ಸೌಜನ್ಯ ಪ್ರಕರಣ | ವಿಠಲ್‌ ಗೌಡ ವಿರುದ್ಧ ತನಿಖೆಗೆ ಸ್ನೇಹಮಯಿ ಕೃಷ್ಣ ಒತ್ತಾಯ; ಎಸ್ಪಿಗೆ ದೂರು

ಸೌಜನ್ಯ ಪ್ರಕರಣದಲ್ಲಿ ಆಕೆಯ ಸೋದರ ಮಾವ ವಿಠಲ ಗೌಡನ ಕೈವಾಡವಿರುವ ಅನುಮಾನ ವ್ಯಕ್ತಪಡಿಸಿ, ತನಿಖೆ ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಅವರಿಗೆ ಸೋಮವಾರ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು.;

Update: 2025-09-09 08:37 GMT

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿರುವ ದೂರಿನ ಪರಿಶೀಲಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚಿಸಿರುವುದು ತೀವ್ರ ಸಂಚಲನ ಮೂಡಿಸಿದೆ.

ಸೌಜನ್ಯ ಪ್ರಕರಣದಲ್ಲಿ ಆಕೆಯ ಸೋದರ ಮಾವ ವಿಠಲ ಗೌಡನ ಕೈವಾಡವಿರುವ ಅನುಮಾನ ವ್ಯಕ್ತಪಡಿಸಿ, ತನಿಖೆ ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಅವರಿಗೆ ಸೋಮವಾರ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು. ದೂರು ಪರಿಶೀಲನೆ ನಡೆಸುವಂತೆ ಬೆಳ್ತಂಗಡಿ ಪೊಲೀಸ್‌ ಇನ್‌ಸ್ಪೆಕ್ಟರ್‌ಗೆ ಎಸ್ಪಿ ಸೂಚನೆ ನೀಡಿದ್ದಾರೆ ಎಂಬ ವಿಚಾರ ಸೌಜನ್ಯ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. 

2012 ರಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಸೌಜನ್ಯ ಸೋದರ ಮಾವ ವಿಠಲ್ ಗೌಡ ಪಾತ್ರದ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಜತೆಗೆ ಸಂದರ್ಭ, ಸನ್ನಿವೇಶಗಳು ಕೂಡ ಅನುಮಾನವನ್ನು ಪುಷ್ಠೀಕರಿಸುವಂತಿವೆ. ಹಾಗಾಗಿ ವಿಠಲ್‌ ಗೌಡ ವಿರುದ್ಧ ತನಿಖೆ ನಡೆಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, “ಸೌಜನ್ಯ ಪ್ರಕರಣದ ನಿಜವಾದ ಆರೋಪಿಯನ್ನು ಬಂಧಿಸಿ ಶಿಕ್ಷಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಇರುವ ದಾಖಲೆಗಳು ಮತ್ತು ಪುರಾವೆಗಳಿವೆ.

ಸೌಜನ್ಯ ಅಪಹರಿಸಿ ಅತ್ಯಾಚಾರ ಎಸಗಿದ್ದರೆ ಆಕೆಯ ಕಾಲೇಜು ಬ್ಯಾಗ್ ಬೇರೆಲ್ಲಾದರೂ ಬೀಳಬೇಕಾಗಿತ್ತು. ಆದರೆ, ಆಕೆಯ ಶವ ದೊರೆತ ಸ್ಥಳದಲ್ಲೇ ಇದೆ. ಆ ದಿನ ಸೌಜನ್ಯ ಊಟ ಮಾಡಿರಲಿಲ್ಲ ಎಂದು ಕುಟುಂಬಸ್ಥರು ಹೇಳುತ್ತಾರೆ. ಆದರೆ, ಶವಪರೀಕ್ಷೆ ಸಮಯದಲ್ಲಿ ಆಕೆಯ ಹೊಟ್ಟೆಯಲ್ಲಿ ಆಹಾರ ಕಂಡುಬಂದಿದೆ. ಅತ್ಯಾಚಾರ ಮತ್ತು ಕೊಲೆ ಮಾಡುವ ಉದ್ದೇಶ ಹೊಂದಿದ್ದವರು ಸಂತ್ರಸ್ತೆಗೆ ಆಹಾರ ನೀಡುವುದಿಲ್ಲ. ಘಟನೆ ನಡೆದ ದಿನ ಸೌಜನ್ಯ ತನ್ನ ಸೋದರ ಮಾವನ ಮನೆಗೆ ಹೋಗಿ ಆಹಾರ ಸೇವಿಸಿರಬಹುದು. ಅಲ್ಲದೇ ಅಂದು ವಿಠಲ ಗೌಡ ಹೋಟೆಲ್ಗೆ ಹೋಗದೆ ರಜೆ ಹಾಕಿ ಮನೆಯಲ್ಲೇ ಇದ್ದರೆಂಬುದು ತನಿಖೆಯಿಂದ ತಿಳಿದು ಬಂದಿದೆ.

ಸೌಜನ್ಯಳಿಗಾಗಿ ಆಕೆಯ ಪೋಷಕರು ಹುಡುಕಾಡುವಾಗ ಮನೆಯ ಕಡೆಗೆ ಹೋಗುವುದನ್ನು ನೋಡಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿರಬಹುದು. ಎಲ್ಲರೂ ಮನೆಗೆ ಹೋದ ಬಳಿಕ ಸೌಜನ್ಯ ಶವ ಎಸೆದಿರುವ ಅನುಮಾನವಿದೆ. ಹಾಗಾಗಿ ಸತ್ಯಾಂಶ ಬಹಿರಂಗವಾಗಲು ವಿಠಲ್‌ ಗೌಡನನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕರಣವನ್ನು ಈ ದಿಕ್ಕಿನಲ್ಲೂ ಮೊದಲೇ ತನಿಖೆ ನಡೆಸಿದ್ದರೆ ಆರೋಪಿಗಳನ್ನು ಪತ್ತೆ ಹಚ್ಚಬಹುದಾಗಿತ್ತು. ಧರ್ಮಸ್ಥಳದ ವಿರುದ್ಧ ನಡೆದ ಅಪಪ್ರಚಾರ ತಡೆಯಬಹುದಿತ್ತು. ತನಿಖೆಯಲ್ಲಿ ಸ್ಪಷ್ಟವಾಗಿ ಪೊಲೀಸರ ವೈಫಲ್ಯ ಎದ್ದುಕಾಣುತ್ತಿದೆ ಎಂದು ಸ್ನೇಹಮಯಿ ಆರೋಪಿಸಿದ್ದಾರೆ. ಅಲ್ಲದೇ ವಿಠಲ ಗೌಡ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Tags:    

Similar News