Mangalore High Court Bench| ಕರಾವಳಿ-ಮಲೆನಾಡಿಗೆ ಮಂಗಳೂರು ಹೈಕೋರ್ಟ್‌ ಪೀಠ: ಸ್ಪೀಕರ್‌ ಖಾದರ್‌ ಸಭೆ?

ಕರಾವಳಿ ಕರ್ನಾಟಕ, ಮಲೆನಾಡನ್ನು ಸೇರಿಸಿಕೊಂಡು ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂಬ ದಶಕದ ಬೇಡಿಕೆಗೆ ಈಗ ಬಲ ಬಂದಿದೆ. ಈ ಕುರಿತು ಹೋರಾಟ ಸಮಿತಿ ರೂಪುಗೊಂಡಿದೆ.;

Update: 2024-11-01 03:30 GMT

ಕರಾವಳಿ ಕರ್ನಾಟಕ, ಮಲೆನಾಡಿನ ಆರು ಜಿಲ್ಲೆಗಳಿಗೆ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂಬ ದಶಕದ ಬೇಡಿಕೆಗೆ ಈಗ ಬಲ ಬಂದಿದೆ. ಈ ಕುರಿತು ಹೋರಾಟ ಸಮಿತಿ ರೂಪುಗೊಂಡಿದೆ. ಮಂಗಳೂರು ವಕೀಲರ ಸಂಘ ವಿಷಯ ಮಂಡನೆಯೊಂದಿಗೆ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಿಗೆ ತೆರಳಿ ಅಲ್ಲಿನ ವಕೀಲರೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತಿದೆ.

ಹೈಕೋರ್ಟ್ ಪೀಠವಾದರೆ ವಕೀಲರಿಗೆ ಲಾಭವೆಂಬ ಯೋಚನೆಯನ್ನು ಮನಸ್ಸಿಂದ ಕಿತ್ತುಹಾಕಿ, ಇದರಿಂದ ಕಕ್ಷಿದಾರರಿಗೂ ಶೀಘ್ರ ನ್ಯಾಯದಾನವಾಗುತ್ತದೆ, ತನ್ಮೂಲಕ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಬೆಂಗಳೂರಿಗೆ ಹೋಗಿಬರುವ ಸಮಯ, ಶ್ರಮ ಮತ್ತು ಹಣ ಉಳಿತಾಯವಾಗುತ್ತದೆ ಎಂಬ ವಿಚಾರವನ್ನು ಜನಾಂದೋಲನ ರೂಪವಾಗಿ ಸಾರ್ವಜನಿಕರ ವಿಶ್ವಾಸ ಗಳಿಸುವ ಕಾರ್ಯಕ್ಕೀಗ ವಕೀಲರು ಮುಂದಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿಯಲ್ಲಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಿಗೆ ಸಹಕಾರಿಯಾಗುವಂತೆ ಈಗಾಗಲೇ ಹೈಕೋರ್ಟ್ ಪೀಠ ಸ್ಥಾಪನೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ಸೇರಿದಂತೆ ಕರಾವಳಿ ಮಲೆನಾಡಿಗೆ ಸಂಬಂಧಿಸಿದ ಹೈಕೋರ್ಟ್‌ ಪ್ರಕರಣಗಳ ಶೀಘ್ರ ಇತ್ಯರ್ಥ  ಹಾಗೂ  ವಕೀಲರು ಹಾಗೂ ಕಕ್ಷಿದಾರರಿಗೆ ಮಂಗಳೂರು ಹೈಕೋರ್ಟ್‌ ಸ್ಥಾಪನೆ ಸಹಾಯ ಮಾಡುತ್ತದೆ ಎಂಬುದು ಪ್ರಮುಖ ಬೇಡಿಕೆಯಾಗಿದೆ. 

