Yatnal Expulsion | ವಿಜಯದಶಮಿಯೊಳಗೆ ವಿಜಯೇಂದ್ರ ಪದಚ್ಯುತಿಗೆ ಗಡುವು: ಇಲ್ಲವೇ ಹೊಸ ಹಿಂದೂ ಪಕ್ಷ; ಯತ್ನಾಳ್ ಶಪಥ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದೇ ಹೋದರೆ ಹೊಸ ಪಕ್ಷ ಕಟ್ಟುವುದು ನಿಸ್ಸಂಶಯ ಎಂದು ಹೇಳುವ ಮೂಲಕ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಂಚಲನ ಸೃಷ್ಟಿಸಿದ್ದಾರೆ.;
ಬಿಜೆಪಿಯಿಂದ ಆರು ವರ್ಷಗಳವರೆಗೆ ಉಚ್ಚಾಟಿತರಾಗಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯದಶಮಿಯಂದು ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಕುರಿತು ಮಹತ್ವ ಘೋಷಣೆ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಕೊಪ್ಪಳದಲ್ಲಿ ಸೋಮವಾರ ಕರೆದಿದ್ದ ತಮ್ಮ ಬೆಂಬಲಿಗರ ಸಭೆಯಲ್ಲಿ ಹೊಸ ಪಕ್ಷದ ರೂಪುರೇಷ, ಧ್ಯೇಯೋದ್ದೇಶಗಳು ಹಾಗೂ ಮುಂದಿನ ಯೋಜನೆಗಳ ಕುರಿತು ವಿವರಿಸಿರುವುದು ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕೀಯ ಹೆಚ್ಚಿರುವುದರಿಂದ ಹಿಂದೂಗಳ ಪಕ್ಷವಾಗಿ ಉಳಿದಿಲ್ಲ. ತಾವು ಸ್ಥಾಪಿಸುವ ಹಿಂದೂ ಪಕ್ಷ ಕಿತ್ತೂರು ರಾಣಿ ಚನ್ನಮ್ಮ ಅಥವಾ ರಾಯಣ್ಣ ಬ್ರಿಗೇಡ್‌ಗೆ ಮಾತ್ರ ಸೀಮಿತವಾಗಿರದೇ ಇಡೀ ಹಿಂದೂ ಸಮುದಾಯದ ಹಿತ ಕಾಯಲಿದೆ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮಹರ್ಷಿ ವಾಲ್ಮೀಕಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಪೂಜಿಸುವ ಎಲ್ಲರನ್ನೂ ಒಟ್ಟುಗೂಡಿಸಿ ಕರೆದೊಯ್ಯಲಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಅಭಿಪ್ರಾಯ ಸಂಗ್ರಹ
ಹೊಸ ರಾಜಕೀಯ ಪಕ್ಷ ಸ್ಥಾಪನೆ ಕುರಿತಂತೆ ವಿಜಯದಶಮಿಯವರೆಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ನಿರ್ಧಾರ ಪ್ರಕಟಿಸಲಾಗುವುದು. ಈಗಾಗಲೇ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ ಎಂದು ಯತ್ನಾಳ್ ತಿಳಿಸಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರನ ವಿರುದ್ಧ ಸಾಕಷ್ಟು ಹಗರಣಗಳಿದ್ದರೂ ವಿಜಯೇಂದ್ರರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಹಗರಣಗಳಿಂದ ರಕ್ಷಿಸಿಕೊಳ್ಳಲು ಅವರು ಕಾಂಗ್ರೆಸ್ ಜೊತೆ 'ಹೊಂದಾಣಿಕೆ ರಾಜಕೀಯ' ಮಾಡಿಕೊಂಡಿದ್ದಾರೆ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದೇ ಹೋದರೆ ಹೊಸ ಪಕ್ಷ ಕಟ್ಟುವುದು ನಿಸ್ಸಂಶಯ ಎಂದು ಪ್ರತಿಪಾದಿಸಿದ್ದಾರೆ.
