ಸ್ವಕ್ಷೀಯರಿಂದಲೇ ಸಿದ್ಧರಾಮಯ್ಯಗೆ ಶರಪಂಜರ ಸೃಷ್ಟಿ! ಎಚ್ ಡಿ ಕುಮಾರಸ್ವಾಮಿ
ಸುಳ್ಳು ಹೇಳುವುದು ನಿಮಗೆ ಅಭ್ಯಾಸವೋ, ಆಚಾರವೋ, ಚಾಳಿಯೋ ಗೊತ್ತಿಲ್ಲ. ಹಸಿಹಸಿ ಸುಳ್ಳು ಹೇಳುತ್ತಿರುವ ನಿಮ್ಮಲ್ಲಿ ನೈತಿಕತೆ ಸತ್ತಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ
ನಲವತ್ತು ವರ್ಷಗಳ ಹಿಂದೆಯೇ ಕುಮಾರಸ್ವಾಮಿ ಅವರು ಮೂಡಾ ನಿವೇಶನ ಪಡೆದಿದ್ದಾರೆ, ಸ್ವಾಧೀನ ಪತ್ರವನ್ನೂ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿಸುಳ್ಳು ಹೇಳಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿದ್ದರಾಮಯ್ಯ ಅವರದ್ದು ಎರಡು ಮುಖ, ಎರಡು ನಾಲಿಗೆ, ಎರಡು ವ್ಯಕ್ತಿತ್ವ, ಎರಡು ನೀತಿಯ ಐಡಿಯಾಲಜಿ ಎಂದು ಕುಟುಕಿದ್ದು, ಅದನ್ನು ʼಸಿದ್ದಾಲಜಿʼ ಎಂದು ಕರೆದಿದ್ದಾರೆ.
ಸುಳ್ಳು ಹೇಳುವುದು ನಿಮಗೆ ಅಭ್ಯಾಸವೋ, ಆಚಾರವೋ, ಚಾಳಿಯೋ ಗೊತ್ತಿಲ್ಲ. ಹಸಿಹಸಿ ಸುಳ್ಳು ಹೇಳುತ್ತಿರುವ ನಿಮ್ಮಲ್ಲಿ ನೈತಿಕತೆ ಸತ್ತಿದೆ. ಆರೋಪಿ ಸ್ಥಾನದಲ್ಲಿರುವ ನೀವು ನನ್ನ ಬಗ್ಗೆ, ನನ್ನ ತಂದೆಯವರ ಬಗ್ಗೆ ಆಡುತ್ತಿರುವ ಸುಳ್ಳುಗಳು ನಿಮ್ಮ ಯೋಗ್ಯತೆಗೆ ತಕ್ಕುದಲ್ಲ ಸಿದ್ದರಾಮಯ್ಯನವರೇ. ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆಯೂ ನಿಮಗಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಕುಮಾರಸ್ವಾಮಿ ಸಿಎಂಗೆ ತಿರುಗೇಟು ನೀಡಿದ್ದಾರೆ.
ಸುಳ್ಳು ಸಂಶೋಧಕ ಸಿದ್ದರಾಮಯ್ಯ
ಮೂಡಾದವರು ನನಗೆ ನಿವೇಶನ ಹಂಚಿದ್ದಾರೆ, ನಿಜ. ಸ್ವಾಧೀನ ಪತ್ರವವನ್ನೂ ನೀಡಿದ್ದಾರೆ. ಆ ಪತ್ರವನ್ನು ನಾನು ಮಾಧ್ಯಮಗಳ ಮುಂದೆಯೂ ತೋರಿಸಿದ್ದೇನೆ. ಹಂಚಿದ ನಿವೇಶನದ ಜಾಗವನ್ನು ನನ್ನ ಸುಪರ್ದಿಗೆ ಕೊಡಬೇಕಲ್ಲವೇ? ಕೊಟ್ಟಿಲ್ಲ. ಹಾಗಾದರೆ, ಇದರಲ್ಲಿ 'ಸಿದ್ದರಾಮಯ್ಯ ಮಾಡಿದ ಸಂಶೋಧನೆ ಏನಿದೆ?' 