Shivananda Patil Resignation | ಶಾಸಕ ಸ್ಥಾನಕ್ಕೆ ರಾಜೀನಾಮೆ; ಶಿವಾನಂದ ಪಾಟೀಲರಿಂದ ʼರಾಜಕೀಯ ಪ್ರಹಸನʼ
ಶುಕ್ರವಾರ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸಚಿವ ಶಿವಾನಂದ ಪಾಟೀಲ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜಕೀಯ ಪ್ರಹಸನದಂತಿದೆ. ಅವರು ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿರುವ ವಿಚಾರ ಮಾತ್ರ ಹುಬ್ಬೇರಿಸುವಂತಿದೆ.;
ವಿಜಯಪುರ ಜಿಲ್ಲೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಕಾಂಗ್ರೆಸ್ ಶಾಸಕ, ಸಚಿವರೂ ಆದ ಶಿವಾನಂದ ಪಾಟೀಲ ನಡುವಿನ ʼರಾಜಕೀಯ ಜಂಗೀಕುಸ್ತಿʼಯು ರಾಜೀನಾಮೆ ಪ್ರಹಸನದವರೆಗೂ ಬಂದು ನಿಂತಿದೆ.
ಶುಕ್ರವಾರ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸಚಿವ ಶಿವಾನಂದ ಪಾಟೀಲ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ರಾಜೀನಾಮೆ ಪತ್ರದಲ್ಲಿ ಅವರು ಉಲ್ಲೇಖಿಸಿರುವ ವಿಚಾರ ಮಾತ್ರ ಹುಬ್ಬೇರಿಸುವಂತಿದೆ.
“ವಿಜಯಪುರ ನಗರ ಶಾಸಕ ಬಸನಗೌಡ ಆರ್. ಪಾಟೀಲ ಯತ್ನಾಳ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ಧ ಬಸವನ ಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸುತ್ತಿದ್ದು, ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹಾಗಾಗಿ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ರಾಜೀನಾಮೆ ಅಂಗೀಕಾರಕ್ಕೆ ಷರತ್ತು
ಇದೇ ರಾಜೀನಾಮೆ ಪತ್ರದಲ್ಲಿ ರಾಜೀನಾಮೆ ಅಂಗೀಕರಿಸಲು ಷರತ್ತು ಕೂಡ ಹಾಕಿದ್ದಾರೆ. ಬಸನಗೌಡ ಆರ್. ಪಾಟೀಲ್ ಯತ್ನಾಳ್ ಅವರು ಸವಾಲು ಹಾಕಿರುವಂತೆ ಅವರೂ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ನನ್ನ ರಾಜೀನಾಮೆ ಅಂಗೀಕರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದು ಪ್ರಹಸನವಲ್ಲದೇ ಮತ್ತೇನು ಎಂಬ ಚರ್ಚೆ ಆರಂಭವಾಗಿದೆ.
ಹಿರಿಯ ಹಾಗೂ ಅನುಭವಿ ರಾಜಕಾರಣಿ ಆಗಿರುವ ಶಿವಾನಂದ ಪಾಟೀಲ ಅವರು ಜನರಿಂದ ಆಯ್ಕೆಯಾದ ಜನಪ್ರತಿನಿಧಿ. ಜನರು ನೀಡಿದ ಅಧಿಕಾರವನ್ನು ಜಿದ್ದಾಜಿದ್ದಿಗೆ ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಸ್ಪೀಕರ್ ಮುಂದಿನ ನಡೆ ಏನು?
ಶಿವಾನಂದ ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಪತ್ರದಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ತಮ್ಮ ರಾಜೀನಾಮೆ ಪತ್ರದನ್ನು ಅಂಗೀಕರಿಸಬೇಕು ಎಂದು ಷರತ್ತು ವಿಧಿಸಿರುವುದರಿಂದ ಸ್ಪೀಕರ್ ಅವರ ಮುಂದಿನ ನಡೆ ಏನು ಎಂಬ ಕುತೂಹಲ ಕೆರಳಿಸಿದೆ.
ಶಿವಾನಂದ ಪಾಟೀಲ ಅವರು ಇದೇ ಮೊದಲ ಬಾರಿಗೆ ಈ ರೀತಿ ರಾಜೀನಾಮೆ ಪತ್ರ ನೀಡಿರುವುದು ಅಚ್ಚರಿಗೂ ಕಾರಣವಾಗಿದೆ. ಹೀಗಿರುವಾಗ ಸ್ಪೀಕರ್ ಅವರು ರಾಜೀನಾಮೆ ಪತ್ರ ಸ್ವೀಕರಿಸುತ್ತಾರಾ ಅಥವಾ ತಿರಸ್ಕರಿಸುತ್ತಾರಾ ಎಂಬುದು ಚರ್ಚೆ ಆರಂಭವಾಗಿದೆ. ಶಿವಾನಂದ ಪಾಟೀಲ್ ಅವರು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ತಾಂತ್ರಿಕವಾಗಿ ಅಂಗೀಕರಿಸಲು ಸಾಧ್ಯವಿಲ್ಲ. ಹಾಗಂತ ತಿರಸ್ಕರಿಸಲೂ ಆಗುವುದಿಲ್ಲ ಎನ್ನಲಾಗಿದೆ.
ರಾಜೀನಾಮೆ ಪ್ರಹಸನ ಬಗೆಹರಿಸಲು ಸ್ಪೀಕರ್ ಅವರು ಯತ್ನಾಳ್ ಹಾಗೂ ಶಿವಾನಂದ ಪಾಟೀಲ್ ಅವರನ್ನು ಕರೆಸಿ ಮಾತನಾಡಬಹುದು ಎಂದು ನಿರೀಕ್ಷಿಸಲಾಗಿದೆ.
ರಾಜೀನಾಮೆ ಪತ್ರ ಅಂಗೀಕಾರ ಯಾವಾಗ?
ಶಾಸಕರಾದವರು ತಮ್ಮ ಸ್ಥಾನಕ್ಕೆ ಸ್ವ-ಇಚ್ಚೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉಲ್ಲೇಖಿಸುವುದು ಅಧಿಕೃತವಾದ ಪ್ರಕ್ರಿಯೆ. ಆಗ ಸ್ಪೀಕರ್ ಶಾಸಕರನ್ನು ಕರೆದು ಯಾರಾದರೂ ಒತ್ತಡ ಹೇರಿದ್ದಾರಾ, ಸಮಸ್ಯೆಗಳೇನು ಎಂಬುದನ್ನು ವಿಚಾರಿಸಿ ಸಕಾರವಿದ್ದರೆ ರಾಜೀನಾಮೆ ಅಂಗೀಕರಿಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಶಿವಾನಂದ ಪಾಟೀಲ ರಾಜೀನಾಮೆ ವಿಚಾರದಲ್ಲಿ ಇದ್ಯಾವುದೂ ಪಾಲನೆಯಾಗುತ್ತಿಲ್ಲ. ಕೇವಲ ರಾಜಕೀಯ ಜಿದ್ದಾಜಿದ್ದಿ, ವೈಯಕ್ತಿಕ ದ್ವೇಷಕ್ಕೆ ರಾಜೀನಾಮೆ ನೀಡುವ ಪ್ರಸಹನ ನಡೆದಿರುವುದು ಹಲವರ ಟೀಕೆಗೂ ಗುರಿಯಾಗಿದೆ.