ಯತ್ನಾಳ್ ಗೊಂದಲಕಾರಿ ಹೇಳಿಕೆ
ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಭಿನ್ನಮತಿಯರ ಸಭೆಯಲ್ಲಿ ಯಾವುದೇ ಹೊಸ ಪಕ್ಷ ಕಟ್ಟುವ ಆಲೋಚನೆ ಇಲ್ಲ ಎಂದು ಯತ್ನಾಳ್ ಹಾಗೂ ಅವರ ತಂಡ ತಿಳಿಸಿತ್ತು. ಶನಿವಾರ ವಿಜಯಪುರದಲ್ಲಿ ಮಾತನಾಡಿದ್ದ ಯತ್ನಾಳ್, ಬಿಜೆಪಿ ಪಕ್ಷವನ್ನು ರಿಪೇರಿ ಮಾಡಿ ಮತ್ತೆ ಅಧಿಕಾರದೊಂದಿಗೆ ಪಕ್ಷಕ್ಕೆ ಬರುತ್ತೇನೆ. ವರಿಷ್ಠರೇ ಗೌರವಯುತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ ಎಂದು ಹೇಳಿದ್ದರು.
ಭಾನುವಾರ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದ ಯತ್ನಾಳ್ ಅವರು, ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಯತ್ನಾಳ್ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಸೋಮವಾರ ಹೊಸ ಪಕ್ಷದ ರೂಪುರೇಷದ ಕುರಿತು ಮಾತನಾಡಿರುವುದು ಕುತೂಹಲ ಕೆರಳಿಸಿದೆ.
ಯತ್ನಾಳ್ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದರಿಂದ ಅವರ ನಿಲುವಿನ ಬಗ್ಗೆ ಅವರಲ್ಲೇ ಸ್ಪಷ್ಟತೆ ಇಲ್ಲ ಎಂಬ ಕೆಲ ಬಿಜೆಪಿ ನಾಯಕರು ಛೇಡಿಸುತ್ತಿದ್ದಾರೆ.
ಬಿಎಸ್‌ವೈ ಜೈಲಿಗೆ ಹೋಗುತ್ತಿದ್ದರು
ರಾಜ್ಯ ಸರ್ಕಾರ ಪೋಕ್ಸೋ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಿದ್ದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜೈಲಿಗೆ ಹೋಗುತ್ತಿದ್ದರು. ಸಾವಿರಾರು ಕೋಟಿ ರೂ. ಲೂಟಿ ಮಾಡಿದ್ದಾರೆ. ಅವರು ಹಣ ಖರ್ಚು ಮಾಡಿರಬಹುದು, ಆದರೆ, ನಾನು ರಾಜ್ಯದ ಭವಿಷ್ಯಕ್ಕಾಗಿ ಪ್ರವಾಸ ಮಾಡಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಭೇಟಿ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸೋಮವಾರ ಹುಬ್ಬಳ್ಳಿಯಲ್ಲಿ ಧಾರವಾಡದ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ 20 ನಿಮಿಷಗಳ ಕಾಲ ಅನಿಲ್ ಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕನ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್, ಇದೊಂದು ಸೌಹಾರ್ದ ಭೇಟಿ. ಕಾಂಗ್ರೆಸ್ ಸೇರುವ ಯಾವುದೇ ಯೋಜನೆ ತಮ್ಮ ಮುಂದಿಲ್ಲ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ಜನ್ಮದಲ್ಲಾಗಲಿ, ಮುಂದಿನ ಜನ್ಮದಲ್ಲಾಗಲಿ ನಾನು ಕಾಂಗ್ರೆಸ್ ಸೇರುವುದಿಲ್ಲ. ಕಾಂಗ್ರೆಸ್ ಮುಸ್ಲಿಮರ ಪಕ್ಷ, ಅದು ಹಿಂದೂ ಪಕ್ಷವಲ್ಲ. ಬಿ.ವೈ.ವಿಜಯೇಂದ್ರ ಹಾಗೂ ಅವರ ತಂಡ ತಮ್ಮ ವಿರುದ್ಧ ಇಂತಹ ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರಾದ ಯತ್ನಾಳ್ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಬಹಿರಂಗ ಸಮರ ಸಾರಿ, ಟೀಕಿಸಿದ್ದ ಕಾರಣ ಬಿಜೆಪಿ ಕೇಂದ್ರ ಶಿಸ್ತು ಪಾಲನಾ ಸಮಿತಿ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿತ್ತು.