Bike Taxi: ಓಲಾ, ಉಬರ್, ರಾಪಿಡೊ ಬೈಕ್ ಟ್ಯಾಕ್ಸಿ ಸೇವೆ ಜೂನ್ 15ರ ತನಕ ಮುಂದುವರಿಸಲು ಅವಕಾಶ
Bike Taxi: ಈ ಹಿಂದಿನ ಆದೇಶದಲ್ಲಿ ನ್ಯಾಯಾಲಯ, ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಸರ್ಕಾರವು ನಿಯಮಾವಳಿ ರೂಪಿಸಬೇಕು ಎಂದು ಸೂಚಿಸಿತ್ತು. ಆ ವೇಳೆ ಸರ್ಕಾರವು ಬೈಕ್ ಟ್ಯಾಕ್ಸಿಗಳನ್ನು ಸಾರಿಗೆ ಸೇವೆಯಾಗಿ ಕಾರ್ಯನಿರ್ವಹಿಸಲು ಕಷ್ಟ ಎಂದು ಹೇಳಿತ್ತು.;
ಓಲಾ, ಉಬರ್ ಮತ್ತು ರಾಪಿಡೊ ಸಂಸ್ಥೆಗಳ ಬೈಕ್ ಟ್ಯಾಕ್ಸಿ ಸೇವೆಗಳನ್ನು ಜೂನ್ 15ರವರೆಗೆ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದೆ. ಈ ಹಿಂದೆ ಏಪ್ರಿಲ್ 2ರಂದು ನೀಡಿದ ಆದೇಶದ ಪ್ರಕಾರ ಎರಡು ವಾರಗಳಲ್ಲಿ (ಮೇ 14ರಂದು) ಸೇವೆಯನ್ನು ನಿಲ್ಲಿಸಲು ಆದೇಶಿತ್ತು. ಇದೀಗ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಪೀಠ ಮತ್ತಷ್ಟು ದಿನಗಳ ಕಾಲ ಅವಕಾಶ ನೀಡಿದೆ.
ಮೋಟಾರ್ ವಾಹನ ಕಾಯಿದೆ 1988ರ ಸೆಕ್ಷನ್ 93ರ ಅಡಿಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿ ರಚಿಸಬೇಕು ಎಂದು ಸರ್ಕಾರಕ್ಕೆ ಕೋರ್ಟ್ ಸೂಚಿಸಿತ್ತು. ಆದರೆ, ಆ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಹೆಚ್ಚುವರಿ ಸಮಯ ನೀಡಲಾಗಿದೆ.
ಈ ಆದೇಶವು ರಾಪಿಡೊ, ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಏಕೆಂದರೆ ಈ ಸೇವೆಗಳು ಲಕ್ಷಾಂತರ ರೈಡರ್‌ಗಳಿಗೆ ಆಧಾರವಾಗಿತ್ತು. ರಾಪಿಡೊ ಸಂಸ್ಥೆಯು ಕರ್ನಾಟಕದಲ್ಲಿ ಸುಮಾರು 1.5 ಲಕ್ಷ ರೈಡರ್‌ಗಳನ್ನು ಹೊಂದಿದ್ದು, ಪ್ರತಿ ತಿಂಗಳು 50 ಲಕ್ಷಕ್ಕೂ ಹೆಚ್ಚು ರೈಡ್‌ಗಳನ್ನು ಪೂರೈಸುತ್ತದೆ ಎಂದು ಹೇಳಿಕೊಂಡಿದೆ. ಈ ಸೇವೆಗಳ ಸ್ಥಗಿತಗೊಳಿಸುವುದರಿಂದ ಅದನ್ನು ನಂಬಿಕೊಂಡಿದ್ದ ರೈಡರ್‌ಗಳ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಎಂದು ಕೋರ್ಟ್ ಮುಂದೆ ವಾದಿಸಿತ್ತು. ಹೀಗಾಗಿ ಜೂನ್ 15ರವರೆಗೆ ಸೇವೆ ಮುಂದುವರಿಸಲು ಅವಕಾಶ ನೀಡಲಾಗಿದೆ.
ಈ ಹಿಂದಿನ ಆದೇಶದಲ್ಲಿ ನ್ಯಾಯಾಲಯ, ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಸರ್ಕಾರವು ನಿಯಮಾವಳಿ ರೂಪಿಸಬೇಕು ಎಂದು ಸೂಚಿಸಿತ್ತು. ಆ ವೇಳೆ ಸರ್ಕಾರವು ಬೈಕ್ ಟ್ಯಾಕ್ಸಿಗಳನ್ನು ಸಾರಿಗೆ ಸೇವೆಯಾಗಿ ಕಾರ್ಯನಿರ್ವಹಿಸಲು ಕಷ್ಟ ಎಂದು ಹೇಳಿತ್ತು. 2019ರಲ್ಲಿ ರಚಿಸಲಾದ ತಜ್ಞರ ಸಮಿತಿಯ ವರದಿಯು ಬೈಕ್ ಟ್ಯಾಕ್ಸಿಗಳು ಟ್ರಾಫಿಕ್ ಜಾಮ್ ಮತ್ತು ಸುರಕ್ಷತಾ ಸಮಸ್ಯೆ ಹೆಚ್ಚಿಸುತ್ತವೆ ಎಂದು ಹೇಳಿತ್ತು.
ಜೂನ್ 15ರವರೆಗೆ ಸೇವೆ ಮುಂದುವರಿಸಲು ಅವಕಾಶ ನೀಡಿರುವ ಹೈಕೋರ್ಟ್, ಸರ್ಕಾರಕ್ಕೆ ಸೂಕ್ತ ನಿಯಮಾವಳಿಗಳನ್ನು ರೂಪಿಸಲು ಹೆಚ್ಚಿನ ಸಮಯ ನೀಡಿದೆ. ಈ ಅವಧಿಯಲ್ಲಿ ಸರ್ಕಾರವು ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸಂಬಂಧಿಸಿದ ಸುರಕ್ಷತೆ, ಪರವಾನಗಿ ಮತ್ತು ಕಾನೂನು ರಚಿಸುವ ಸಾಧ್ಯತೆಗಳಿವೆ.