Manmohan singh | ದೇಶದ ಆರ್ಥಿಕ ಸ್ಥಿತಿ ಬದಲಿಸಿದ ಯೋಜನೆಗಳಿಗೆ ಶ್ರೀಕಾರ ಹಾಕಿದ ಆರ್ಥಿಕ ಸುಧಾರಣೆ ಹರಿಕಾರ

ಯುಪಿಎ ಅವಧಿಯಲ್ಲಿ ದೇಶದ ಪ್ರಧಾನಿ ಗದ್ದುಗೆ ಏರಿದ ಬಳಿಕ ದೇಶದ ಆರ್ಥಿಕತೆಗೆ ಮತ್ತಷ್ಟು ವೇಗ ನೀಡಿದರು. ಮನ ಮೋಹನ್ ಸಿಂಗ್ ಅವರು ತಮ್ಮ ಅವಧಿಯಲ್ಲಿ ಜಾರಿಗೆ ತಂದ ಹಲವು ಮಹತ್ವದ ಯೋಜನೆಗಳು ದೇಶದ ಅಭಿವೃದ್ಧಿಯ ಗತಿಯನ್ನೇ ಬದಲಿಸಿದವು.

Update: 2024-12-26 20:15 GMT
ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಜತೆ ಮನಮೋಹನ್‌ ಸಿಂಗ್‌.

2007ರಲ್ಲಿ ಇಡೀ ಜಗತ್ತಿನ ರಾಷ್ಟ್ರಗಳು ಭಾರತದತ್ತ ದೃಷ್ಟಿ ನೆಟ್ಟಿದ್ದವು. ಭಾರತದ ಅಂದಿನ ಜಿಡಿಪಿ ಬೆಳವಣಿಗೆ ದರ ಶೇ 9 ರಷ್ಟು ದಾಖಲಿಸಿ, ವಿಶ್ವದ ಎರಡನೇ ವೇಗದ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿತ್ತು. ಇದಕ್ಕೆ ಕಾರಣ ಅಂದಿನ ಪ್ರಧಾನಿ ಡಾ. ಮನಮೋಹನಸಿಂಗ್.

ಪ್ರಧಾನಿ ಪಿ.ವಿ.ನರಸಿಂಹರಾವ್ ಸಂಪುಟದಲ್ಲಿ ವಿತ್ತ ಸಚಿವರಾಗಿ ಆರ್ಥಿಕ ಉದಾರೀಕರಣ ನೀತಿ ಜಾರಿಗೆ ತಂದು ದೇಶವನ್ನು ಬಿಕ್ಕಟ್ಟಿನಿಂದ ಪಾರು ಮಾಡಿದ್ದರು.

ಯುಪಿಎ ಅವಧಿಯಲ್ಲಿ ದೇಶದ ಪ್ರಧಾನಿ ಗದ್ದುಗೆ ಏರಿದ ಬಳಿಕ ದೇಶದ ಆರ್ಥಿಕತೆಗೆ ಮತ್ತಷ್ಟು ವೇಗ ನೀಡಿದರು. ಮನ ಮೋಹನ್ ಸಿಂಗ್ ಅವರು ತಮ್ಮ ಅವಧಿಯಲ್ಲಿ ಜಾರಿಗೆ ತಂದ ಹಲವು ಮಹತ್ವದ ಯೋಜನೆಗಳು ದೇಶದ ಅಭಿವೃದ್ಧಿಯ ಗತಿಯನ್ನೇ ಬದಲಿಸಿದವು.

ಡಾ. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಭಾರತದ ಪ್ರಧಾನಿಯಾದ ಬಳಿಕ ಭಾರತದ ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಜಾರಿಗೆ ತಂದ ಯೋಜನೆಗಳ ವಿವರ ಇಲ್ಲಿದೆ.

ಎಫ್‌ಡಿಐಗೆ ರತ್ನಗಂಬಳಿ: ವಿದೇಶಿ ಹೂಡಿಕೆಗಳಿಗೆ ಮುಕ್ತ ಅವಕಾಶ ಒದಗಿಸಲಾಯಿತು. ಇದರಿಂದ ವ್ಯಾಪಾರ ಅಡೆತಡೆಗಳು ನಿವಾರಣೆ ಆದವು. ಕೈಗಾರಿಕಾ ಕ್ಷೇತ್ರದಲ್ಲಿ ಹೂಡಿಕೆ ಪ್ರಗತಿಗೆ ನಾಂದಿ ಹಾಡಿತು. ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ವಿದೇಶಿ ಹೂಡಿಕೆಗೆ ಕಾರಣವಾಯಿತು.

ರೂಪಾಯಿ ಅಪಮೌಲ್ಯೀಕರಣ: ಸಾಲದ ಬಿಕ್ಕಟ್ಟಿನಿಂದ ಹೊರಬರಲು ಭಾರತೀಯ ರೂಪಾಯಿ ಮೌಲ್ಯವನ್ನು ಅಪಮೌಲ್ಯಗೊಳಿಸಲಾಯಿತು. ಇದರಿಂದ ರಫ್ತು ಉತ್ತೇಜನ ಹಾಗೂ ಭಾರತದ ವಿದೇಶಿ ವಿನಿಮಯ ವ್ಯವಸ್ಥೆ ಸುಧಾರಿಸಿತು.

