
Mysore MUDA Case | ಸಿದ್ದರಾಮಯ್ಯಗೆ ಅಂಟಿದ 'ಮುಡಾ ಕಳಂಕ' ತೊಳೆಯುವುದೇ ಸುಪ್ರೀಂ ತೀರ್ಪು?
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೇಲಿನ ಇಡಿ ತನಿಖೆಯು ಮುಗಿದ ಅಧ್ಯಾಯವಾಗಿದೆ ಎಂದು ಕಾನೂನು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕುಣಿಕೆ ಬಿಗಿಗೊಳಿಸಲು ತನಿಖಾ ಸಂಸ್ಥೆ ಇ.ಡಿ. ನಡೆಸಿದ ಶತಪ್ರಯತ್ನಗಳಿಗೆ ಸುಪ್ರೀಂಕೋರ್ಟ್ ಅಂತೂ ಬ್ರೇಕ್ ಹಾಕಿದೆ.
ಮುಡಾ ಪ್ರಕರಣದಲ್ಲಿ ಸಿಎಂ -ಇಡಿ ಸಮರದಲ್ಲಿ ಸಿದ್ದರಾಮಯ್ಯ ಅವರು ಕಳಂಕರಹಿತರಾಗಲು ಈ ಆದೇಶ ಅನುವು ಮಾಡಿಕೊಟ್ಟಿದೆ ಎಂದು ಹೇಳಲಾಗಿದೆ. ವಿಪರ್ಯಾಸವೆಂದರೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಬಂದಿದ್ದ ಜಾರಿ ನಿರ್ದೇಶನಾಲಯ ಇದೀಗ ತಾನೇ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದೆ. ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳಿಗೆ ಸುಪ್ರೀಂಕೋರ್ಟ್ ತೀರ್ಪು ಪುಷ್ಟಿ ನೀಡಿದೆ.
ಮುಡಾ ಪ್ರಕರಣ ಸಂಬಂಧ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ನೀಡಿದ್ದ ಸಮನ್ಸ್ ರದ್ದುಪಡಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಇ.ಡಿ. ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿತಲ್ಲದೇ ರಾಜಕೀಯ ಸಮರಕ್ಕೆ ಇಡಿ ಬಳಕೆಯಾಗುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದೆ. ಹಾಗಾಗಿ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೇಲಿನ ಇಡಿ ತನಿಖೆಯು ಮುಗಿದ ಅಧ್ಯಾಯವಾಗಿದೆ ಎಂದು ಕಾನೂನು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಕಪ್ಪುಚುಕ್ಕೆಯಾಗಿದ್ದ ಹಗರಣ
ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಮುಡಾ ಹಗರಣ ಕಪ್ಪುಚುಕ್ಕೆಯಂತೆ ಮಾರ್ಪಟ್ಟಿತ್ತು. ತಮ್ಮ ಪತ್ನಿ ಹೆಸರಿನ ಜಮೀನಿಗೆ ಬದಲಿಯಾಗಿ ಮುಡಾದಿಂದ 14 ಬದಲಿ ನಿವೇಶನ ಪಡೆದಿದ್ದ ಆರೋಪವು ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಈ ಕುರಿತು ದೂರು ದಾಖಲಾಗಿ ಸಿಎಂ ವಿರುದ್ಧ ತನಿಖೆಯೂ ನಡೆದಿತ್ತು. ಆದರೆ, ತನಿಖಾ ಸಂಸ್ಥೆಗಳ ಯಾವುದೇ ಒತ್ತಡ ತಂತ್ರ, ವಿರೋಧಿಗಳ ಟೀಕೆಗಳಿಗೆ ಎದೆಗುಂದದೇ ನಾಜೂಕಾಗಿ ಕಾನೂನಿನ ಮೂಲಕವೇ ತನಿಖಾ ಸಂಸ್ಥೆಗೆ ಸುಪ್ರೀಂಕೋರ್ಟ್‌ನಲ್ಲಿ ಮುಖಭಂಗವಾಗುವಂತೆ ನೋಡಿಕೊಂಡಿದ್ದು ಸಿಎಂ ಸಿದ್ದರಾಮಯ್ಯ ಚಾಣಾಕ್ಷತನಕ್ಕೆ ಸಾಕ್ಷಿ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ತನಿಖೆ ನಡೆಸಲು ಲೋಕಾಯುಕ್ತರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದ ಬೆನ್ನಲ್ಲೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲಿಸಿಕೊಂಡು ಅಖಾಡಕ್ಕೆ ಇಳಿದಿತ್ತು.
ಸಿಎಂ ಸಿದ್ದರಾಮಯ್ಯ ಅವರ ನಿಕಟವರ್ತಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಮುಡಾದಿಂದ 14 ನಿವೇಶನಗಳನ್ನು ಅಕ್ರಮವಾಗಿ ಪಡೆದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ವಿರುದ್ಧ ಹಲವು ಪುರಾವೆಗಳು ಸಿಕ್ಕಿವೆ ಎಂದು ಇಡಿ ತಿಳಿಸಿತ್ತು. ಸಿಎಂ ಸಿದ್ದರಾಮಯ್ಯ ಪ್ರಕರಣದ ಜತೆಗೆ ಪ್ರಾಧಿಕಾರದಲ್ಲಿ ಶೇ 50:50 ಅನುಪಾತದಲ್ಲಿ ಹಂಚಿಕೆಯಾದ ಹಲವು ಎಲ್ಲ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿತ್ತು.
