Namma Metro | ನಾಗಸಂದ್ರ- ಮಾದಾವರ ನಡುವೆ ಮೆಟ್ರೋ ರೈಲು ಆರಂಭ
ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ-ಮಾದಾವರ ನಡುವೆ ನವೆಂಬರ್ 7ರ ಗುರುವಾರದಿಂದ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಲಿದೆ.;
ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ-ಮಾದಾವರ ನಡುವೆ ನ.7ರ ಗುರುವಾರದಿಂದ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಲಿದೆ.
ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸಾಂಕೇತಿಕ ಉದ್ಘಾಟನೆ ಬುಧವಾರ ನಡೆಯಲಿದ್ದು, ಗುರುವಾರ ಪೂರ್ಣ ಪ್ರಮಾಣದ ವಾಣಿಜ್ಯ ರೈಲು ಸಂಚಾರ ಆರಂಭಿಸಲಾಗುತ್ತದೆ.
ಕಳೆದ ಎಂಟು ವರ್ಷಗಳಿಂದ ನಡೆಯುತ್ತಿದ್ದ ನಾಗಸಂದ್ರ- ಮಾದಾವರ ಮಾರ್ಗದ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದು, ಅಕ್ಟೋಬರ್ 4 ರಂದು ರೈಲ್ವೆ ಸುರಕ್ಷತಾ ಆಯುಕ್ತರು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಬೆಂಗಳೂರಿನ ಸಾರ್ವಜನಿಕರ ಅನುಕೂಲ ಮತ್ತು ಹಿತಾಸಕ್ತಿಯನ್ನು ಗಮನದಲ್ಲಿರಿಸಿ, ಮೆಟ್ರೋ ಹಸಿರು ಮಾರ್ಗದ ಈ ಮೂರು ಮೆಟ್ರೋ ಸ್ಟೇಷನ್ ಗಳು ಸಾರ್ವಜನಿಕರ ಸೇವೆಗೆ ಗುರುವಾರದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.
ನಮ್ಮ ಮೆಟ್ರೋ ಸಂಚಾರ ಆರಂಭದಿಂದಾಗಿ ನೆಲಮಂಗಲ, ತುಮಕೂರು, ಮಾಕಳಿ ಮಾರ್ಗದ ಜನರ ಹಲವು ವರ್ಷಗಳ ಕನಸು ಕೊನೆಗೂ ನನಸಾಗಿದೆ. 298 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ 3.14 ಕಿಮೀ ಉದ್ದವಿರುವ ಹಸಿರು ಮಾರ್ಗದ ನಾಗಸಂದ್ರ- ಮಾದಾವರ ವಿಸ್ತರಿತ ಮಾರ್ಗದಲ್ಲಿ ಸಂಚಾರ ಆರಂಭಿಸಲು ಸಾರ್ವಜನಿಕರು ಆಗ್ರಹಿಸುತ್ತಲೇ ಇದ್ದರು. ಈ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಟೀಕೆಗಳು ಕೇಳಿ ಬಂದಿದ್ದವು. ಆದರೆ ನಿನ್ನೆ ಮೆಟ್ರೋ ಓಪನ್ ಮಾಡಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಯಶವಂತಪುರದಿಂದ ಹಸಿರು ಮಾರ್ಗದ ರೈಲಿನಲ್ಲಿ ಮಾದಾವರ ವರೆಗೆ ಸಂಚಾರ ಮಾಡಬಹುದಾಗಿದ್ದು, ಈ ಮೂಲಕ ಹಸಿರು ಮಾರ್ಗದ ವಿಸ್ತರಿತ ಮಾರ್ಗ ಪ್ರಯಾಣಕ್ಕೆ ಮುಕ್ತವಾಗಲಿದೆ.