ಅಂದಾಜು 50 ಸಾವಿರ ಪ್ರಕರಣ

ಸಣ್ಣ, ಪುಟ್ಟ ಕೇಸುಗಳು ಸೇರಿ ರಾಜ್ಯ ಹೈಕೋರ್ಟ್ ನಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿ ಒಟ್ಟು ಆರು ಜಿಲ್ಲೆಗಳದ್ದು 50 ಸಾವಿರದಷ್ಟು ಪ್ರಕರಣ ವಿಚಾರಣೆಯಲ್ಲಿದ್ದು, ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇವುಗಳ ಪೈಕಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯದ್ದು ಅತಿ ಹೆಚ್ಚು ಪ್ರಕರಣಗಳಿವೆ. ಕಲಬುರಗಿ, ಹುಬ್ಬಳ್ಳಿ ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲಾಗಿದೆ. ಈ ಜಿಲ್ಲೆಗಳ ಅಂಕಿ, ಸಂಖ್ಯೆ, ಮತ್ತು ಈಗಾಗಲೇ ಪೀಠ ಬೇಡಿಕೆಗೆ ಉಲ್ಲೇಖಿಸಲಾದ ಜಿಲ್ಲೆಗಳ ವ್ಯಾಪ್ತಿಯ ಪ್ರಕರಣಗಳ ಸಂಖ್ಯೆ ಹೋಲಿಸಿದರೆ, ಹೈಕೋರ್ಟ್ ಪೀಠದ ಅನಿವಾರ್ಯತೆ ಮಂಗಳೂರಿನಲ್ಲಿ ಕಾಣಿಸುತ್ತಿದೆ.

ಸ್ಪೀಕರ್‌ ಖಾದರ್‌ ನೇತೃತ್ವದಲ್ಲಿ ಸಭೆ

ಈ ಕುರಿತು ಈಗಾಗಲೇ ವಕೀಲರ ಸಂಘಗಳಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಐವನ್ ಡಿಸೋಜ ಮತ್ತು ತಂಡ, ಮನವರಿಕೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಅವರ ಪ್ರಕಾರ, ಬೆಂಗಳೂರಿನ ಹೊರೆ ಇಳಿಸಲು ಮಂಗಳೂರಿನಲ್ಲಿ ಪೀಠ ಬೇಕೇ ಬೇಕು. ಇದರಿಂದ ಆರು ಜಿಲ್ಲೆಗಳ ಜನರಿಗೆ ಲಾಭವಾಗಲಿದೆ. ಬೆಂಗಳೂರು ಪ್ರಧಾನ ಪೀಠ ಕರಾವಳಿ ಭಾಗದಿಂದ 350 ಕಿ.ಮೀ. ದೂರದಲ್ಲಿದ್ದು, ಕಕ್ಷಿಗಾರರು ಪ್ರಯಾಣಿಸುವ ಸಂಕಷ್ಟ ಹೊಂದಿದ್ದಾರೆ. ಅಲ್ಲದೆ, ಮಳೆಗಾಲದಲ್ಲಿ ರಸ್ತೆ ಮತ್ತು ರೈಲು ಸಂಪರ್ಕ ಅನಿಶ್ಚಿತತೆಯಲ್ಲಿ ಕೂಡಿರುತ್ತದೆ. ಆಹಾರ, ವಸತಿವೆಚ್ಚ ದುಬಾರಿಯೂ ಹೌದು. ಇದರ ಜತೆಗೆ ಕರಾವಳಿ ಭಾಗದಲ್ಲಿ ಕಾನೂನು ಪದವಿ ಹೊಂದಿದ ಹಿರಿಯ ಮತ್ತು ಕಿರಿಯ ವಕೀಲರು ಸಾಕಷ್ಟು ಸಂಖ್ಯೆಯಲ್ಲಿದ್ದು, ಕಾನೂನು ವಿಶ್ವವಿದ್ಯಾನಿಲಯವೂ ಸ್ಥಾಪನೆಯಾಗುವ ಹಂತದಲ್ಲಿದೆ.