ನಿವೇಶನ ಹಂಚಿಕೆ ಲೋಪ ಪತ್ತೆ ಹಚ್ಚಿದ್ದ ಇಡಿ
ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಭೂಪರಿವರ್ತನೆಯಲ್ಲಿ ‘ಕಾನೂನುಬದ್ಧ ಮಾರ್ಗಸೂಚಿಗಳ ಉಲ್ಲಂಘನೆ’, ಕಚೇರಿಯ ಕಾರ್ಯವಿಧಾನಗಳ ಉಲ್ಲಂಘನೆ, ‘ಅನಾವಶ್ಯಕ’ ಕೃಪಾಕಟಾಕ್ಷ ಮತ್ತು ಪ್ರಭಾವದ ಬಳಕೆ ಹಾಗೂ ಸಹಿಗಳ ‘ಫೋರ್ಜರಿ’ಗೆ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು.
ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಸ್.ಜಿ.ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಅವರು ಅಕ್ರಮ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಅನಗತ್ಯ ಪ್ರಭಾವ ಬೀರಿರುವುದಕ್ಕೂ ಸಾಕ್ಷ್ಯಗಳು ಲಭ್ಯವಿದೆ ಎಂದು ಹೇಳಿದ ಬಳಿಕ ಸಿಎಂ ಮೇಲೆ ಇಡಿ ತೂಗುಗತ್ತಿ ಇನ್ನಷ್ಟು ಸಮೀಪಿಸುತ್ತಿದೆ ಎಂದು ಹೇಳಲಾಗಿತ್ತು.
ಮುಡಾ ಒಟ್ಟು 1,095 ನಿವೇಶನಗಳನ್ನು ಬೇನಾಮಿ ಮತ್ತು ಇತರ ವಹಿವಾಟುಗಳ ಮೂಲಕ 'ಅಕ್ರಮವಾಗಿ' ಮಂಜೂರು ಮಾಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕುಣಿಕೆ ಬಿಗಿಯಾಗಿದೆ ಎಂದೇ ವಿರೋಧ ಪಕ್ಷಗಳು ಹೇಳಿದ್ದವು.
ತಮ್ಮ ಪಾತ್ರ ಇಲ್ಲವೆಂದೇ ಹೇಳುತ್ತಿದ್ದ ಸಿಎಂ
ಮೈಸೂರಿನ ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದಲ್ಲಿ ತಮ್ಮ ಯಾವುದೇ ಪಾತ್ರ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಈ ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದ್ದರು. ಇಡಿ ತನಿಖಾ ವರದಿ ಹಂಚಿಕೊಂಡು ಲೋಕಾಯುಕ್ತಕ್ಕೆ ಬರೆದಿದ್ದ ಪತ್ರವು ಮಾಧ್ಯಮಗಳಿಗೆ ಸೋರಿಕೆಯಾದ ನಂತರ ಸಿಎಂ ಸಿದ್ದರಾಮಯ್ಯ ಅವರು ಇಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಸಿಎಂ ಆಪ್ತರನ್ನು ಇಡಿ ವಿಚಾರಣೆಗೆ ಒಳಪಡಿಸಿತ್ತು. ಕಳೆದ ಜ.26 ರಂದು ಪ್ರಕರಣದ ಎರಡನೇ ಆರೋಪಿಯಾದ ಬಿ.ಎಂ. ಪಾರ್ವತಿ ಹಾಗೂ ಸಿಎಂ ಆಪ್ತರೂ ಆಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೂ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿತ್ತು. ಇಡಿ ನೀಡಿರುವ ನೋಟಿಸ್ ರದ್ದುಪಡಿಸುಂತೆ ಕೋರಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಬೈರತಿ ಸುರೇಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನ್ಯಾ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಮಾ.7 ರಂದು ಇಡಿ ಸಮನ್ಸ್ ಅನ್ನು ರದ್ದುಪಡಿಸಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಕಪಾಳ ಮೋಕ್ಷಕ್ಕಿಂತ ಜಾಸ್ತಿ
ವಿರೋಧ ಪಕ್ಷಗಳ ಮೇಲೆ ದಾಳಿ ಮಾಡುವುದು, ಜೈಲಿಗೆ ಹಾಕಲು ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ನ್ಯಾಯಾಧೀಶರು ಈಗ ಛೀಮಾರಿ ಹಾಕಿದ್ದಾರೆ
ಇನ್ನು ಮುಂದೆ ತನಿಖಾ ಸಂಸ್ಥೆಗಳನ್ನು ರಾಜಕೀಯವಾಗಿ ಬಳಕೆ ಮಾಡದಂತೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಇದರಿಂದ ನಮಗೆ ಬಹಳ ಸಂತೋಷವಾಗಿದೆ, ಬಿಜೆಪಿಯವರ ಧೋರಣೆ ಏನೆಂಬುದು ಗೊತ್ತಿದೆ. ನ್ಯಾಯಾಲಯದ ಆದೇಶದ ನಂತರವಾದರೂ ಬುದ್ದಿ ಕಲಿಯಬೇಕು ಎಂದು ಶಾಸಕ ಅಶೋಕ್ ಪಟ್ಟಣ್‌ಶೆಟ್ಟಿ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ವಿಪಕ್ಷಗಳು ಮಾಡಿದ ಪ್ರಯತ್ನಗಳನ್ನು ನ್ಯಾಯಾಲಯ ಕೂಡ ಗಮನಿಸಿತ್ತು. ಈಗ ಸುಪ್ರೀಂಕೋರ್ಟ್ ಆದೇಶದಿಂದ ಸಿದ್ದರಾಮಯ್ಯ ಅವರು ಕಳಂಕಮುಕ್ತರಾಗಿದ್ದಾರೆ ಎಂದರು.