅನುಮತಿ ನೀಡಿತ್ತು ಎಂಬ ಆದೇಶ ಪ್ರತಿಯನ್ನು ನ್ಯಾಯಾಧೀಶರಿಗೆ ವಕೀಲರು ನೀಡಿದರು. ಈ ಸಮಜಾಯಿಷಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ವಿಚಾರಣೆ ವೇಳೆ ಆರೋಪಿಗಳು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದರು.
ವಿಚಾರಣೆಯಲ್ಲಿ ದರ್ಶನ್ ಒಬ್ಬರನ್ನು ಹೊರತುಪಡಿಸಿ ಪವಿತ್ರಾ ಗೌಡ, ನಂದೀಶ್, ಜಗದೀಶ್, ನಾಗರಾಜ್, ವಿನಯ್, ಪವನ್, ಲಕ್ಷ್ಮಣ, ದೀಪಕ್, ಪ್ರದೋಶ್, ಕಾರ್ತಿಕ್ ಕೇಶವ ಮೂರ್ತಿ ಇನ್ನೂ ಕೆಲವರು ಹಾಜರಾಗಿದ್ದರು. ಕೆಲವು ಆರೋಪಿಗಳು, ಪೊಲೀಸರು ವಶಪಡಿಸಿಕೊಂಡಿರುವ ತಮ್ಮ ಮೊಬೈಲ್ಗಳನ್ನು ಮರಳಿಸಬೇಕು ಎಂದು ಮನವಿ ಸಲ್ಲಿಸಿದರು. ಬಳಿಕ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಲಾಯಿತು.
ಪ್ರಕರಣದ ಹಿನ್ನೆಲೆ
ದರ್ಶನ್ ಗೆಳತಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಪೋಸ್ಟ್‌ಗಳನ್ನು ಹಾಕುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಜೂ.8ರ ರಾತ್ರಿ ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ಗೆ ಕರೆತಂದು ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಜೂನ್.9ರಂದು ಸುಮ್ಮನಹಳ್ಳಿಯ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣದ ಎಲ್ಲಾ ಆರೋಪಿಗಳಿಗೆ ಹೈಕೋರ್ಟ್ ಡಿ.13ರಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್ ಅವರು ಕೆಲ ವಾರಗಳ ಕಾಲ ಅಲ್ಲಿಯೇ ಇದ್ದರು. ದರ್ಶನ್ ಹಾಗೂ ಇನ್ನೂ ಕೆಲವರ ಜಾಮೀನು ರದ್ದು ಮಾಡುವಂತೆ ಕೋರಿ ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್, ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದೆ.