Ex DGP Murder: ಓಂ ಪ್ರಕಾಶ್‌ ಪುತ್ರಿ ಮಾನಸಿಕವಾಗಿ ಫಿಟ್‌ ಆದರೂ ತನಿಖೆಗೆ ಅಸಹಕಾರ

ರಾಜ್ಯದ ಮಾಜಿ ಡಿಜಿ ಹಾಗೂ ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದಲ್ಲಿ ಪುತ್ರಿ ಕೃತಿ ವಿಚಾರಣೆಗೆ ಮಾನಸಿಕವಾಗಿ ಸದೃಢವಾಗಿದ್ದಾರೆ ಎಂದು ನಿಮ್ಹಾನ್ಸ್ ವೈದ್ಯರು ಹೇಳಿದ್ದಾರೆ. ಆದರೆ, ಆಕೆ ಪೊಲೀಸರ ವಿಚಾರಣೆಗೆ ಸಹಕರಿಸದೇ ಇರುವುದು ಸಂಶಯಕ್ಕೆ ಕಾರಣವಾಗಿದೆ.;

Update: 2025-04-25 02:32 GMT

ರಾಜ್ಯದ ಮಾಜಿ ಡಿಜಿ ಹಾಗೂ ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದಲ್ಲಿ ಪುತ್ರಿ ಕೃತಿ ವಿಚಾರಣೆಗೆ ಮಾನಸಿಕವಾಗಿ ಸದೃಢವಾಗಿದ್ದಾರೆ ಎಂದು ನಿಮ್ಹಾನ್ಸ್ ವೈದ್ಯರು ಹೇಳಿದ್ದಾರೆ. ಆದರೆ, ಆಕೆ ಪೊಲೀಸರ ವಿಚಾರಣೆಗೆ ಸಹಕರಿಸದೇ ಇರುವುದು ಸಂಶಯಕ್ಕೆ ಕಾರಣವಾಗಿದೆ.

ಕೊಲೆಯಾದ ದಿನವೇ ಅವರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿಯನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಪಲ್ಲವಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಓಂ ಪ್ರಕಾಶ್ ಮಗಳು ಕೃತಿಯ ವಿಚಾರಣೆಯನ್ನು ಆಕೆಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು.

ಹೀಗಾಗಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದ ಪೊಲೀಸರು, ವೈದ್ಯಕೀಯ ವರದಿ ಕೇಳಿದ್ದರು. ಇದೀಗ, ತನಿಖೆಗೆ ಒಳಪಡಿಸಲು ಕೃತಿ ಮಾನಸಿಕವಾಗಿ ಫಿಟ್ ಇದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ಹೀಗಾಗಿ ಹೆಚ್ಎಸ್ಆರ್ ಲೇಔಟ್ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಎರಡು ದಿನದ ಹಿಂದೆಯೇ, ಅಂದರೆ ಕೊಲೆ ನಡದ ಮರುದಿನವೇ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದರು. ಆದರೆ, ಬುಧವಾರ ಕೇಸ್ ಫೈಲ್ ಅನ್ನು ಅಧಿಕೃತವಾಗಿ ಸಿಸಿಬಿಗೆ ಹಸ್ತಾಂತರ ಮಾಡಲಾಗಿದೆ. ಕೇಸ್ ಫೈಲ್ ಅನ್ನು ಹೊಸದಾಗಿ ಪ್ರಕರಣದ ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಸಿಸಿಬಿಯ ಎಸಿಪಿ ಧರ್ಮೇಂದ್ರ ಪಡೆದುಕೊಂಡಿದ್ದಾರೆ.

ವಿಚಾರಣೆಗೆ ಸಹಕರಿಸದ ಕೃತಿ

ಓಂ ಪ್ರಕಾಶ್ ಮಗಳು ಕೃತಿಯನ್ನು ಬುಧವಾರ ಬೆಳಗ್ಗೆಯಿಂದಲೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಆಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದಿದ್ದಾರೆ. ಕೃತಿಯೇ ಕೊಲೆ ಮಾಡಿದ್ದಾಳೆ ಎಂದು ಬಂಧಿಸಲು ಸಾಕ್ಷಿಗಳು ಸಿಕ್ಕಿಲ್ಲ. ಸಂಜೆಯವರೆಗೂ ವಿಚಾರಣೆ ನಡೆಸಿ ಕೇಸ್ ಫೈಲ್ ಹಸ್ತಾಂತರ ಮಾಡುವ ಮೊದಲು ಆಕೆಯನ್ನು ಮನೆಗೆ ಕಳುಹಿಸಲಾಗಿದೆ. ಜೊತೆಗೆ ಸಿಸಿಬಿ ಅಧಿಕಾರಿಗಳು ಅವಶ್ಯಕತೆ ಇದ್ದಾಗ ನೋಟಿಸ್ ನೀಡಿ ಕೃತಿಯ ವಿಚಾರಣೆ ನಡೆಸಲು ತೀರ್ಮಾನ ಮಾಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಕೇಸ್ ಫೈಲ್ ಪಡೆದಿರುವ ಸಿಸಿಬಿ ಅಧಿಕಾರಿಗಳು ಇಂದು, ಜೈಲಿನಲ್ಲಿ ಇರುವ ಓಂ ಪ್ರಕಾಶ್‌ ಪತ್ನಿ ಪಲ್ಲವಿಯನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಇಂದು ಮುಕ್ತ ನ್ಯಾಯಾಲಯದಲ್ಲಿಯೇ ಪಲ್ಲವಿಯನ್ನು ಸಿಸಿಬಿ ವಶಕ್ಕೆ ಪಡೆಯುವ ಸಾದ್ಯತೆ ಇದ್ದು, ವಿಚಾರಣೆ ನಂತರ ಯಾವ ಯಾವ ಅಂಶಗಳು ಹೊರಬರುತ್ತವೆ ಎಂಬುದನ್ನು ಕಾದುನೋಡಬೇಕಿದೆ.

ತನಿಖೆ ಚುರುಕು

ಎಚ್‌ಎಸ್‌‍ಆರ್‌ ಲೇಔಟ್‌ ಠಾಣೆ ಪೊಲೀಸರುಪ್ರಕರಣದ ದಾಖಲೆಗಳನ್ನು ನಿನ್ನೆ ಸಿಸಿಬಿಗೆ ಹಸ್ತಾಂತರಿಸಿದ್ದು, ಸಿಸಿಬಿಯ ಮಹಿಳಾ ಭದ್ರತಾ ವಿಭಾಗದ (ಡಬ್ಲ್ಯೂಪಿಡಬ್ಲ್ಯೂ)ಎಸಿಪಿ ಧಮೇಂದ್ರ ಅವರ ತಂಡ ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ಕೈಗೊಂಡಿದೆ.ಹಾಡ ಹಗಲೇ ಓಂ ಪ್ರಕಾಶ್‌ ರವರನ್ನು ಮನೆಯಲ್ಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿದ್ದು ಈ ಸಂಬಂಧ ಅವರ ಪುತ್ರ ಎಚ್‌ಎಸ್‌‍ಆರ್‌ ಲೇಟೌಟ್‌ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದು,ಪ್ರಕರಣ ದಾಖಲಾಗಿ ತನಿಖೆ ಮುಂದುವರೆಸಿದ ಪೊಲೀಸರು ಪಲ್ಲವಿಯನ್ನು ಬಂಧಿಸಿದ್ದರು.

Tags:    

Similar News