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಜಾಗ ಸಹಿತ ಪೂರಕ ವ್ಯವಸ್ಥೆಗಳೂ ಇದ್ದು, ಇದಕ್ಕಾಗಿ ಪ್ರತ್ಯೇಕ ಕೆಲಸವೇನೂ ಹೊಸದಾಗಿ ಆಗಬೇಕಾಗಿಲ್ಲ. ಇದನ್ನೆಲ್ಲಾ ಮನವರಿಕೆ ಮಾಡುವ ಕಾರ್ಯ ಆರಂಭಿಸಲಾಗಿದ್ದು, ಸರಕಾರದ ಕಾನೂನು ಮಂತ್ರಿಗಳೂ ನಮ್ಮ ಆಶೋತ್ತರಗಳಿಗೆ ಸ್ಪಂದಿಸುತ್ತಾರೆ, ಸ್ಪೀಕರ್ ಖಾದರ್ ಅವರೂ ನ್ಯಾಯವಾದಿಯಾಗಿದ್ದು, ಅವರ ನೇತೃತ್ವದಲ್ಲಿ ಆರು ಜಿಲ್ಲೆಗಳ ಶಾಸಕರ ಹಾಗೂ ಎಂ.ಪಿ.ಗಳ ಸಭೆ ಕರೆಯಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ದ ಫೆಡರಲ್‌ ಕರ್ನಾಟಕಕ್ಕೆ ಹೇಳಿದ್ದಾರೆ. 

ಜನಾಂದೋಲನ ಅಗತ್ಯ

ಐವನ್ ಡಿಸೋಜ ಅವರಿಗೆ ಪೂರಕವಾಗಿ ಮಂಗಳೂರಿನ ಹಿರಿಯ ವಕೀಲ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಅವರೂ ಜನಾಂದೋಲನ ಅಗತ್ಯವಿದೆ ಎಂದು ಹೇಳುತ್ತಾರೆ. ಸದ್ಯದಲ್ಲೇ ಪಾದಯಾತ್ರೆ ಮಾಡಲಿದ್ದೇವೆ ಎಂದು ಐವನ್ ಹೇಳಿದರೆ, ಹುಬ್ಬಳ್ಳಿ, ಧಾರವಾಡ ಪೀಠ ಸ್ಥಾಪನೆಗೆ ಬಂದ್ ಮಾದರಿಯ ಹೋರಾಟ ನಡೆದಿತ್ತು, ಅಂಥ ಸೌಂಡ್ ಮಾಡುವ ಹೋರಾಟಗಳೂ ಆಗಬೇಕು ಎಂದು ಮೋನಪ್ಪ ಭಂಡಾರಿ ಹೇಳುತ್ತಾರೆ.

ಇದು ವಕೀಲರಿಗಷ್ಟೇ ಅಲ್ಲ, ಜನಸಾಮಾನ್ಯರಿಗೂ ಅಗತ್ಯವಾದ ವಿಚಾರ. ನ್ಯಾಯದಾನ ಶೀಘ್ರವಾದರೆ, ತಮಗೇ ಅನುಕೂಲವಾಗಲಿದೆ ಎಂಬುದು ಜನರಿಗೆ ಮನವರಿಕೆ ಮಾಡುವ ಕಾರ್ಯವಾಗಬೇಕು. ಇದರಲ್ಲಿ ಜನಪ್ರತಿನಿಧಿಗಳು, ಮಠಾಧೀಶರು, ಚರ್ಚ್, ಮಸೀದಿಗಳ ಪ್ರಮುಖರು, ಧಾರ್ಮಿಕ ಮುಖಂಡರು, ವಿದ್ಯಾರ್ಥಿ ಮುಖಂಡರು, ಆಟೊ, ಟ್ಯಾಕ್ಸಿ, ಬಸ್ ಚಾಲಕರ ಪ್ರತಿನಿಧಿಗಳು, ವಾಣಿಜ್ಯೋದ್ಯಮಿಗಳು, ವೈದ್ಯರ ಸಹಿತ ಎಲ್ಲರೂ ಪಾಲ್ಗೊಳ್ಳಬೇಕಾಗುತ್ತದೆ. ನ್ಯಾಯದಾನ ತ್ವರಿತಗತಿಯಲ್ಲಿ ಆದರೆ ಎಲ್ಲರಿಗೂ ಒಳ್ಳೆಯದೇ ಎಂಬ ವಿಚಾರವನ್ನು ಐವನ್ ಡಿಸೋಜ ಹಾಗೂ ಮೋನಪ್ಪ ಭಂಡಾರಿ ಮಂಡಿಸುತ್ತಾರೆ.

