ಗ್ರಾಹಕರಿಗೆ ಕೆಎಮ್ಎಫ್ ಆಘಾತ; ನಂದಿನಿ ತುಪ್ಪ ಈಗ ದುಬಾರಿ: ಲೀಟರ್‌ಗೆ 90 ರೂಪಾಯಿ ದಿಢೀರ್ ಏರಿಕೆ
ಕೆಲವು ವಾರಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ. 12 ರಿಂದ ಶೇ. 5ಕ್ಕೆ ಇಳಿಕೆ ಮಾಡಿತ್ತು. ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಹೇಳಿತ್ತು.
ನಂದಿನಿ ತುಪ್ಪ
ರಾಜ್ಯದ ಜನತೆಗೆ ಕರ್ನಾಟಕ ಹಾಲು ಮಹಾಮಂಡಳ (KMF) ಬಿಸಿ ತುಪ್ಪದ ಶಾಕ್ ನೀಡಿದೆ. ಇತ್ತೀಚೆಗಷ್ಟೇ ಜಿಎಸ್‌ಟಿ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿ ತುಪ್ಪದ ದರವನ್ನು ಇಳಿಸಿದ್ದ ಕೆಎಂಎಫ್, ಇದೀಗ ದಿಢೀರನೆ ನಂದಿನಿ ತುಪ್ಪದ ಬೆಲೆಯನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ ₹90 ರಷ್ಟು ಹೆಚ್ಚಿಸಿದೆ. ಈ ಪರಿಷ್ಕೃತ ದರವು ಇಂದಿನಿಂದಲೇ (ನವೆಂಬರ್ 5) ಜಾರಿಗೆ ಬಂದಿದೆ.
ಕೆಲವು ವಾರಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ. 12 ರಿಂದ ಶೇ. 5ಕ್ಕೆ ಇಳಿಕೆ ಮಾಡಿತ್ತು. ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಹೇಳಿದ್ದ ಕೆಎಂಎಫ್, ದಸರಾ ಹಬ್ಬದ ಸಮಯದಲ್ಲಿ ನಂದಿನಿ ತುಪ್ಪದ ಬೆಲೆಯನ್ನು ಪ್ರತಿ ಲೀಟರ್‌ಗೆ 40 ರೂ. ಕಡಿತಗೊಳಿಸಿತ್ತು. ಇದರಿಂದಾಗಿ 650 ಇದ್ದ ಒಂದು ಲೀಟರ್ ತುಪ್ಪದ ಬೆಲೆ 610 ರೂ.ಗೆ ಇಳಿದಿತ್ತು. ಆದರೆ, ಈ ಖುಷಿ ಹೆಚ್ಚು ದಿನ ಉಳಿಯಲಿಲ್ಲ.ಇದೀಗ 90 ರೂಪಾಯಿಗೆ ಏರಿಕೆ ಮಾಡಿರುವುದರಿಂದ, ತುಪ್ಪದ ಬೆಲೆ ಹಿಂದೆಂದಿಗಿಂತಲೂ ದುಬಾರಿಯಾಗಿದೆ.
ದರ ಏರಿಕೆಗೆ ಕಾರಣವೇನು?
"ಹೆಚ್ಚಿದ ಬೇಡಿಕೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ದರ ಏರಿಕೆಯ ಹಿನ್ನೆಲೆಯಲ್ಲಿ ಈ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ," ಎಂದು ಕೆಎಂಎಫ್ ಸಮರ್ಥಿಸಿಕೊಂಡಿದೆ. ಈ ಬಗ್ಗೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಡಿ.ಕೆ. ಸುರೇಶ್, "ಹಾಲು ಒಕ್ಕೂಟಗಳ ಮನವಿಯ ಮೇರೆಗೆ ತುಪ್ಪದ ದರವನ್ನು ಜಾಸ್ತಿ ಮಾಡಲಾಗಿದೆ. ನಮ್ಮಲ್ಲಿ ಉತ್ಪಾದನೆಯಾಗುವ 1 ಕೋಟಿ ಲೀಟರ್ ಹಾಲಿನಲ್ಲಿ ಕೇವಲ 50 ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತಿದೆ. ಉಳಿದ 50 ಲಕ್ಷ ಲೀಟರ್ ಹಾಲಿಗೆ ನಮ್ಮ ಕೈಯಿಂದಲೇ ರೈತರಿಗೆ ಹಣ ಕೊಡುತ್ತಿದ್ದೇವೆ. ಹೀಗಾಗಿ ಕೆಲವು ಕಡೆ ನಷ್ಟವಾಗುತ್ತಿದೆ," ಎಂದು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪರಿಷ್ಕೃತ ದರ ಪಟ್ಟಿ
ಹೊಸ ದರ ಏರಿಕೆಯ ನಂತರ, ಒಂದು ಲೀಟರ್ ನಂದಿನಿ ತುಪ್ಪದ ಬೆಲೆ 610 ರಿಂದ 700 ರೂಪಾಯಿಗೆ ಏರಿಕೆಯಾಗಿದೆ. ಇತರೆ ಪ್ಯಾಕೆಟ್‌ಗಳ ಪರಿಷ್ಕೃತ ದರಗಳು ಹೀಗಿವೆ.
* 50 ಎಂಎಲ್: 47 ರೂಪಾಯಿ
* 100 ಎಂಎಲ್: 75 ರೂಪಾಯಿ
* 200 ಎಂಎಲ್: 155 ರೂಪಾಯಿ
* 500 ಎಂಎಲ್: 360 ರೂಪಾಯಿ
ಈ ದಿಢೀರ್ ಬೆಲೆ ಏರಿಕೆಯು ರಾಜ್ಯದ ಮಧ್ಯಮ ವರ್ಗದ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ನಂದಿಯನ್ನೇ ನೆಚ್ಚಿರುವ ಗ್ರಾಹಕರಿಗೆ ಹೊರೆಯಾಗಲಿದೆ. ಇದೇ ವೇಳೆ, ಶೀಘ್ರದಲ್ಲೇ ನಂದಿನಿ ಹಾಲಿನ ದರವೂ ಏರಿಕೆಯಾಗುವ ಸಾಧ್ಯತೆಯನ್ನು ಡಿ.ಕೆ. ಸುರೇಶ್ ಅವರು ತಳ್ಳಿಹಾಕಿಲ್ಲ.