Actor Darshan Case | ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ನಟ ದರ್ಶನ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ಹೈಕೋರ್ಟ್‌ನಲ್ಲಿ ನಡೆದಿದ್ದು, ಆದೇಶವನ್ನು ಹೈಕೋರ್ಟ್ ನ್ಯಾಯಾಧೀಶರು ಅಕ್ಟೋಬರ್ 30 ಕ್ಕೆ ಕಾಯ್ದಿರಿಸಿದ್ದಾರೆ.;
ಮಂಗಳವಾರ ಹೈಕೋರ್ಟ್‌ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ನ್ಯಾಯಾಧೀಶರು, ಪ್ರಕರಣದ ತೀರ್ಪನ್ನು ಅ.30 ಕ್ಕೆ ಕಾಯ್ದಿರಿಸಿದ್ದಾರೆ.
ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಮುಂದಿಟ್ಟು ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿವಿ ನಾಗೇಶ್, ‘ದರ್ಶನ್ ಬೆನ್ನು ಹುರಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಈಗಾಗಲೇ ಕಾಲು ಮರಗಟ್ಟುವಿಕೆ ಆಗುತ್ತಿದೆ. ಹೀಗೇ ಮುಂದುವರಿದರೆ ಇನ್ನಷ್ಟು ಸಮಸ್ಯೆ ಆಗಬಹುದು. ಡಿಸ್ಕ್ ನಲ್ಲಿನ ಸಮಸ್ಯೆಯಿಂದ ನರದಲ್ಲಿ ರಕ್ತಪರಿಚಲನೆ ಆಗುತ್ತಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಪಾರಂಪರಿಕ ಚಿಕಿತ್ಸೆಯಿಂದ ಇದು ಪರಿಹಾರ ಆಗದು. ಅದಕ್ಕೆ ಶಸ್ತ್ರಚಿಕಿತ್ಸೆಯನ್ನೇ ಮಾಡಿಸಬೇಕು. ಈ ಹಿಂದೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾಗ ಆರೋಗ್ಯ ಸಮಸ್ಯೆ ಉಲ್ಲೇಖಿಸಿರಲಿಲ್ಲ. ಆದರೆ ಈಗ ಸಮಸ್ಯೆ ಉಲ್ಬಣ ಆಗಿರುವ ಕಾರಣ ಕೇಳುತ್ತಿದ್ದೇವೆ. ದರ್ಶನ್ಗೆ ಮಧ್ಯಂತರ ಜಾಮೀನು ನೀಡಬೇಕು’ ಎಂದು ವಾದಿಸಿದರು.
ಇದಕ್ಕೆ ಕೆಲ ತಕರಾರುಗಳನ್ನು ಎತ್ತಿರುವ ಎಸ್ಪಿಪಿ ಪ್ರಸನ್ನ ಕುಮಾರ್, ‘ರೋಗಿಯ (ದರ್ಶನ್) ತಪಾಸಣೆ ಮಾಡಿರುವ ವೈದ್ಯರು ಮುಂದೊಮ್ಮೆ ಸಮಸ್ಯೆ ಆಗಬಹುದು ಎಂದಿದ್ದಾರೆ. ಅಲ್ಲದೆ ಹಿಂದಿನ ವರದಿಯಲ್ಲಿ ಅಷ್ಟೇನೂ ಸಮಸ್ಯೆ ಇಲ್ಲ ಎಂದಿದ್ದರು. ಈ ಹಿಂದೆ ಹಿಪ್ ಜಾಯಿಂಟ್ ಸಮಸ್ಯೆ ಇತ್ತು, ಅದನ್ನು ಸರಿಪಡಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ’ ಎಂದು ವಿವರಿಸಿದರು.
ಆದರೆ ಅದಕ್ಕೆ ಸ್ವತಃ ನ್ಯಾಯಾಧೀಶರು, ‘ಮುಂದೆ ಆದಾಗ ಅದನ್ನು ಸರಿ ಮಾಡಬಹುದೇ?, ವಿಚಾರಣಾಧೀನ ಖೈದಿಗೂ ಉತ್ತಮ ಆರೋಗ್ಯದ ಹಕ್ಕಿದೆ’ ಎಂದರು. ‘ಈ ಹಿಂದಿನ ವರದಿಯಲ್ಲಿ ಹಾಗಿದೆ, ಆದರೆ ಜೈಲು ಸೇರಿದ ಮೇಲಿನ ವರದಿಯಲ್ಲಿ ಅನಾರೋಗ್ಯ ಎಂದಿದೆಯಲ್ಲ. ಈಗಿನ ವರದಿಯನ್ನು ಪರಿಗಣಿಸಬೇಕು ತಾನೆ?ʼ ಎಂದು ಜಡ್ಜ್ ಎಸ್ಪಿಪಿ ಪ್ರಸನ್ನ ಅವರನ್ನು ಪ್ರಶ್ನೆ ಮಾಡಿದರು.
ಎಸ್ಪಿಪಿ ಪ್ರಸನ್ನ ಅವರು, ‘ವೈದ್ಯರ ವರದಿಯಲ್ಲಿ ಯಾವ ರೀತಿಯ ಶಸ್ತ್ರಚಿಕಿತ್ಸೆ ಮಾಡಬೇಕಿದೆ? ಎಷ್ಟು ದಿನದ ಅವಶ್ಯಕತೆ ಇದೆ? ಎಲ್ಲಿ ಆಪರೇಷನ್ ಮಾಡಲಾಗುವುದು ಎಂಬಿತ್ಯಾದಿ ಮಾಹಿತಿ ಇಲ್ಲ’ ಎಂದರು. ಇದಕ್ಕೆ ಉತ್ತರಿಸಿದ ಸಿವಿ ನಾಗೇಶ್ ಅವರು, ‘ದರ್ಶನ್ ಮೈಸೂರು ನಿವಾಸಿ ಆಗಿದ್ದು, ಈ ಹಿಂದೆ ಒಮ್ಮೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈಗಲೂ ಸಹ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಾರೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳು ಯಾರೂ ಮೈಸೂರಿನಲ್ಲಿ ಇಲ್ಲ’ ಎಂದರು.
ಇಬ್ಬರೂ ವಕೀಲರ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯ ಆದೇಶವನ್ನು ಬುಧವಾರ (ಅ.30)ಕ್ಕೆ ಮುಂದೂಡಿದರು.