ಹೈಕೋರ್ಟ್ ಪೀಠ 

ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಪೂರಕ ಅಂಶಗಳಿವೆ. ವೈದ್ಯಕೀಯ, ಬ್ಯಾಂಕಿಂಗ್, ಶಿಕ್ಷಣ, ಕೈಗಾರಿಕಾ ಕೇಂದ್ರವಾಗಿರುವ ಮಂಗಳೂರು ಸದ್ಯದಲ್ಲೇ ಐಟಿ ಹಬ್ ಕೂಡ ಆಗಲಿದೆ. ಇಲ್ಲಿಗೆ ಬರುವವರಿಗೆ ವಾಸ್ತವ್ಯದ ವ್ಯವಸ್ಥೆ ಕಡಿಮೆ ಖರ್ಚಿನಲ್ಲಿ ದೊರೆಯುತ್ತದೆ. ವೃತ್ತಿಪರ ಕಾನೂನು ಸೇವೆಗಳಿಗೆ ಮಹಾನಗರಗಳಲ್ಲಿ ನೀಡಬೇಕಾದ ದುಬಾರಿ ಶುಲ್ಕದ ಬದಲು ಬಡಜನರಿಗೆ ಕಡಿಮೆ ವೆಚ್ಚದಲ್ಲಿ ಕಾನೂನು ಸೇವೆ ದೊರೆಯುತ್ತದೆ. ವಕೀಲರೂ ಸಾಕಷ್ಟು ಸಂಖ್ಯೆಯಲ್ಲಿದ್ದು, ಬೆಂಗಳೂರು ಮಹಾನಗರದ ಟ್ರಾಫಿಕ್ ಜಂಜಾಟದಲ್ಲಿ ಸೊರಗುವ ಬದಲು ಹಾಸನದವರಿಗೂ ಭವಿಷ್ಯದಲ್ಲಿ ರಸ್ತೆ ಸಂಪರ್ಕ ಸರಿಯಾದರೆ, ಮಂಗಳೂರ ಸಂಪರ್ಕವೇ ಸುಲಭ. ಹೈಕೋರ್ಟ್ ಪೀಠ ಸ್ಥಾಪನೆಯಾದ ಬಳಿಕ ದೂರದೂರುಗಳಿಂದ ಹಿರಿಯ ವಕೀಲರು ವಿಶೇಷವಾಗಿ ಆಗಮಿಸುತ್ತಾರೆ ಎಂದಾದರೆ, ಸಂಪರ್ಕ ವ್ಯವಸ್ಥೆಗೇನೂ ಕೊರತೆ ಇಲ್ಲ.

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೇ ಇದೆ. ದೇಶದ ಎಲ್ಲ ಭಾಗಗಳಿಂದಲೂ ಇಲ್ಲಿಗೆ ಸುಲಭವಾಗಿ ಬಂದು ತಲುಪಬಹುದು. ಹೀಗೆ ಈ ಎಲ್ಲ ವ್ಯವಸ್ಥೆಗಳೂ ಹೈಕೋರ್ಟ್ ಪೀಠ ರಚನೆಗೆ ಪೂರಕವಾದ ಅಂಶಗಳಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಇದೊಂದು ಚಳವಳಿಯ ರೂಪ ಪಡೆದುಕೊಂಡು ಸರಕಾರ ಮುಂದಿನ ಬಜೆಟ್ ನಲ್ಲಿ ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅನುದಾನ ನಿಗದಿ ಎಂಬ ವಿಚಾರ ಮಂಡಿಸಿದರೆ, ಅಲ್ಲಿಗೆ ಹೋರಾಟಕ್ಕೆ ನ್ಯಾಯ ದೊರಕಿದಂತಾಗುತ್ತದೆ.

