The Federal Interview|ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಯಾವುದೇ ಧರ್ಮ, ರಾಜಕೀಯ ವಿಚಾರದ್ದಲ್ಲ; ಯು.ಟಿ.ಖಾದರ್
ಯಾರದ್ದೇ ಆದರೂ ಕೊಲೆ ಸಮರ್ಥನೀಯವಲ್ಲ. ಸುಹಾಸ್ ಶೆಟ್ಟಿ ಹತ್ಯೆ ಮಾಡಿದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಮಂಗಳೂರಿನ ಜನರು ಶಾಂತಿ ಸುವ್ಯವಸ್ಥೆಗೆ ಒತ್ತು ಕೊಡಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮನವಿ ಮಾಡಿದ್ದಾರೆ.;
ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಯಾವುದೇ ರಾಜಕೀಯ ಹಾಗೂ ಧಾರ್ಮಿಕ ವಿಚಾರಕ್ಕೆ ಸಂಬಂಧಪಟ್ಟಿಲ್ಲ. ಆತ ಇಬ್ಬರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅಲ್ಲದೇ ಐದಾರು ಪ್ರಕರಣಗಳಲ್ಲಿ ರೌಡಿಶೀಟರ್ ಆಗಿದ್ದ. ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಖಂಡಿಸಿದ ಅವರು, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಯಾರದ್ದೇ ಆದರೂ ಕೊಲೆ ಸಮರ್ಥನೀಯವಲ್ಲ. ಸುಹಾಸ್ ಶೆಟ್ಟಿ ಹತ್ಯೆ ಮಾಡಿದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಮಂಗಳೂರಿನ ಜನರು ಶಾಂತಿ ಸುವ್ಯವಸ್ಥೆಗೆ ಒತ್ತು ಕೊಡಬೇಕು ಎಂದು ಸಲಹೆ ನೀಡಿದ್ದಾರೆ.
ಬಿಜೆಪಿಯವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ರಾಜಕೀಯವಾಗಿ ಮಾತನಾಡುವುದಿಲ್ಲ. ಇದನ್ನು ಆಡಳಿತ ಪಕ್ಷ ನೋಡಿಕೊಳ್ಳಲಿದೆ. ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸುಹಾಸ್ ಕೊಲೆ ಪ್ರಕರಣ ವೈಯಕ್ತಿಕ ವಿಚಾರ ಅಥವಾ ಯಾವುದೇ ರಾಜಕೀಯ, ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂಬುದನ್ನು ಪೊಲೀಸರು ದೃಢಪಡಿಸಿದ್ದಾರೆ. ಸುಹಾಸ್ ಶೆಟ್ಟಿ ಈ ಹಿಂದೆ ನಡೆದ ಕೀರ್ತಿ ಹಾಗೂ ಫಾಜಲ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಇನ್ನು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದವರ ಪೂರ್ವಾಪರ ತಿಳಿದುಕೊಳ್ಳಲು ಪೊಲೀಸರು ತನಿಖೆ ನಡೆಸಬೇಕು. ಹತ್ಯೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಯಾವ್ಯಾವ ಪ್ರಕರಣಗಳಿವೆ. ಯಾರ ಕೈವಾಡವಿದೆ ಎಂಬುದು ತಿಳಿಯಬೇಕಾಗಿದೆ. ಕೊಲೆಯನ್ನು ರಾಜಕೀಯ, ಧರ್ಮಾಧರಿತವಾಗಿ ಯಾರೂ ತೆಗೆದುಕೊಳ್ಳಬಾರದು. ಯಾರು ಏನೇ ಮಾಡಿದ್ದರೂ ಕೊಲೆ ಮಾಡುವುದಕ್ಕೆ ಅಧಿಕಾರ ಇರುವುದಿಲ್ಲ ಎಂದು ಹೇಳಿದ್ದಾರೆ.
ಮಂಗಳೂರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕಾರ ಕೊಡಬೇಕು. ಕರಾವಳಿ ಜಿಲ್ಲೆ ವಿಶೇಷವಾದ ಹೆಸರಿದೆ. ಶೈಕ್ಷಣಿಕ, ಆರೋಗ್ಯ ಹಾಗೂ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಧಾರ್ಮಿಕ ಪಾವಿತ್ರ್ಯತೆಗೂ ಹೆಸರಾಗಿದೆ. ಅಭಿವೃದ್ಧಿಯಲ್ಲಿ ಬೆಂಗಳೂರು ಬಿಟ್ಟರೆ ಮಂಗಳೂರು ಎರಡನೇ ಸ್ಥಾನದಲ್ಲಿದೆ. ಆದರೆ, ಕೊಲೆ, ಕೋಮುಗಲಭೆ ವಿಚಾರಗಳಿಂದ ಜಿಲ್ಲೆಯನ್ನು ಹಿಂದಕ್ಕೆ ಕೊಂಡೊಯ್ಯಬಾರದು ಎಂದು ಮನವಿ ಮಾಡಿದ್ದಾರೆ.
ಸಮೃದ್ಧ ಜಿಲ್ಲೆಯಾಗಿರುವ ಮಂಗಳೂರಿನಲ್ಲಿ ಈ ರೀತಿಯ ಘಟನೆಗಳ ಬಗ್ಗೆ ನೋವಿದೆ. ಈ ವಿಚಾರಕ್ಕೆ ಸಂಬಂಧಿಸಿ ನೋವು, ಬೇಸರ ಕಡಿಮೆ ಮಾಡುವುದು ರಾಜಕೀಯ ಪಕ್ಷಗಳ ಕರ್ತವ್ಯ. ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಎಲ್ಲರೂ ಸಹಕಾರ ಕೊಡಬಾರದು. ಬಿಕ್ಕಟ್ಟು ಸೃಷ್ಟಿಸಲು ಯಾರೂ ಪ್ರಯತ್ನಿಸಬಾರದು ಎಂದು ಕಿವಿಮಾತು ಹೇಳಿದ್ದಾರೆ.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ದ ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದ ಪೂರ್ಣ ವಿವರಕ್ಕಾಗಿ ಈ ಕೆಳಗಿನ ವಿಡಿಯೋ ಲಿಂಕ್ ನೋಡಿ