ನರೇಗಾ ಕಾಯ್ದೆ ಜಾರಿ: ಗ್ರಾಮೀಣ ಭಾಗದ ಕುಟುಂಬಗಳಿಗೆ 100 ದಿನಗಳ ಉದ್ಯೋಗ ಖಾತರಿಪಡಿಸುವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪ್ರಾರಂಭಿಸಿದರು. ಇದರಿಂದ ಗ್ರಾಮೀಣ ಭಾಗದ ಬಡತನ ನಿವಾರಣೆ ಆಯಿತು. ಹಳ್ಳಿಗಳಲ್ಲಿ ಮೂಲಸೌಕರ್ಯ ವೃದ್ಧಿಸಿತು.

ಮಾಹಿತಿ ಹಕ್ಕು ಕಾಯಿದೆ: ಸರ್ಕಾರಿ ದಾಖಲೆಗಳು ಮತ್ತು ನಿರ್ಧಾರಗಳಲ್ಲಿ ಮುಕ್ತವಾಗಿ ಪ್ರವೇಶಿಸುವ ಅವಕಾಶವನ್ನು ಮಾಹಿತಿ ಹಕ್ಕು ಕಾಯ್ದೆ ಒದಗಿಸಿತು. ಇದರಿಂದಾಗಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಾಯಿತು. ಸರ್ಕಾರದ ನೀತಿ ನಿರ್ಧಾರಗಳ ಕುರಿತು ಆರ್‌ಟಿಐನಲ್ಲಿ ಅರ್ಜಿ ಸಲ್ಲಿಸಿದರೆ ಅದಕ್ಕೆ ಸೂಕ್ತ ವಿವರವನ್ನು ನೀಡಬೇಕಾಗುತ್ತದೆ.

ಕೃಷಿ ಸಾಲ ಮನ್ನಾ: ಮನಮೋಹನ ಸಿಂಗ್ ಅವರು ಕಷ್ಟದಲ್ಲಿದ್ದ ದೇಶದ ರೈತರ 60,000 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದರು. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಯಿತು. ಮನಮೋಹನಸಿಂಗ್‌ ಹೊರತುಪಡಿಸಿ ಬೇರೆ ಯಾವ ಸರ್ಕಾರಗಳು ದೊಡ್ಡ ಪ್ರಮಾಣದ ರೈತರ ಸಾಲ ಮನ್ನಾ ಮಾಡಿದ ಉದಾಹರಣೆಗಳಿರಲಿಲ್ಲ.

ಸರಕು ಮತ್ತು ಸೇವಾ ತೆರಿಗೆ (GST): ದೇಶಾದ್ಯಂತ ಏಕೀಕೃತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಇದು ತೆರಿಗೆ ಸುಧಾರಣೆಗೆ ಅಡಿಪಾಯ ಹಾಕಿತು. ಸರಕು ಹಾಗೂ ಸೇವೆಗಳ ಮೇಲೆ ಒಂದೇ ತೆರಿಗೆ ಹಾಕಲಾಯಿತು.

ಬಾಲ್ಯ ವಿವಾಹ ನಿಷೇಧ ಕಾಯ್ದೆ: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದ್ದ ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲು ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ತರಲಾಯಿತು. ಇದರಿಂದ ಹೆಣ್ಣು ಮಕ್ಕಳ ಸಬಲೀಕರಣ ಸಾಧ್ಯವಾಯಿತು.

ಶಿಕ್ಷಣ ಹಕ್ಕು ಕಾಯಿದೆ: 6 ವರ್ಷದಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲಾಯಿತು. ಪ್ರತಿಷ್ಠಿತ ಖಾಸಗಿ ಶಾಲೆಗಳನ್ನು ಆರ್‌ಟಿಇ ಕಾಯ್ದೆ ವ್ಯಾಪ್ತಿಗೆ ಸೇರಿಸಿ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸಲಾಯಿತು.

ಆಹಾರ ಭದ್ರತಾ ಕಾಯಿದೆ: ಭಾರತದ ಜನಸಂಖ್ಯೆಯ ಮೂರನೇ ಎರಡರಷ್ಟು ಜನರಿಗೆ ಸಬ್ಸಿಡಿ ಆಹಾರವನ್ನು ಪರಿಚಯಿಸಲಾಯಿತು. ಬಡವರಿಗೆ ಇದರಿಂದ ಪಡಿತರ ಸಿಗುವಂತಾಯಿತು. ಈಗಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಪರಿತರ ವಿತರಿಸುತ್ತಿವೆ.

ಜೆಎನ್‌ ನರ್ಮ್‌ ಯೋಜನೆ: ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ (JNNURM) ಯೋಜನೆಯನ್ನು ಮನಮೋಹನಸಿಂಗ್‌ ಪ್ರಾರಂಭಿಸಿದರು. ಮಹಾನಗರಗಳಲ್ಲಿ ಮೂಲ ಸೌಕರ್ಯ, ಸಾರಿಗೆ ವ್ಯವಸ್ಥೆ ಬಲಪಡಿಸಲು ನೆರವಾಯಿತು.

ರಾಷ್ಟ್ರೀಯ ತನಿಖಾ ಸಂಸ್ಥೆ ರಚನೆ: 2008ನ. 26 ರಂದು ನಡೆದ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಕೇಂದ್ರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ರಚಿಸಲಾಯಿತು. ಭಯೋತ್ಪಾದನೆಗೆ ಸಂಬಂಧಿಸಿದ ಯಾವುದೇ ಪ್ರಕರಣಗಳ ತನಿಖೆಯನ್ನು ಎನ್‌ಐಎ ನಿರ್ವಹಿಸಲಿದೆ.

Tags:    

Similar News