ಕಮಿಷನ್ ಆಫ್ ಇಂಡಿಯಾ ಸಲಹೆ

ʼದ ಫೆಡರಲ್‌ ಕರ್ನಾಟಕʼ ಜತೆ ಮಾತನಾಡಿದ ಮಂಗಳೂರಿನ ಹಿರಿಯ ವಕೀಲ ಪೃಥ್ವೀರಾಜ್ ರೈ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಬೇಕು ಎಂಬ ವಿಷಯದ ಕುರಿತು ಒಂದು ಮುಖ್ಯವಾದ ವಿಚಾರವನ್ನು ಬೆಳಕು ಚೆಲ್ಲುತ್ತಾರೆ. ಅದೇನೆಂದರೆ, ಲಾ ಕಮಿಷನ್ ಆಫ್ ಇಂಡಿಯಾ 2019ರಲ್ಲಿ ನ್ಯಾಯಾಂಗ ಸುಧಾರಣೆ ಕುರಿತು ಕೆಲ ಸಲಹೆಗಳನ್ನು ತನ್ನ ವರದಿಯಲ್ಲಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಈ ಸಲಹೆಗಳ ಮುಖ್ಯ ಅಂಶಗಳು ಹೀಗಿವೆ.

1. ದೇಶದ ಜನರು ಶೀಘ್ರ ನ್ಯಾಯೋಚಿತ ಪರಿಹಾರ ಸಿಗುವಂತಾಗಲು ಹೈಕೋರ್ಟ್ ಗಳ ಸ್ಥಾಪನೆ ಮತ್ತು ಕಾರ್ಯವಿಧಾನಗಳಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಿದೆ.

2. ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸುವುದು ಮತ್ತು ಹೊಸ ಪೀಠಗಳ ಸ್ಥಾಪನೆ ಅಗತ್ಯವೇಕೆಂದರೆ, ಹೆಚ್ಚಿನ ಎಲ್ಲ ಹೈಕೋರ್ಟ್ ಗಳಲ್ಲಿ ವಿಚಾರಣೆಗೆ ಬಾಕಿ ಇರುವ ವ್ಯಾಜ್ಯಗಳ ಸಂಖ್ಯೆ ಬಹಳಷ್ಟಿದ್ದು, ಈಗ ಇರುವ ನ್ಯಾಯಾಧೀಶರ ಸಂಖ್ಯೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಕಾಗುವುದಿಲ್ಲ. ಅಲ್ಲದೆ, ಹೊಸದಾಗಿ ಸಲ್ಲಿಕೆಯಾಗುವ ವ್ಯಾಜ್ಯಗಳ ಸಂಖ್ಯೆಯು ವಿಲೇವಾರಿಯಾಗುವ ಕೇಸುಗಳಿಂದ ಹೆಚ್ಚಾಗಿದ್ದು, ಕೋರ್ಟಿನಲ್ಲಿ ಬಾಕಿ ಇರುವ ವ್ಯಾಜ್ಯಗಳ ಸಂಖ್ಯೆ ಏರುತ್ತಿದೆ. ಕಕ್ಷಿಗಾರರು ಶೀಘ್ರ ನ್ಯಾಯ ವಿಲೇವಾರಿಯಿಂದಾಗಿ ಆತಂಕರಹಿತ ಬದುಕನ್ನು ಹೊಂದಲುಜ ಮೂಲಭೂತ ಹಕ್ಕುಳ್ಳವರಾಗಿರುತ್ತಾರೆ.

