Karnataka By-Election | ನಿಖಿಲ್‌, ಭರತ್‌ ನಾಮಪತ್ರ ಸಲ್ಲಿಕೆ; ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಮೈತ್ರಿ ನಾಯಕರು

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದರೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಶಿಗ್ಗಾವಿ ಕ್ಷೇತ್ರದದಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದ್ದಾರೆ.;

Update: 2024-10-25 12:28 GMT

ಇಬ್ಚರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಎನ್‌ಡಿಎ ಅಭ್ಯರ್ಥಿಗಳಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದರೆ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ ಬೊಮ್ಮಾಯಿ ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. 

ಇಬ್ಬರೂ ಮಾಜಿ ಮುಖ್ಯಮಂತ್ರಿಗಳು  ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ತಮ್ಮ  ವಿಧಾನಸಭಾ ಕ್ಷೇತ್ರಗಳನ್ನು ತೆರವು ಮಾಡಿದ್ದರು.   ಉಪಚುನಾವಣೆಯಲ್ಲಿ ಆ ವಿಧಾನಸಭಾ ಕ್ಷೇತ್ರಗಳಿಗೆ ತಮ್ಮ ಪುತ್ರರಿಗೆ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದ್ದಾರೆ.   ನಿಖಿಲ್‌ ಕುಮಾರಸ್ವಾಮಿ ಚುನಾವಣಾ ರಾಜಕಾರಣದಲ್ಲಿ ಎರಡು ಬಾರಿ ಪ್ರಯತ್ನಿಸಿ ಸೋಲು ಕಂಡಿದ್ದು, ಮೂರನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಅಣಿಯಾಗಿದ್ದರೆ, ಭರತ್‌ ಬೊಮ್ಮಾಯಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿ ತಮ್ಮ ಅದೃಷ್ಟವನ್ನು ಒರೆಗೆ ಹಚ್ಚಿದ್ದಾರೆ.

ನಿಖಿಲ್‌ ನಾಮಪತ್ರ

ನಿಖಿಲ್‌ ಕುಮಾರಸ್ವಾಮಿ, ಚನ್ನಪಟ್ಟಣ  ಕ್ಷೇತ್ರದ ಚುನಾವಣೆಗೆ  ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ  ಬೃಹತ್ ರೋಡ್ ಶೋನಲ್ಲಿ ಸಾಗಿ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಅಶ್ವತ್ಥನಾರಾಯಣ ಸೇರಿದಂತೆ ಮೈತ್ರಿ ಪಕ್ಷದ ನಾಯಕರು ರೋಡ್ ಶೋನಲ್ಲಿ ಭಾಗವಹಿಸಿದರು.

ಸಿ.ಪಿ. ಯೋಗೇಶ್ವರ್ ಹರಕೆಯ ಕುರಿ

ರೋಡ್ ಶೋನಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಸಿ.ಪಿ. ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಿರುವುದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ. ಯೋಗೀಶ್ವರ್ ಹರಕೆಯ ಕುರಿಯಾಗಿದ್ದಾರೆ ಎಂದು ಹೇಳಿದರು.

ಮೈತ್ರಿ ಪಕ್ಷದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ಒಮ್ಮತದ ಮೇರೆಗೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದೇವೆ. ಆದರೆ, ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತರ ಅಭಿಪ್ರಾಯ ಆಲಿಸದೇ ಟಿಕೆಟ್ ಘೋಷಣೆ ಮಾಡಲಾಗಿದೆ. ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳಿಂದ ಬೇಸತ್ತು ಅವರ ಪಕ್ಷದ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಬೆಂಬಲಿಸಲಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮುಡಾ, ವಾಲ್ಮೀಕಿ ಹಗರಣದಲ್ಲಿ ಸರ್ಕಾರ ಲೂಟಿ ಮಾಡಿದೆ. ಈಗ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅದಿರು ಅಕ್ರಮ ಮಾರಾಟದಲ್ಲಿ ಜೈಲಿಗೆ ಹೋಗಿದ್ದಾರೆ. ಕಾಂಗ್ರೆಸ್ ಲೂಟಿಕೋರರ ಪಕ್ಷ ಎಂದು ಸಾಬೀತಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಪಂಚೆ ಎತ್ತಿ ಕಟ್ಟಿ ಪಾದಯಾತ್ರೆ ಮಾಡಿ ನೃತಿಸಿದ್ದರು. ಬಳಿಕ ಮೊಣಕಾಲು ನೋವಿಗೆ ಮಸಾಜ್ ಮಾಡಿಸಿಕೊಂಡಿದ್ದರು. ಈಗ ಅವರದ್ದೇ ಪಕ್ಷದ ಶಾಸಕ ಅದಿರು ಲೂಟಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅಕ್ರಮ ಗಣಿಗಾರಿಕೆಯಲ್ಲಿ ಲೂಟಿ ಮಾಡಿದವರು ಯಾರು ಎಂಬುದ ಜನರಿಗೆ ಗೊತ್ತಾಗಿದೆ ಎಂದರು.

