ರೇಣುಕಾಸ್ವಾಮಿ ಕೊಲೆ ಪ್ರಕರಣ | ರಮ್ಯಾ vs ದರ್ಶನ್ ಅಭಿಮಾನಿಗಳ ಮಧ್ಯೆ ತಾರಕಕ್ಕೇರಿದ ವಾಕ್ಸಮರ

ಡಿ ಬಾಸ್ ಫ್ಯಾನ್ಸ್ ಎನಿಸಿಕೊಂಡವರು ಯಾರನ್ನೂ ಬಿಡುತ್ತಿಲ್ಲ. ಬರೀ ನನಗೆ ಮಾತ್ರವಲ್ಲ, ಅನೇಕರಿಗೆ ಹೀಗೆ ಕೆಟ್ಟ ಕೊಳಕು ಮೆಸೇಜ್ ಕಳಿಸುತ್ತಿದ್ದಾರೆ ಎಂದು ನಟಿ ರಮ್ಯಾ ಆರೋಪಿಸಿದ್ದಾರೆ.;

Update: 2025-07-28 09:00 GMT

ರಮ್ಯಾ ಮತ್ತು ದರ್ಶನ್‌

ಡಿ-ಬಾಸ್‌ ಅಭಿಮಾನಿಗಳ ಕುರಿತು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ನೀಡಿದ ಹೇಳಿಕೆ ದರ್ಶನ್‌ ಅಭಿಮಾನಿಗಳಲ್ಲಿ ಕಿಚ್ಚು ಹೊತ್ತಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾ ಮತ್ತು ದರ್ಶನ್ ಅಭಿಮಾನಿಗಳ ವಾಗ್ವಾದ ತಾರಕ್ಕೇರಿದೆ.

ಮಾಜಿ ಸಂಸದೆ ರಮ್ಯಾ ವಿರುದ್ಧ ಅವಹೇಳನಕಾರಿಯಾಗಿ ಸಂದೇಶ ಹಾಕುತ್ತಿರುವುದನ್ನು ರಾಜ್ಯ ಮಹಿಳಾ ಆಯೋಗ

ಗಂಭೀರವಾಗಿ ಪರಿಗಣಿಸಿದ್ದು, ಸಂದೇಶ ಕಳುಹಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್‌ ಆಯುಕ್ತರಿಗೆ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಪತ್ರ ಬರೆದಿದ್ದಾರೆ. ಈ ಮಧ್ಯೆ, ನಟ ದರ್ಶನ್‌ ಮಧ್ಯಪ್ರವೇಶಿಸಿ ಯಾರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಏನಿದು ವಿವಾದ?

ನಟಿ ರಮ್ಯಾ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದರು. ಇದಕ್ಕೆ ದರ್ಶನ್‌ ಅಭಿಮಾನಿಗಳು ನಟಿ ರಮ್ಯಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ನಟಿಯ ಕುರಿತು ಅವಹೇಳನಕಾರಿ ಸಂದೇಶಗಳನ್ನು ಹಾಕಿದ್ದರು. 

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಮತ್ತು ಇತರ ಆರೋಪಿಗಳಿಗೆ ಜಾಮೀನು ನೀಡಿರುವ ಹೈಕೋರ್ಟ್​​​ ಕ್ರಮಕ್ಕೆ ಸುಪ್ರೀಂಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಸದ್ಯ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್‌ ಕಾಯ್ದಿರಿಸಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. 

ದರ್ಶನ್ ಪ್ರಕರಣದ ಬಗ್ಗೆ ರಮ್ಯಾ ಹೇಳಿದ್ದೇನು?

ʻʻಭಾರತದ ಜನಸಾಮಾನ್ಯರಿಗೆ ಸುಪ್ರೀಂಕೋರ್ಟ್ ಒಂದು ಭರವಸೆಯ ಬೆಳಕಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆʼʼ ಎಂದು ರಮ್ಯಾ ಅವರು ಇನ್​ಸ್ಟಾಗ್ರಾಮ್ ಸ್ಟೋರಿ ಮತ್ತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದರು.

