ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ್‌ ತಾರಾನಾಥ್‌ ಇನ್ನಿಲ್ಲ

ಪದ್ಮಶ್ರೀ ಪುರಸ್ಕೃತರಾಗಿದ್ದ ಅವರು, ಸರೋದ್‌ ವಾದಕರಾಗಿ ಜಗತ್ಪ್ರಸಿದ್ಧಿ ಪಡೆದಿದ್ದರು. ಅಲ್ಲದೆ, ಕನ್ನಡದ ಕವಿಯಾಗಿ, ಲೇಖಕರಾಗಿ, ಚಿಂತಕರಾಗಿಯೂ ಹೆಸರು ಮಾಡಿದ್ದರು.

Update: 2024-06-11 14:21 GMT

ಸರೋದ್‌ ಮಾಂತ್ರಿಕ ಹಾಗೂ ಚಿಂತಕ ಪಂಡಿತ್‌ ರಾಜೀವ್‌ ತಾರಾನಾಥ್‌ ಅವರು ನಿಧನರಾಗಿದ್ದಾರೆ.

93 ವರ್ಷ ವಯೋಮಾನದ ಅವರು ಕೆಲವು ದಿನಗಳ ಹಿಂದೆ ಮೈಸೂರಿನ ತಮ್ಮ ನಿವಾಸದಲ್ಲಿ ಕುಸಿದುಬಿದ್ದು ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಪದ್ಮಶ್ರೀ ಪುರಸ್ಕೃತರಾಗಿದ್ದ ಅವರು, ಸರೋದ್‌ ವಾದಕರಾಗಿ ಜಗತ್ಪ್ರಸಿದ್ಧಿ ಪಡೆದಿದ್ದರು. ಅಲ್ಲದೆ, ಕನ್ನಡದ ಕವಿಯಾಗಿ, ಲೇಖಕರಾಗಿ, ಚಿಂತಕರಾಗಿಯೂ ಹೆಸರು ಮಾಡಿದ್ದರು.

ಮೃತ ಪಾರ್ಥೀವ ಶರೀರವನ್ನು ಮೈಸೂರಿನ ಕುವೆಂಪು ನಗರದ ಅವರ ನಿವಾಸದಲ್ಲಿ ಜೂ.12 ರ ಬೆಳಿಗ್ಗೆ 9ರಿಂದ 12 ರವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ 1932 ರಲ್ಲಿ ಜನಿಸಿದ್ದ ಅವರು, ತಮ್ಮ ಒಂಭತ್ತನೇ ವಯಸ್ಸಿನಲ್ಲಿಯೇ ಸಂಗೀತ ಕಛೇರಿ ನಡೆಸುವ ಮೂಲಕ ಸಂಗೀತ ದಿಗ್ಗಜರ ಗಮನ ಸೆಳೆದಿದ್ದರು. ಸಂಗೀತದಲ್ಲಿ ಆರಂಭಿಕ ಶಿಕ್ಷಣವನ್ನು ತಮ್ಮ ತಂದೆ ಪಂಡಿತ್‌ ತಾರಾನಾಥರಿಂದಲೇ ಪಡೆದಿದ್ದ ಅವರು, ಇಪ್ಪತ್ತು ವರ್ಷ ವಯೋಮಾನಕ್ಕೆ ಮುನ್ನವೇ ಆಲ್‌ ಇಂಡಿಯಾ ರೇಡಿಯೋದ ನಿಲಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು. 

ಬಳಿಕ ಇಂಗ್ಲೀಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಪಿಎಚ್‌ಡಿ ಪಡೆದು ತಿರುಚನಾಪಳ್ಳಿಯ ಎನ್‌ಐಟಿಯಲ್ಲಿ ಇಂಗ್ಲೀಷ್‌ ವಿಭಾಗದ ಮುಖ್ಯಸ್ಥರಾಗಿ ವೃತ್ತಿ ಆರಂಭಿಸಿದ್ದರು. ಆದರೆ, ಸಂಗೀತದೆಡೆಗಿನ ಸೆಳೆತದಿಂದಾಗಿ ವೃತ್ತಿಯನ್ನು ಬಿಟ್ಟು ಕೊಲ್ಕತ್ತಾಕ್ಕೆ ಹೋಗಿ ಶಾಸ್ತ್ರೀಯ ಸಂಗೀತದ ದಂತಕಥೆ ಪಂಡಿತ್ ಅಲಿ ಅಕ್ಬರ್‌ ಖಾನ್‌ ಅವರ ಬಳಿ ಶಿಷ್ಯರಾಗಿ ಸಂಗೀತಾಭ್ಯಾಸ ಆರಂಭಿಸಿದ್ದರು. ಬಳಿಕ ಪಂಡಿತ್‌ ರವಿಶಂಕರ್‌, ಅನ್ನಪೂರ್ಣಾ ದೇವಿ, ನಿಖಿಲ್‌ ಬ್ಯಾನರ್ಜಿ, ಆಶೀಶ್‌ ಖಾನ್‌ ಅವರ ಬಳಿಯೂ ಸಂಗೀತಾಭ್ಯಾಸ ಮಾಡಿದ್ದರು.

ಅವರಿಗೆ 2019 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪುರಸ್ಕಾರ ಸಂದಿತ್ತು. ಅಲ್ಲದೆ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರಕ್ಕೂ ಪಾತ್ರರಾಗಿದ್ದರು.

Tags:    

Similar News