``ಜೈಲಿನಲ್ಲಿ ಹಿಂಸೆ, ದಯವಿಟ್ಟು ನನಗೆ ವಿಷ ನೀಡಿ" ; ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ನಟ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಅವರು ಹೆಚ್ಚುವರಿ ದಿಂಬು ಹಾಗೂ ಬೇಡ್​​ಶೀಟ್​ಗಾಗಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ಸಲ್ಲಿಸಿದ್ದರು.;

Update: 2025-09-09 06:52 GMT

ನಟ ದರ್ಶನ್‌

Click the Play button to listen to article

"ನಾನು ಹಲವು ದಿನಗಳಿಂದ ಬೆಳಕನ್ನೇ ನೋಡಿಲ್ಲ, ಬಟ್ಟೆಗಳಲ್ಲಿ ದುರ್ವಾಸನೆ ಬರುತ್ತಿದೆ, ಹಾಸಿಗೆ–ದಿಂಬು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನನಗೆ ಬದುಕಲು ಸಾಧ್ಯವಿಲ್ಲ. ದಯವಿಟ್ಟು ನನ್ನೊಬ್ಬನಿಗೆ ವಿಷ ನೀಡಿ" ಎಂದು ನಟ ದರ್ಶನ್‌ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟು ಬೇಡಿಕೊಂಡ ಘಟನೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.   

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದು,  ಹೆಚ್ಚುವರಿ ದಿಂಬು ಹಾಗೂ ಬೇಡ್​​ಶೀಟ್​ ಕೇಳಿದ್ದರು. ಆದರೆ, ಜೈಲಿನಲ್ಲಿ ಈ ವ್ಯವಸ್ಥೆ ಕಲ್ಪಿಸಿರಲಿಲ್ಲ. ಅದಕ್ಕಾಗಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ದರ್ಶನ್ ಅರ್ಜಿ ಸಲ್ಲಿಸಿದ್ದರು.

ಮಂಗಳವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅರ್ಜಿ ವಿಚಾರಣೆಗೆ ಹಾಜರಾದ ದರ್ಶನ್ ಅವರು ನನ್ನದೊಂದು ಮನವಿ ಇದೆ ಎಂದು ಕೈ ಎತ್ತಿದರು. ನ್ಯಾಯಾಧೀಶರು ಅವಕಾಶ ನೀಡಿದಾಗ ಸಮಸ್ಯೆ ಹೇಳಿಕೊಂಡರು. 

ಜೈಲಿನೊಳಗೆ ಹಿಂಸೆಯಾಗುತ್ತಿದೆ, ಶಿಕ್ಷೆ ಅನುಭವಿಸಲು ಸಾಧ್ಯವಾಗುತ್ತಿಲ್ಲ. ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಇಂತಹ ಪರಿಸ್ಥಿತಿ ಬೇಡ, ನನಗೆ ಮಾತ್ರ ಪಾಯಿಸನ್ ನೀಡಿ, ನ್ಯಾಯಾಲಯವೇ ಈ ಆದೇಶ ನೀಡಬೇಕು’ ಎಂದು ದರ್ಶನ್ ಮನವಿ ಮಾಡಿಕೊಂಡರು. ಆಗ ಪ್ರತಿಕ್ರಿಯಿಸಿದ ನ್ಯಾಯಧೀಶರು, ಹೀಗೆಲ್ಲ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. 

‘ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ. ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ’ ಎಂದು ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು. 

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ, ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್​​ನಲ್ಲಿಈ ಬಗ್ಗೆ ಪ್ರಶ್ನೆ ಮಾಡಿತ್ತು. ಸುಪ್ರೀಂಕೋರ್ಟ್​ ದರ್ಶನ್ ಅವರ ಜಾಮೀನನ್ನು ರದ್ದು ಮಾಡಿ, ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸವಲತ್ತು ಸಿಗಬಾರದು ಎಂದು ಎಚ್ಚರಿಸಿತ್ತು. ಹೀಗಾಗಿ ನಟನಿಗೆ ವಿಶೇಷ ಸವಲತ್ತು ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. 

Tags:    

Similar News