ರೈತರ ಅಲೆದಾಟ ತಪ್ಪಿಸಲು ಸರ್ಕಾರದಿಂದಲೇ ಮನೆ ಬಾಗಿಲಿಗೆ ಭೂ ದಾಖಲೆ ವಿತರಣೆ
ಪೋಡಿಮುಕ್ತ ಗ್ರಾಮಗಳನ್ನಾಗಿ ಮಾಡುವುದು ನಮ್ಮ ಧ್ಯೇಯ. ಇದಕ್ಕಾಗಿ ಮರುಸರ್ವೆ ಮಾಡಿ ಜಮೀನುಗಳಿಗೆ ಹೊಸ ನಂಬರ್‌ಗಳನ್ನು ನೀಡಲಾಗುತ್ತಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.;
ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು.
ಸರ್ಕಾರಿ ಕಚೇರಿಗಳಲ್ಲಿ ಭೂ ದಾಖಲೆಗಾಗಿ ರೈತರ ಅಲೆದಾಟಕ್ಕೆ ಬ್ರೇಕ್ ಹಾಕುವ ಸಲುವಾಗಿ ರಾಜ್ಯ ಸರ್ಕಾರ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 175 ಗ್ರಾಮಗಳ ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ಬಾಗಿಲಿಗೆ ದಾಖಲೆ ವಿತರಿಸಲಾಗುವುದು ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.
ಸೋಮವಾರ(ಜು.21) ಕನಕಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂದಾಯ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ದಾಖಲೆಗಳನ್ನು ನೀಡಿ ಪೋಡಿಮುಕ್ತ ಗ್ರಾಮಗಳನ್ನಾಗಿ ಮಾಡುವುದು ನಮ್ಮ ಧ್ಯೇಯ. ಇದಕ್ಕಾಗಿ ಮರುಸರ್ವೆ ಮಾಡಿ ಹೊಸ ಆಸ್ತಿ ನಂಬರ್‌ಗಳನ್ನು ನೀಡಲಾಗುತ್ತಿದೆ. ಇಡೀ ಕ್ಷೇತ್ರದಾದ್ಯಂತ ಜನರಿಗೆ ಉಚಿತವಾಗಿ ಕಂದಾಯ ದಾಖಲೆ ಹಾಗೂ ಪಹಣಿ ಒಟ್ಟಿಗೆ ನೀಡಲಾಗುವುದು ಎಂದು ತಿಳಿಸಿದರು.
ನಿಮ್ಮ ಆಸ್ತಿ ಸಂಖ್ಯೆಗಳಿಗೆ ನೀಡುವ ನೂತನ ಆಸ್ತಿ ನಂಬರ್‌ನಿಂದ 25 ರಿಂದ 50 ಲಕ್ಷ ರೂ. ಆಸ್ತಿ ಮೌಲ್ಯ ಹೆಚ್ಚಾಗಲಿದೆ. ನೂತನ ನಂಬರ್ ಬಂದ ತಕ್ಷಣ ದಲ್ಲಾಳಿಗಳು ಭೂಮಿ ನೀಡಿ ಎಂದು ನಿಮ್ಮ ಬಳಿ ಬರುತ್ತಾರೆ. ಯಾವುದೇ ಕಾರಣಕ್ಕೂ ಜನರು ತಮ್ಮ ಆಸ್ತಿ ಕಳೆದುಕೊಳ್ಳಬಾರದು. ಸಿಎಸ್‌ಆರ್ ಅನುದಾನದ ಮುಖಾಂತರ ಜಿಲ್ಲೆಯಲ್ಲಿ ಸುಮಾರು 20 ಶಾಲೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರಿಂದ ಬಡವರು, ಕೃಷಿಕರ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲಿದ್ದಾರೆ ಎಂದರು.
ಗ್ಯಾರಂಟಿ ಯೋಜನೆ ಜೊತೆಗೆ ಅಭಿವೃದ್ಧಿ
"ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಆದರೆ ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಜತೆಗೆ ಅಭಿವೃದ್ಧಿ ಆಗುತ್ತಿಲ್ಲ ಎಂದು ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ದಿವಂಗತ ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಸ್ವಚ್ಛ ಗ್ರಾಮ ಪರಿಕಲ್ಪನೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಸಾತನೂರಿನಲ್ಲಿ ಮೊದಲ ಬಾರಿಗೆ ಗ್ರಾಮಗಳಿಗೆ ಕಾಂಕ್ರೀಟ್ ರಸ್ತೆ ಹಾಕಿಸಿದ್ದರು. ಕನಕಪುರದ ಗ್ರಾಮಗಳಿಗೂ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿರುವ ಅತ್ಯುತ್ತಮ ಮೂಲ ಸೌಕರ್ಯ ಬೇರೆ ಯಾವುದೇ ಕ್ಷೇತ್ರಗಳಲ್ಲಿ ಇಲ್ಲ" ಎಂದು ಹೇಳಿದರು.
ಮಕ್ಕಳ ಭವಿಷ್ಯಕ್ಕಾಗಿ ಜಿಲ್ಲೆ ಮರುನಾಮಕರಣ
"ರಾಮನಗರ ಜಿಲ್ಲಾ ಕೇಂದ್ರದ ಹೆಸರನ್ನು ಬದಲಾವಣೆ ಮಾಡಿಲ್ಲ. ನಾವೆಲ್ಲರೂ ಬೆಂಗಳೂರಿಗೆ ಸೇರಿದವರು ಎನ್ನುವ ಉದ್ದೇಶಕ್ಕೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿದ್ದೇವೆ. ನಾವು ಮೊದಲಿನಿಂದಲೂ ಬೆಂಗಳೂರು ಜನರು. ಇದಕ್ಕೆ ಯಾರೇ ವಿರೋಧ ಮಾಡಿದರೂ ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದರು. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ಬದಲಾವಣೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯವರು ಎಂದರೆ ನಿಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗಲಿದೆ" ಎಂದು ತಿಳಿಸಿದರು.