'ಸುಳ್ಳು ಸಂಶೋಧಕ ಸಿದ್ದರಾಮಯ್ಯ'ನವರೇ, ನಿಮ್ಮ ಮುಖಕ್ಕೆ ಮೆತ್ತಿಕೊಂಡಿರುವ ಕೊಳಕನ್ನು ನನ್ನ ಮೇಲೆ, ಇನ್ನಿತರರ ಮೇಲೆ ಸಿಡಿಸಲು ಹೊರಟು ಲಜ್ಜೆಗೇಡಿತನದ ಪರಮಾವಧಿ ಮೆರೆದಿದ್ದೀರಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಸ್ವಪಕ್ಷೀಯರಿಂದಲೇ ಸಿಎಂಗೆ ಶರಪಂಜರ
'ಮೂಡಾ ಭೂಮಿಯನ್ನು ಮುಖ್ಯಮಂತ್ರಿ ಕುಟುಂಬ ಮುಕ್ಕಿ ತಿಂದಿದೆ' ಎಂದು ಇಡೀ ದೇಶ ಮಾತನಾಡುತ್ತಿದೆ. ದಾಖಲೆಗಳು ಹಾದಿಬೀದಿಯಲ್ಲಿ ಹೊರಳಾಡುತ್ತಿವೆ! ನಿಮ್ಮ ಸಮಾಜವಾದಿ ಮುಖವಾಡ, ಅಹಿಂದಾ ಅಲಂಕಾರ, ಸತ್ಯವಂತನ ಸಿಂಗಾರ.. ಇದೆಲ್ಲವೂ ಕಳಚಿಬಿದ್ದಿದೆ. ಅಸಹ್ಯವಾಗುವಷ್ಟು ಅನಾಚಾರ ಮಾಡಿ ಅಹಿಂದ ರಕ್ಷಣೆ ಪಡೆಯಲು ಯತ್ನಿಸುತ್ತಿರುವ ನಿಮ್ಮ ಅಸಹಾಯಕತೆ ನನಗೆ ಅರ್ಥವಾಗುತ್ತದೆ. ಪಾಪ.. ನಿಮ್ಮ ಪಕ್ಷದವರೇ ನಿಮಗೆ 'ಶರಪಂಜರ' ಸೃಷ್ಟಿಸುತ್ತಿದ್ದಾರೆ! ಎಂದು ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ರಾಜ್ಯಕ್ಕೆ ಕೈಗಾರಿಕೆ ತರಲಿ, ರಾಜ್ಯಕ್ಕೆ ಒಳ್ಳೆಯದು ಮಾಡಲಿ ಎನ್ನುತ್ತೀರಿ. ಅದು ನನಗೆ ಗೊತ್ತಿದೆ. ನಾನು ಕೇಂದ್ರ ಸಚಿವನಾಗಿ ಇನ್ನೂ ಎರಡು ತಿಂಗಳಾಗಿಲ್ಲ. ರಾಜ್ಯದ ಕೆಲಸ ಮಾಡೋಣ ಎಂದರೆ ನಿಮ್ಮ ಅಸಹಕಾರ, ಅಸೂಯೆ ಅಡ್ಡಿ. ಒಂದು ನಾಲಿಗೆ ಮೇಲೆ ಸಹಕಾರ, ಅಸಹಕಾರ.. ಇದು ಹೇಗೆ ಸಾಧ್ಯ ಸಿದ್ದರಾಮಯ್ಯನವರೇ? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಎರಡು ಮುಖ, ಎರಡು ನಾಲಿಗೆ
"ಎರಡು ಮುಖ, ಎರಡು ನಾಲಿಗೆ, ಎರಡು ವ್ಯಕ್ತಿತ್ವ, ಎರಡು ನೀತಿ.. ನಿಮ್ಮ ಐಡಿಯಾಲಜಿ! ಆ ʼಸಿದ್ದಾಲಜಿʼ ನನಗೆ ಗೊತ್ತಿಲ್ಲದಲ್ಲ ಸಿದ್ದರಾಮಯ್ಯನವರೇ.. ರಾಜ್ಯಕ್ಕೆ ಒಳ್ಳೆಯದಾಗಲಿ ಎನ್ನುವ ಆಶಯ ಇರಲಿ, ನನ್ನ ಮೇಲೆ ಅಸೂಯೆ ಏಕೆ? ನಿಮ್ಮ ಸಕಲ ಗುಣಗಳ ಸಿದ್ದಾಲಜಿ ನನಗೆ ಚೆನ್ನಾಗಿಯೇ ಗೊತ್ತಿದೆ" ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.