ಬೆಂಗಳೂರು| ವೈದ್ಯನಿಂದಲೇ ಪತ್ನಿಯ ಕೊಲೆ; 6 ತಿಂಗಳ ಬಳಿಕ ಬಯಲಾಯ್ತು ಸತ್ಯ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ ಅವರು ಅಜೀರ್ಣ, ಗ್ಯಾಸ್ಟ್ರಿಕ್, ಲೋ ಶುಗರ್‌ನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
ಪತಿಯಿಂದಲೇ ಕೊಲೆಯಾಗಿರುವ ಚರ್ಮರೋಗ ತಜ್ಞೆ ಡಾ. ಕೃತಿಕಾರೆಡ್ಡಿ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಪತ್ನಿಗೆ ಅದೇ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಪತಿ, ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದ ಸಂಗತಿ ಆರು ತಿಂಗಳ ಬಳಿಕ ತನಿಖೆಯಿಂದ ಬಯಲಾಗಿದೆ. ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ಬಳಿಕ ಸ್ವಾಭಾವಿಕ ಸಾವೆಂದು ನಂಬಿಸಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿ ವೈದ್ಯ ಡಾ. ಮಹೇಂದ್ರರೆಡ್ಡಿಯನ್ನು ಬಂಧಿಸಿದ್ದಾರೆ.
ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ದಂಪತಿಗೆ 2024ರ ಮೇ 26ರಂದು ವಿವಾಹವಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ ಅವರು ಅಜೀರ್ಣ, ಗ್ಯಾಸ್ಟ್ರಿಕ್, ಲೋ ಶುಗರ್‌ನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದನ್ನು ಮುಚ್ಚಿಟ್ಟ ಕುಟುಂಬದವರು ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಮಹೇಂದ್ರರೆಡ್ಡಿ ಎಂಬುವರೊಂದಿಗೆ ಮದುವೆ ಮಾಡಿಸಿದ್ದರು.
ಮದುವೆ ನಂತರ ಪತ್ನಿಗೆ ಆರೋಗ್ಯ ಸಮಸ್ಯೆಗಳಿರುವುದು ಪತಿಗೆ ಗೊತ್ತಾಯಿತು. ಪ್ರತಿದಿನ ವಾಂತಿ ಮತ್ತು ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲೆ ಮಾಡಲು ಪತಿ ಮಹೇಂದ್ರರೆಡ್ಡಿ ಯೋಜನೆ ರೂಪಿಸಿದ್ದ. ಕೃತಿಕಾ ರೆಡ್ಡಿ ಅನಾರೋಗ್ಯದಿಂದ ತವರುಮನೆಯಲ್ಲಿ ಮಲಗಿದ್ದಾಗ ಅಲ್ಲಿಗೆ ಬಂದ ಮಹೇಂದ್ರರೆಡ್ಡಿ, ಆಕೆಗೆ ಐವಿ ಇಂಜೆಕ್ಷನ್ ಮೂಲಕ ಎರಡು ದಿನಗಳ ಕಾಲ ಔಷಧ ನೀಡಿದ್ದ. ನಂತರ ಜ್ಞಾನ ತಪ್ಪಿದ್ದ ಕೃತಿಕಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಡಾ. ಕೃತಿಕಾರೆಡ್ಡಿ ಮೃತಪಟ್ಟಿದ್ದರು. ಆದರೆ, ಡಾ. ಮಹೇಂದ್ರ ರೆಡ್ಡಿ ಇದನ್ನು ಸ್ವಾಭಾವಿಕ ಸಾವು ಎಂದು ಹೇಳಿ ಕುಟುಂಬದವರನ್ನು ನಂಬಿಸಿದ್ದರು.
ಆಸ್ಪತ್ರೆಯಿಂದ ಡೆತ್ ಮೆಮೊ ಬಂದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ದೂರು ನೀಡುವಂತೆ ಪೊಲೀಸರ ಕೋರಿದ ಹಿನ್ನೆಲೆಯಲ್ಲಿ ಮಾರತ್ತಹಳ್ಳಿ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದರು. ಮೃತದೇಹದ ಸ್ಯಾಂಪಲ್ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಈಗ ಎಫ್‌ಎಸ್‌ಎಲ್ ವರದಿ ಪೊಲೀಸರ ಕೈ ಸೇರಿದ್ದು ಕೃತಿಕಾ ಸಾವಿಗೆ ದೇಹದಲ್ಲಿ ಪತ್ತೆಯಾದ 'ಅನಸ್ತೇಶಿಯಾ' ಅಂಶವೇ ಕಾರಣ ಎಂಬುದು ದೃಢಪಟ್ಟಿದೆ. ಈ ವರದಿಯ ಆಧಾರದ ಮೇಲೆ ಯುಡಿಆರ್ ಪ್ರಕರಣವನ್ನು ಪೊಲೀಸರು ಕೊಲೆ ಪ್ರಕರಣವಾಗಿ ಪರಿವರ್ತಿಸಿ, ಆರೋಪಿ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.