ರಮ್ಯಾ ಅವರ ಈ ಪೋಸ್ಟ್‌ಗೆ ದರ್ಶನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ನಟಿ ವಿರುದ್ದ ಟ್ರೋಲ್‌ ಹಾಗೂ ಕೆಟ್ಟ ಸಂದೇಶಗಳನ್ನು ಪೋಸ್ಟ್‌ ಮಾಡಿದ್ದರು. 

'ದರ್ಶನ್​ ಅಭಿಮಾನಿಗಳಿಗೆ ನನ್ನ ಇನ್​ಸ್ಟಾಗ್ರಾಮ್​ಗೆ ಸ್ವಾಗತ'

ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಹಾಗೂ ಕೆಟ್ಟ ಸಂದೇಶ ಹಾಕುವವರಿಗೆ ರಮ್ಯಾ ಖಡಕ್‌ ಸಂದೇಶ ನೀಡಿದ್ದಾರೆ. "ಎಲ್ಲಾ ಡಿ-ಬಾಸ್ ಅಭಿಮಾನಿಗಳಿಗೆ ನನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎಂಬುದಕ್ಕೆ ನಿಮ್ಮ ಕಮೆಂಟ್‌ಗಳೇ ಸಾಕ್ಷಿ" ಎಂದು ಬರೆದುಕೊಂಡಿದ್ದಾರೆ.

"ರೇಣುಕಾಸ್ವಾಮಿ ಕಳುಹಿಸಿದ ಸಂದೇಶಗಳಿಗೂ ಮತ್ತು ನೀವು ಕಳುಹಿಸುತ್ತಿರುವ ಸಂದೇಶಗಳಿಗೂ ಯಾವುದೇ ವ್ಯತ್ಯಾಸವಿಲ್ಲ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

 "ಅತ್ಯಂತ ಕೊಳಕು ಭಾಷೆಯಲ್ಲಿ ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ. ಇದು ನನಗೊಬ್ಬಳಿಗೇ ಅಲ್ಲ, ಬೇರೆ ನಟ-ನಟಿಯರಿಗೂ ಹೀಗೆ ಆಗಿದೆ. ಅವರ ಪತ್ನಿ-ಮಕ್ಕಳನ್ನೂ ಬಿಟ್ಟಿಲ್ಲ. ನಾನು ಈ ಬಗ್ಗೆ ಕೇಸು ದಾಖಲಿಸಿದ್ದೇನೆ. ಹೀಗೆ ಟ್ರೋಲ್ ಮಾಡುವವರು ಬಹುತೇಕರು ಯುವ ವಯಸ್ಸಿನವರು, ಅವರು ತಮ್ಮ ಮೌಲ್ಯಯುತ ಸಮಯ, ವರ್ಷಗಳನ್ನು ಈ ರೀತಿ ನಿಷ್ಕಾರಣವಾಗಿ ಹಾಳು ಮಾಡುತ್ತಿದ್ದಾರೆ. ಯಾರೂ ಕಾನೂನಿಗಿಂತ ಮಿಗಿಲು ಇಲ್ಲ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ" ಎಂದು ಹೇಳಿದ್ದಾರೆ.