16 ತಿಂಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಮಳೆಹಾನಿಯಿಂದ ಪರಿತಪಿಸುತ್ತಿರುವ ರೈತರಿಗೆ ಪರಿಹಾರ ಕೊಟ್ಟಿಲ್ಲ. ಬೆಂಗಳೂರು ಮಳೆಯಲ್ಲಿ ಮುಳುಗಿದ್ದರೂ ಸರ್ಕಾರ ಪ್ರಜ್ಞೆ ಇಲ್ಲದಂತಿದೆ ಎಂದು ವಾಗ್ದಾಳಿ ನಡೆಸಿದರು.

ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

ಶುಭದಿನದ ಸಂಕೇತವಾಗಿ ತಾಯಿಯ ಸೂಚನೆ ಮೇರೆಗೆ ಗುರುವಾರ ನಾಮಪತ್ರ ಸಲ್ಲಿಸಿದ್ದ ಶಿಗ್ಗಾವಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಶುಕ್ರವಾರ ಬೃಹತ್ ರೋಡ್ ಶೋ ನಡೆಸಿ, ಪಕ್ಷದ ನಾಯಕರ ಸಮ್ಮುಖದಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಭಾರತ ಮಾತೆಗೆ ಜೈ ಎಂದರೆ ಜೈಲಿಗೆ ಹಾಕುತ್ತಾರೆ. ಪಾಕಿಸ್ತಾನವನ್ನು ನಾಯಿ ಕುನ್ನಿಯಂತೆ ಕೂಡಿಸಿರುವುದು ಪ್ರಧಾನಿ ನರೇಂದ್ರ ಮೋದಿ ಅವರು ಎಂದು ಹೇಳಿದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೊಡ್ಡ ಬದಲಾವಣೆ ಆಗುತ್ತಿದೆ. ನಿಮ್ಮ ಬೆಳೆಗಳಿಗೆ ಬೆಲೆ ಹೆಚ್ಚಿಸುವ ಕೆಲಸ ಮಾಡಿದ್ದೇನೆ. ಗೊಬ್ಬರಕ್ಕೆ ಸಬ್ಸಿಡಿ ಕೊಡುತ್ತಿದ್ದೇವೆ. ರೈತರ ಬೆಳೆಗಳಿಗೆ ಎಂಎಸ್ ಪಿ ನೀಡುತ್ತಿದ್ದೇವೆ. ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ವರದಾ ನದಿ ನೀರನ್ನು ನಿಮ್ಮ ಹೊಲಗಳಿಗೆ ಹರಿಸುವ ಭಗಿರಥನ ಕೆಲಸವನ್ನು ಯಾರಾದರೂ ಮಾಡಿದ್ದರೆ ಅದು ಬಸವರಾಜ ಬೊಮ್ಮಾಯಿ ಎಂದರು.

ರೋಡ್ ಶೋನಲ್ಲಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಭೈರತಿ ಬಸವರಾಜು, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಇತರರು ಭಾಗವಹಿಸಿದ್ದರು.

ಕಾಂಗ್ರೆಸ್ ನೇರ ಎದುರಾಳಿ

ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಯಾರನ್ನೇ ಅಭ್ಯರ್ಥಿ ಮಾಡಿದರೂ ಕಾಂಗ್ರೆಸ್ ನಮಗೆ ನೇರ ಎದುರಾಳಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಭರತ್ ಬೊಮ್ಮಾಯಿಗೆ ನನಗಿಂತ ಹೆಚ್ಚಿನ ದೊಡ್ಡ ಬೆಂಬಲ ದೊರೆಯುತ್ತದೆ. ದೊಡ್ಡ ಅಂತರದಲ್ಲಿ ಭರತ್ ಗೆಲ್ಲುವ ವಿಶ್ವಾಸ ಇದೆ. ಈ ಬಾರಿ ನಮಗೆ ಅತಿ ಹೆಚ್ಚು ಜನ ಬೆಂಬಲ ದೊರೆಯುತ್ತದೆ ಎಂದು ಹೇಳಿದರು .

ಕ್ಷೇತ್ರದಲ್ಲಿ ಅಸಮಾಧಾನ ಇರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದಲ್ಲಿ ಯಾವುದೆ ಅಸಮಾಧಾನ ಇಲ್ಲ. ನಾನು ಚುನಾವಣೆ ಮಾಡುವಾಗ ಸಣ್ಣಪುಟ್ಟ ಅಸಮಾಧಾನ ಇತ್ತು. ಈಗ ಭರತ್ ಬೊಮ್ಮಾಯಿ ಸ್ಪರ್ಧೆ ಮಾಡುವಾಗ ಯಾವುದೇ ಭಿನ್ನಮತ ಇಲ್ಲ ಎಂದರು.

Similar News