ಮದುವೆಗೆ ನಿರಾಕರಿಸಿದ ಯುವತಿಗೆ ಇರಿದು ಪ್ರಿಯಕರ ಆತ್ಮಹತ್ಯೆ

ಕೃತ್ಯದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.;

Update: 2025-07-07 14:03 GMT

ಎಂಟು ವರ್ಷಗಳ ಪ್ರೀತಿಗೆ ಯುವತಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಪ್ರಿಯಕರ ಆಕೆಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಫರಂಗಿಪೇಟೆಯಲ್ಲಿ ಸೋಮವಾರ ನಡೆದಿದೆ.

ಬಂಟ್ವಾಳ ತಾಲೂಕಿನ ಕೋಡ್ಮಣ್ ಗ್ರಾಮದ ನಿವಾಸಿ ಸುಧೀರ್ (30), ಯುವತಿಯ ಮೇಲೆ ದಾಳಿ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಸುಧೀರ್ ಮತ್ತು ಫರಂಗಿಪೇಟೆಯ ಯುವತಿ ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಅವರ ನಡುವೆ ಮನಸ್ತಾಪ ಉಂಟಾಗಿತ್ತು. ಮನಸ್ತಾಪದ ನಂತರವೂ ಸುಧೀರ್ ಯುವತಿಗೆ ಕರೆ ಮಾಡುತ್ತಿದ್ದ ಮತ್ತು ಅವಳು ಎಲ್ಲಿಗೆ ಹೋದರೂ ಹಿಂಬಾಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ, ಸುಧೀರ್ ಫರಂಗಿಪೇಟೆಯ ಸುಜೀರ್ ಮಲ್ಲಿ ಬಳಿ ಬಂದು ಯುವತಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಕೋಪಗೊಂಡ ಸುಧೀರ್, ತಾನು ತಂದಿದ್ದ ಚಾಕುವಿನಿಂದ ಯುವತಿಗೆ ಇರಿದಿದ್ದಾನೆ. ಹಲ್ಲೆಗೊಳಗಾದ ಯುವತಿ ಆತನಿಂದ ತಪ್ಪಿಸಿಕೊಂಡು ಸ್ವಲ್ಪ ದೂರ ಓಡಿ ಕುಸಿದು ಬಿದ್ದಿದ್ದಾಳೆ. ಯುವತಿ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿದ ಸುಧೀರ್, ಅಲ್ಲಿಂದ ತೆರಳಿ ಯುವತಿ ಬಾಡಿಗೆಗಿದ್ದ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹಲ್ಲೆಗೊಳಗಾದ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕೃತ್ಯದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Similar News