ಸೈಬ‌ರ್ ಕ್ರೈಮ್‌ಗೆ ದೂರು 

ದರ್ಶನ್ ಅಭಿಮಾನಿಗಳಳು ತಮಗೆ ಕಳಿಸಿರುವ ಮೆಸೇಜ್‌ಗಳ ಸ್ಕಿನ್ ಶಾಟ್ ಶೇರ್ ಮಾಡಿಕೊಂಡಿರುವ ನಟಿ ರಮ್ಯಾ ಅವರು ಸೈಬರ್ ಕ್ರೈಮ್ ವಿಭಾಗ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಡಿ-ಬಾಸ್ ಫ್ಯಾನ್ಸ್ ಎನಿಸಿಕೊಂಡವರು ಯಾರನ್ನೂ ಬಿಡುತ್ತಿಲ್ಲ. ಬರೀ ನನಗೆ ಮಾತ್ರವಲ್ಲ, ಅನೇಕರಿಗೆ ಹೀಗೆ ಕೆಟ್ಟ ಕೊಳಕು ಮೆಸೇಜ್ ಕಳಿಸುತ್ತಿದ್ದಾರೆ. ಸುದೀಪ್-ಯಶ್, ಅವರ ಕುಟುಂಬ, ಹೆಂಡತಿ-ಮಕ್ಕಳಿಗೂ ಸೋಷಿಯಲ್ ಮೀಡಿಯಾದಲ್ಲಿ ಬೈದಿದ್ದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದಾರೆ.

ವಿವಾದ ಬಗ್ಗೆ ಪರಮೇಶ್ವರ್​ ಪ್ರತಿಕ್ರಿಯೆ 

ಈ ವಿವಾದದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ನಟ ದರ್ಶನ್ ಫ್ಯಾನ್ಸ್ ಸಂದೇಶದ ಬಗ್ಗೆ ನಟಿ ರಮ್ಯಾ ಅವರು ಮೊದಲು ದೂರು ನೀಡಲಿ, ಬಳಿಕ ಪೊಲೀಸರು ಏನು ಕ್ರಮ‌ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತಾರೆ. ದೂರು ಕೊಟ್ಟರೆ ಸೈಬರ್‌ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. 

ರಮ್ಯಾ ವಿರುದ್ಧ ವಿಜಯಲಕ್ಷ್ಮಿ ಕಾನೂನು ಸಮರ? 

ದರ್ಶನ್ ಅಭಿಮಾನಿಗಳು ಹಾಗೂ ರಮ್ಯಾ ನಡುವೆ ವಿವಾದದ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ನಟಿ ರಮ್ಯಾ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ ಎನ್ನಲಾಗಿದೆ. ನಟಿ ರಮ್ಯಾಗೆ ವಿಜಯಲಕ್ಷ್ಮಿ ಅವರು ತಮ್ಮ ವಕೀಲರ ಮೂಲಕ  ನೋಟಿಸ್ ಕೊಡುವ ಸಾಧ್ಯತೆ ಇದೆ. ರಮ್ಯಾಗೆ ನೋಟಿಸ್ ನೀಡುವ ಬಗ್ಗೆ ಆತ್ಮೀಯರ ಬಳಿ ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನವಾಗಿದ್ದಾಗ,"ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಯಾರೂ ಜನರನ್ನು ಹೊಡೆಯಲು ಅಥವಾ ಕೊಲ್ಲಲು ಮುಂದಾಗಬಾರದು. ಒಂದು ಸರಳ ದೂರು ನೀಡಿದರೆ ಸಾಕು, ನ್ಯಾಯ ಸಿಗುತ್ತದೆಯೋ ಇಲ್ಲವೋ ಎಂಬುದು ಬೇರೆ ವಿಷಯ" ಎಂಬ ಹೇಳಿಕೆಯನ್ನು ರಮ್ಯಾ ನೀಡಿದ್ದರು. 

ಸದ್ಯ ನಟ ದರ್ಶನ್‌ ಥಾಯ್ಲೆಂಡ್​ನಲ್ಲಿ ಡೆವಿಲ್​ ಚಿತ್ರದ ಶೂಟಿಂಗ್​​ ಮುಗಿಸಿ ಶುಕ್ರವಾರ ತಡರಾತ್ರಿ ಬೆಂಗಳೂರಿಗೆ ಬಂದಿದ್ದಾರೆ. ಇನ್ನೊಂದೆಡೆ ದರ್ಶನ್ ಜಾಮೀನು ರದ್ದು ಮಾಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರ ಕೋರಿರುವ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ. ರಮ್ಯಾ ಮತ್ತು ದರ್ಶನ್ ಅವರು `ದತ್ತ' ಮತ್ತು `ಸ್ನೇಹನಾ ಪ್ರೀತಿನಾ'ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. 

Tags:    

Similar News