ಬಂಟ್ವಾಳ ಹತ್ಯೆ ಪ್ರಕರಣ: 15 ಮಂದಿ ವಿರುದ್ಧ ಎಫ್‌ಐಆರ್ ದಾಖಲು, 5 ತನಿಖಾ ತಂಡ ರಚನೆ

ಮೃತ ಅಬ್ದುಲ್ ರಹಿಮಾನ್ ಪರಿಚಯಸ್ಥ ಇಬ್ಬರು ಸೇರಿದಂತೆ ಒಟ್ಟು 15 ಮಂದಿ ವಿರುದ್ದ ಎಫ್ಐಆರ್ ದಾಖಲಾಗಿದೆ. ರಹೀಂ ಪರಿಚಯಸ್ಥರೇ ಆಗಿರುವ ದೀಪಕ್, ಸುಮಿತ್ ಸೇರಿ 15 ಜನರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.;

Update: 2025-05-28 06:23 GMT

ಕೊಲೆಯಾದ ಅಬ್ದುಲ್ ರಹಿಮಾನ್

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾಕೋಡಿ ಎಂಬಲ್ಲಿ ಮಂಗಳವಾರ ಸಂಜೆ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 15 ಮಂದಿ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಅಬ್ದುಲ್ ರಹಿಮಾನ್ ಪರಿಚಯಸ್ಥರಾದ ದೀಪಕ್ ಮತ್ತು ಸುಮಿತ್ ಸೇರಿದಂತೆ ಇತರ 13 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಗಾಯಗೊಂಡಿದ್ದ ಕಲಂದರ್ ಶಫಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮೊಹಮ್ಮದ್ ನಿಸಾರ್‌ಗೆ ನೀಡಿದ ಮಾಹಿತಿ ಆಧರಿಸಿ ಈ ದೂರು ದಾಖಲಿಸಲಾಗಿದೆ. ಮೊಹಮ್ಮದ್ ನಿಸಾರ್ ಅವರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಿರುವಂತೆ, ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಫಿ ಇಬ್ಬರೂ ಹೊಳೆ ಬದಿಯಿಂದ ಪಿಕ್‌ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿಕೊಂಡು ಕುರಿಯಾಳ ಗ್ರಾಮದ ಈರಾ ಕೋಡಿಯಾ ರಾಜೀವಿ ಎಂಬುವವರ ಮನೆ ಬಳಿ ಮರಳು ಅನ್‌ಲೋಡ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು ಮಾರಕಾಸ್ತ್ರಗಳಿಂದ ಮನಸೋಇಚ್ಛೆ ದಾಳಿ ಮಾಡಲಾಗಿದೆ. ಅಬ್ದುಲ್ ರಹಿಮಾನ್ ತೀವ್ರ ಗಾಯಗೊಂಡ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಸ್ಥಳೀಯರು ಕೂಗಿಕೊಂಡಿದ್ದರಿಂದ, ಕಲಂದರ್ ಶಫಿ ಮೇಲೆ ನಡೆಯುತ್ತಿದ್ದ ದಾಳಿಯನ್ನು ಅರ್ಧಕ್ಕೆ ನಿಲ್ಲಿಸಿ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆ ಮಾಡಿದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಗಾಯಗೊಂಡ ಕಲಂದರ್ ಶಫಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಅಂಬ್ಯುಲೆನ್ಸ್‌ನಲ್ಲಿ ಮೊಹಮ್ಮದ್ ನಿಸಾರ್‌ಗೆ ಮಾಹಿತಿ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತನಿಖೆಗಾಗಿ ಐದು ಪೊಲೀಸ್ ತಂಡ ರಚನೆ

ಬಂಟ್ವಾಳದ ಅಬ್ದುಲ್ ರಹೀಂ ಹತ್ಯೆ ಪ್ರಕರಣದ ತನಿಖೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಯತೀಶ್ ಅವರ ನಿರ್ದೇಶನದಂತೆ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಡಿವೈಎಸ್‌ಪಿ ವಿಜಯ ಪ್ರಕಾಶ್ ನೇತೃತ್ವದಲ್ಲಿ ಈ ತಂಡಗಳು ಕಾರ್ಯನಿರ್ವಹಿಸಲಿವೆ. ಈ ತಂಡಗಳಲ್ಲಿ ಮಂಗಳೂರು ನಗರ ಸಿಸಿಬಿ ತಂಡ ಮತ್ತು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಲಿದ್ದಾರೆ.

ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ನಿಷೇಧಾಜ್ಞೆ

ಪ್ರಕರಣಕ್ಕೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರಾವಾಲ್ ಅವರು ಮಂಗಳವಾರದಿಂದ ಮೇ 30ರವರೆಗೆ ಸಂಜೆ 6 ಗಂಟೆಯವರೆಗೆ ಬಿಎನ್‌ಎಸ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಬುಧವಾರ ಮಂಗಳೂರಿಗೆ ಎಡಿಜಿಪಿ ಹಿತೇಂದ್ರ ಅವರು ಭೇಟಿ ನೀಡಲಿದ್ದು, ಆಯಕಟ್ಟಿನ ಸ್ಥಳಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜೊತೆಗೆ, ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

ಸಚಿವರ ಖಂಡನೆ ಮತ್ತು ಸೂಚನೆ

ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಡಿಜಿ ಮತ್ತು ಐಜಿಪಿ ಹಾಗೂ ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಸೂಕ್ತ ಬಿಗಿ ಕಾನೂನು ಕ್ರಮಗಳನ್ನು ಜರುಗಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಮಂಗಳೂರು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರೊಂದಿಗೆ ಮಾತನಾಡಿ, ಮಂಗಳೂರಿನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

Tags:    

Similar News