Mysore MUDA Case | ಸಿಎಂ ಆಪ್ತರು, ಉದ್ಯಮಿಗಳ ನಿವಾಸ ಜಾಲಾಡಿದ ಇಡಿ

ಮಂಡ್ಯ ಹಾಗೂ ಮೈಸೂರಿನಲ್ಲಿ ಹಲವು ಬಿಲ್ಡರ್ ಗಳ ಮನೆ ಹಾಗೂ ಕಚೇರಿಗಳಲ್ಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

Update: 2024-10-30 11:13 GMT

ಮುಡಾ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸತತ ಎರಡು ದಿನಗಳಿಂದ ಸಿಎಂ ಸಿದ್ದರಾಮಯ್ಯ ಅವರ ಆಪ್ತರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್‌ಗಳು ಹಾಗೂ ಪ್ರಾಧಿಕಾರದ ನಿವೃತ್ತ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿ, ನಿವೇಶನ ಹಂಚಿಕೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈಸೂರಿನ ಹಿನಕಲ್‌ ಗ್ರಾಮದಲ್ಲಿರುವ ಸಿಎಂ ಆಪ್ತ ರಾಕೇಶ್ ಪಾಪಣ್ಣ ನಿವಾಸದಲ್ಲಿ ಐವರು ಅಧಿಕಾರಿಗಳ ತಂಡ ಸುಮಾರು 35ಗಂಟೆ ಶೋಧ ನಡೆಸಿದ್ದಾರೆ. ರಾಕೇಶ್ ಅವರ ತಂದೆ ಎ.ಪಾಪಣ್ಣ ಅವರಿಗೆ ಸೇರಿರುವ ಹಿನಕಲ್ ಗ್ರಾಮದ ಸರ್ವೇ ನಂ. 211ರಲ್ಲಿ 3 ಎಕರೆ 15 ಗುಂಟೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ವಿಜಯನಗರ ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರವಾಗಿ ಶೇ 50: 50 ಅನುಪಾತದಲ್ಲಿ 15 ಬದಲಿ ನಿವೇಶನಗಳನ್ನು ಜೂ.12ರಂದು ಮುಡಾ ನೀಡಿತ್ತು. ಆದರೆ, ಸಿಎಂ ಪ್ರಕರಣ ಬೆಳಕಿಗೆ ಬಂದ ನಂತರ ನಿವೇಶನ ಹಂಚಿಕೆಗೆ ತಡೆ ನೀಡಿತ್ತು. ಶೋಧ ಕಾರ್ಯದ ವೇಳೆ ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬಿಲ್ಡರ್‌ಗಳ ನಿವಾಸಗಳಲ್ಲಿ ಶೋಧ

ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ ಹಾಗೂ ಮೈಸೂರಿನಲ್ಲಿ ಹಲವು ಬಿಲ್ಡರ್ ಗಳ ಮನೆ ಹಾಗೂ ಕಚೇರಿಗಳಲ್ಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಜಯರಾಮ್, ಎಂ.ಎಂ.ಜಿ. ಕನ್ಸ್ಟ್ರಕ್ಷನ್ ಹಾಗೂ ವಕ್ರುತುಂಡ ಹೌಸಿಂಗ್ ಸೊಸೈಟಿ ಕಚೇರಿ ಹಾಗೂ ನಿವಾಸಗಳಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಜಯರಾಮ್ ಅವರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಜಯರಾಮ್ ನೀಡಿದ ಮಾಹಿತಿ ಮೇರೆಗೆ ಪಾಂಡವಪುರ ತಾಲೂಕಿನ ಹೇರೋಹಳ್ಳಿಯಲ್ಲಿ ಜಯರಾಮ್ ಅವರ ಮೂವರು ಸಂಬಂಧಿಕರ ಮನೆಗಳಲ್ಲಿ ಅಧಿಕಾರಿಗಳು ಶೋಧ ನಡೆಸಿ, ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸೋಮವಾರ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್, ಮೈಸೂರಿನ ಮುಡಾದ ಕೆಲ ನಿವೃತ್ತ ಅಧಿಕಾರಿಗಳ ಕಚೇರಿ ಹಾಗೂ ನಿವಾಸ ಸೇರಿದಂತೆ ಎಂಟು ಕಡೆಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದರು.

ಮಾಜಿ ಆಯುಕ್ತರಿಗೆ ಸಮನ್ಸ್, ವಿಚಾರಣೆ

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿಯವರಿಗೆ ನಿವೇಶನ ಹಂಚಿಕೆ ಮಾಡಿದ್ದ ಸಂದರ್ಭದಲ್ಲಿ ಅಂದಿನ ಮುಡಾ ಆಯುಕ್ತರಾಗಿದ್ದ ಡಿ.ಬಿ. ನಟೇಶ್ ಅವರ ಬೆಂಗಳೂರಿನ ಮಲ್ಲೇಶ್ವರಂ ನಿವೇಶನದಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಸೋಮವಾರ ಬೆಳಿಗ್ಗೆಯಿಂದ ತಪಾಸಣೆ ನಡೆಸಿ, ಮಂಗಳವಾರ ಸಂಜೆ ನಟೇಶ್ ಅವರನ್ನು ವಶಕ್ಕೆ ಪಡೆದರು. ಬಳಿಕ ಶಾಂತಿನಗರದ ಇಡಿ ಕಚೇರಿಯಲ್ಲಿ ಹೇಳಿಕೆ ಪಡೆದು ಬಿಟ್ಟುಕಳುಹಿಸಿದರು.

ಮುಡಾದ ಮತ್ತೊಬ್ಬ ಆಯುಕ್ತ ಜಿ.ಟಿ. ದಿನೇಶ್ ಅವರ ಮನೆಗೆ ತೆರಳಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬರಿಗೈಲಿ ವಾಪಸಾಗಿದ್ದರು. ದಿನೇಶ್ ಅವರು ವಾಸವಿರುವ ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್ಮೆಂಟ್ ನ ಅವರ ಮನೆ ಬಾಗಿಲಿಗೆ ಸಮನ್ಸ್ ನೀಟಿಸ್ ಅಂಟಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉದ್ಯಮಿ ಜಯರಾಮ್ ಅವರು ಮುಡಾದ ಮಾಜಿ ಆಯುಕ್ತ ದಿನೇಶ್ ಅವರೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದರು ಎಂಬ ಮಾಹಿತಿ ಆಧಾರದ ಮೇಲೆ ಸಮನ್ಸ್ ಜಾರಿ ಮಾಡಲಾಗಿದೆ.

Tags:    

Similar News