3. ಹೈಕೋರ್ಟ್ ಗಳ ಕೆಲಸ ವಿಕೇಂದ್ರೀಕರಣಗೊಳ್ಳಬೇಕಿದ್ದು, ರಾಜ್ಯಗಳಲ್ಲಿ ಹೆಚ್ಚಿನ ಪೀಠ ಸ್ಥಾಪನೆ ಅಗತ್ಯವಿದೆ. ಹೆಚ್ಚುವರಿ ನ್ಯಾಯಾಧೀಶರ ಮತ್ತು ಸಿಬ್ಬಂದಿಗಳನ್ನು ಒಂದೇ ಆವರಣದಲ್ಲಿ ಸ್ಥಾಪಿಸುವುದು ಅಸಾಧ್ಯ. ಆದುದರಿಂದ ಹೊಸ ಪೀಠಗಳ ಸ್ಥಾಪನೆ ಅಗತ್ಯ.

4. ಹೊಸ ಪೀಠಗಳು ಸ್ಥಾಪನೆ ಆಗುವುದರಿಂದ ಕಕ್ಷಿಗಾರರಿಗೆ ಹೈಕೋರ್ಟ್ ಮೊರೆ ಹೋಗಲು ದೂರಪ್ರಯಾಣದ ಅಗತ್ಯ ಇರುವುದಿಲ್ಲ.

5. ದೇಶದ ಸರ್ವತೋಮುಖ ಅಭಿವೃದ್ಧಿಗೆ ಹೊಸ ಪೀಠಗಳ ಹಣಕಾಸು ಅಗತ್ಯಗಳು ಅಡ್ಡಿಯಾಗಬಾರದು. ಕಕ್ಷಿಗಾರರ ಅಗತ್ಯಗಳನ್ನು ಮನಗಂಡು, ಹಿತಾಸಕ್ತಿ ರಕ್ಷಿಸಬೇಕು. ನ್ಯಾಯಾಧೀಶರು ಮತ್ತು ವಕೀಲರ ಅಸ್ತಿತ್ವವು ಕಕ್ಷಿಗಾರರಿಂದಾಗಿದ್ದು, ಅವರ ಹಿತಾಸಕ್ತಿಯನ್ನು ಕಾಪಾಡಬೇಕು.

6. ಹೊಸ ಪೀಠಗಳ ಸ್ಥಾಪನೆ ಖಂಡಿತವಾಗಿಯೂ ಕಕ್ಷಿಗಾರರಿಗೆ ಮತ್ತು ವಕೀಲರಿಗೆ ಸಹಕಾರಿಯಾಗಲಿದ್ದು, ಹೊಸ ಆರಂಭವನ್ನು ಈ ದಿಶೆಯಲ್ಲಿ ಮಾಡಬೇಕಾಗಿದೆ.

ಈ ಅಂಶಗಳನ್ನು ಲಾ ಕಮಿಷನ್ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದು, ಸಂವಿಧಾನದ ಆರ್ಟಿಕಲ್ 39ಎ ಪ್ರಕಾರ, ಸಮಾನ ಮತ್ತು ಉಚಿತ ನ್ಯಾಯ ದೊರಕಬೇಕಿದೆ. ಈ ಎಲ್ಲವೂ ಮಂಗಳೂರಿಗೆ ಹೊಂದಿಕೊಳ್ಳುತ್ತಿದ್ದು, ಮಂಗಳೂರಿನಲ್ಲಿ (ಕರಾವಳಿ ಕರ್ನಾಟಕ) ಹೈಕೋರ್ಟ್ ಪೀಠ ಸ್ಥಾಪನೆಯಾಗುವುದು ಅಗತ್ಯವೂ, ಅನಿವಾರ್ಯವೂ ಹೌದು. ಕಕ್ಷಿಗಾರನ ಹಿತದೃಷ್ಟಿಯಿಂದ ಇದು ಅತ್ಯಗತ್ಯವಾಗಿದೆ ಎಂದು ಪ್ರಥ್ವೀರಾಜ್ ರೈ ಅಭಿಪ್ರಾಯಪಡುತ್ತಾರೆ.

Tags:    

Similar News