ರೇಣುಕಾಸ್ವಾಮಿ ಕೊಲೆ ಪ್ರಕರಣ ; ಪವಿತ್ರಾಗೌಡ ಜಾಮೀನು ಅರ್ಜಿ ವಜಾ

ಜಾಮೀನು ಅರ್ಜಿಯನ್ನು ಕೆಳ ಹಂತದ ನ್ಯಾಯಾಲಯ ವಜಾಗೊಳಿಸಿದ ಹಿನ್ನೆಲೆಯಲ್ಲಿ ಪವಿತ್ರಾ ಗೌಡ ಹೈಕೋರ್ಟ್​ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.;

Update: 2025-09-02 06:59 GMT

ಪವಿತ್ರಾ ಗೌಡ

ನಟ ದರ್ಶನ್ ಹಾಗೂ ಸಹಚರರಿಂದ ಕೊಲೆಯಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಪವಿತ್ರಾಗೌಡ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. 

'ತಮ್ಮಿಂದ ರೇಣುಕಾ ಸ್ವಾಮಿ ಕೊಲೆಯಾಗಿಲ್ಲ, ತಾನು ಮಹಿಳೆ ಮತ್ತು ಒಬ್ಬಂಟಿ ತಾಯಿ ಆಗಿರುವುದರಿಂದ ತನ್ನ ಮಗಳ ಆರೈಕೆ ಮಾಡಬೇಕು' ಎಂದು ಪವಿತ್ರಾ ಗೌಡ ತಮ್ಮ ಜಾಮೀನು ಅರ್ಜಿಯಲ್ಲಿ ಕೋರಿದ್ದರು. ಆದರೆ, ಈ ವಾದವನ್ನು ಪರಿಗಣಿಸದ ನ್ಯಾಯಾಧೀಶ ಐಪಿ ನಾಯಕ್ ಅವರು ಜಾಮೀನು ಅರ್ಜಿ ವಜಾಗೊಳಿಸಿದರು. 

ಜಾಮೀನು ಅರ್ಜಿಯನ್ನು ಕೆಳ ಹಂತದ ನ್ಯಾಯಾಲಯ ವಜಾಗೊಳಿಸಿದ ಹಿನ್ನೆಲೆಯಲ್ಲಿ ಪವಿತ್ರಾ ಗೌಡ ಅವರು ಹೈಕೋರ್ಟ್​ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಒಂದು ವೇಳೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸದಿದ್ದರೆ, 14 ದಿನಗಳ ನಂತರ ಮತ್ತೆ ಕೆಳ ಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅವರಿಗೆ ಅವಕಾಶವಿದೆ.

ಪ್ರಸ್ತುತ, ನಟ ದರ್ಶನ್‌ ಸೇರಿದಂತೆ ಪ್ರಕರಣದ ಏಳು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಪ್ರಕರಣ ಏನು?

ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ನಟ ದರ್ಶನ್ ಅವರ ಅಭಿಮಾನಿಯಾಗಿದ್ದರು. ಆದರೆ, ಅವರು ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶ ಕಳುಹಿಸಿದ್ದರು ಎಂದು ಆರೋಪಿಸಲಾಗಿತ್ತು. ಇದರಿಂದ ಕೋಪಗೊಂಡ ದರ್ಶನ್ ಮತ್ತು ಅವರ ಸಹಚರರು, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆಯಲ್ಲಿರುವ ಶೆಡ್‌ವೊಂದಕ್ಕೆ ಕರೆತಂದು, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. 

ಕೊಲೆಯ ನಂತರ ಮೃತದೇಹವನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಳಿಯ ರಾಜಕಾಲುವೆಯಲ್ಲಿ ಎಸೆಯಲಾಗಿತ್ತು. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಅಥವಾ ಆಕಸ್ಮಿಕ ಸಾವು ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದರೆ, ಪೊಲೀಸರ ತನಿಖೆ ಚುರುಕುಗೊಂಡಂತೆ, ಇದು ಪೂರ್ವನಿಯೋಜಿತ ಕೊಲೆ ಎಂಬುದು ಬಹಿರಂಗವಾಯಿತು. ತನಿಖೆಯ ವೇಳೆ, ದರ್ಶನ್, ಪವಿತ್ರಾ ಗೌಡ, ಮತ್ತು ಅವರ ಸಹಚರರು ಸೇರಿದಂತೆ 17ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.

Tags:    

Similar News