́ಹಾಲು, ಮೊಸರು ಹೊರತುಪಡಿಸಿ ಉಳಿದ ಉತ್ಪನ್ನ ಬೆಲೆ ಇಳಿಕೆ ಮಾಡಲಾಗಿದೆ. ಕೆಎಂಎಫ್ ಯಥಾವತ್ತಾಗಿ ಬೆಲೆ ಕಡಿತಗೊಳಿಸಿದೆ. ಕೇಂದ್ರ ಸರ್ಕಾರದ ನಿಯಮಾವಳಿಗಳಿಗೆ ಅನುಗುಣವಾಗಿಯೇ ಮಾರಾಟ ಮಾಡುತ್ತಿದ್ದೇವೆ.́
ಜಿಎಸ್‌ಟಿ ಇಳಿಕೆಯಾದರೂ ದರ ಪರಿಷ್ಕರಿಸದೇ ಹಳೆಯ ದರಗಳಲ್ಲೇ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ಕೆಎಂಎಫ್ ಸ್ಪಷ್ಟನೆ ನೀಡಿದೆ.
ಕೇಂದ್ರ ಸರ್ಕಾರದ ಜಿಎಸ್‌ಟಿ ಸುಧಾರಣಾ ನಿಯಮಗಳಂತೆ ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಸ್ವಾಮಿ ಅವರು, ಹಾಲು, ಮೊಸರು ಹೊರತುಪಡಿಸಿ ಉಳಿದ ಉತ್ಪನ್ನಗಳ ಬೆಲೆಯನ್ನು ಜಿಎಸ್‌ಟಿ ದರಗಳ ಕಡಿತಕ್ಕೆ ಅನುಗುಣವಾಗಿ ಇಳಿಕೆ ಮಾಡಲಾಗಿದೆ. ಒಂದು ವೇಳೆ ಹಳೆಯ ದರದಲ್ಲಿ ಮಾರಾಟ ಮಾಡುತ್ತಿರುವ ದೂರುಗಳು ಬಂದರೆ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಮಾರುಕಟ್ಟೆಯಲ್ಲಿರುವ ಕೆಲ ಉತ್ಪನ್ನಗಳಲ್ಲಿ ಎಂಆರ್‌ಪಿ ದರ ಈ ಹಿಂದಿನಂತೆಯೇ ಇದೆ. ಮಾರಾಟಗಾರರು ಜಿಎಸ್‌ಟಿ ಕಡಿತದ ಹೊಸ ದರದಂತೆ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಎಂಆರ್‌ಪಿ ದರ ಬದಲಾಗಿಲ್ಲ ಎಂಬ ಸಬೂಬು ನೀಡಬಾರದು ಎಂದು ಸೂಚಿಸಿದ್ದಾರೆ.
ಅಮೆರಿಕದಲ್ಲಿ ಕೆಎಂಎಫ್ ಘಟಕ ಉದ್ಘಾಟನೆ
ವಿದೇಶದಲ್ಲಿ ಕೆಎಂಎಫ್ ಘಟಕದ ಉದ್ಘಾಟನೆ ವಿಚಾರವಾಗಿ ಮಾತನಾಡಿದ ಅವರು, ಅಮೆರಿಕದ ನಾವಿಕ ಸಮ್ಮೇಳನದಲ್ಲಿ ಭಾಗಿಯಾಗಿ ನಂದಿನಿ ಘಟಕವನ್ನು ಉದ್ಘಾಟನೆ ಮಾಡಲಾಗಿದೆ. ನಂದಿನಿ ಉತ್ಪನ್ನಗಳಿಗೆ ಅಮೆರಿಕದಲ್ಲಿ ಬಹಳ ಬೇಡಿಕೆ ಇದೆ. ಉತ್ತಮ ಗುಣಮಟ್ಟದ ಕಾರಣ ಬೇಡಿಕೆ ಹೆಚ್ಚಾಗಿದೆ. ಸಕ್ಕರೆ ಅಂಶ ಕಡಿಮೆ ಇರುವ ಹೊಸ ಉತ್ಪನ್ನಗಳನ್ನೂ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುವುದು ಎಂದು ಶಿವಸ್ವಾಮಿ ತಿಳಿಸಿದ್ದಾರೆ.ರಾಜ್ಯದಲ್ಲೂ ಕೆಎಂಎಫ್ ಶಾಖೆ ವಿಸ್ತರಣೆ
ರಾಜ್ಯದ ಬೇರೆ ಕಡೆಗಳಲ್ಲೂ ಕೆಎಂಎಫ್ ಶಾಖೆಗಳನ್ನು ತೆರೆಯಲಾಗುವುದು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿ ಭಾಗದಲ್ಲಿ ಹೊಸ ಶಾಖೆ ಉದ್ಘಾಟನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇತರೆಡೆಗಳಲ್ಲೂ ಘಟಕಗಳನ್ನು ತೆರೆಯಲಾಗುವುದು ಎಂದು ಶಿವಸ್ವಾಮಿ ತಿಳಿಸಿದ್ದಾರೆ.ತಿರುಪತಿಗೆ ತುಪ್ಪ ಸರಬರಾಜು ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ 5000 ಮೆಟ್ರಿಕ್ ಟನ್ ತುಪ್ಪವನ್ನು ಸರಬರಾಜು ಮಾಡಿದ್ದೇವೆ. ಇನ್ನೂ ಹೆಚ್ಚುವರಿಯಾಗಿ ಬೇಡಿಕೆ ಸಲ್ಲಿಸಿದರೆ ಪೂರೈಸಲು ಸಿದ್ಧ ಎಂದು ಹೇಳಿದ್ದಾರೆ.
ಜಿಎಸ್‌ಟಿ ದರ ಇಳಿಕೆ
ಭಾರತದಲ್ಲಿ ಶೇ 5, 12, 18, 28 ಎಂದು ನಾಲ್ಕು ಸ್ಲ್ಯಾಬ್‌ಗಳಲ್ಲಿ ಜಾರಿಯಲ್ಲಿದ್ದ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಎರಡು ಸ್ಲ್ಯಾಬ್‌ಗಳಿಗೆ ಇಳಿಕೆ ಮಾಡಿತ್ತು. ಇದರೊಂದಿಗೆ ಶೇ 5 ಮತ್ತು 18 ಸ್ಲ್ಯಾಬ್‌ಗಳು ಮಾತ್ರವೇ ಜಾರಿಯಲ್ಲಿದ್ದು, ಶೇ 12, 28 ಸ್ಲ್ಯಾಬ್‌ಗಳನ್ನು ಕೈ ಬಿಡಲಾಗಿದೆ. ಇದರಿಂದ ಅಗತ್ಯ ವಸ್ತುಗಳ ದರವು ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ.
ಮೊಸರಿನ ಬೆಲೆ ಇಳಿಕೆ ಇಲ್ಲ
ಜಿಎಸ್‌ಟಿ ಪರಿಷ್ಕರಣೆ ಬಳಿಕ ಮೊಸರಿನ ಬೆಲೆಯೂ ಇಳಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಅದಕ್ಕೆ ಸ್ಪಷ್ಟನೆ ನೀಡಿದ ಕೆಎಂಎಫ್ ಹಾಲು, ಮೊಸರು ಹೊರತುಪಡಿಸಿ ಉಳಿದ ಉತ್ಪನ್ನಗಳ ಬೆಲೆ ಇಳಿಸಿರುವುದಾಗಿ ತಿಳಿಸಿದೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼ ದೊಂದಿಗೆ ಮಾತನಾಡಿದ ಕೆಎಂಎಫ್ ಅಧಿಕಾರಿಯೊಬ್ಬರು, ಸದ್ಯ ಹಾಲು ಹಾಗೂ ಮೊಸರು ಹೊರತುಪಡಿಸಿ ಉಳಿದ ಉತ್ಪನ್ನಗಳ ಬೆಲೆಯನ್ನು ಜಿಎಸ್‌ಟಿ ಕಡಿತಕ್ಕೆ ಅನುಗುಣವಾಗಿ ಇಳಿಸಲಾಗಿದೆ. ಮೊಸರಿನ ಬೆಲೆ ಇಳಿಸುವ ಪ್ರಸ್ತಾವ ಸದ್ಯಕ್ಕಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಜಿಎಸ್‌ಟಿ ತೆರಿಗೆ ಇಳಿಸಿದ್ದರಿಂದ ತುಪ್ಪ, ಬೆಣ್ಣೆ, ಮೊಸರು ಸೇರಿ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ ಎಂದು ವರದಿಯಾಗಿತ್ತು. ಜಿಎಸ್ ಟಿ ಇಳಿಕೆಯಿಂದ ಮೊಸರಿನ ದರ ಲೀ.4 ರೂ ಇಳಿಕೆಯಾಗಲಿದೆ ಎನ್ನಲಾಗಿತ್ತು.