ಬಳ್ಳಾರಿ ಜೈಲಿಗೆ ದರ್ಶನ್ ಸ್ಥಳಾಂತರ ಕೋರಿ ಅರ್ಜಿ: ಸೆ.2ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ನಟ ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್: ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ರವಾನಿಸಬೇಕಾಗಿದೆ.;

Update: 2025-08-30 08:59 GMT

ನಟ ದರ್ಶನ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯವು ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ.

ಜೈಲಿನ ಭದ್ರತೆ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸುವಂತೆ ಜೈಲಾಧಿಕಾರಿಗಳು ವಿಶೇಷ ಸರ್ಕಾರಿ ಅಭಿಯೋಜಕರ (SPP) ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಪ್ರಕಾರ, ಈ ಹಿಂದೆ ಆರೋಪಿಗಳು ಜಾಮೀನು ಪಡೆಯುವಾಗ ಯಾವ ಜೈಲಿನಲ್ಲಿದ್ದರೋ, ಅದೇ ಜೈಲಿಗೆ ಅವರನ್ನು ಮರಳಿ ಸ್ಥಳಾಂತರಿಸಬೇಕು ಎಂದು ಕೋರಲಾಗಿದೆ.

ನಟ ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್: ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ರವಾನಿಸಬೇಕಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಪವಿತ್ರಾ ಗೌಡ ಮತ್ತು ಅನುಕುಮಾರ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಆರೋಪಿಗಳ ಪರ ವಕೀಲರ ಆಕ್ಷೇಪ

ಪ್ರಾಸಿಕ್ಯೂಷನ್ ಅರ್ಜಿಗೆ ಆರೋಪಿಗಳ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಚಾರಣೆ ಆರಂಭವಾದರೆ ಆರೋಪಿಗಳನ್ನು ಪದೇ ಪದೇ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗುತ್ತದೆ. ಬೇರೆ ಜಿಲ್ಲೆಗಳ ಜೈಲುಗಳಿಗೆ ಸ್ಥಳಾಂತರಿಸಿದರೆ, ಅವರನ್ನು ಬೆಂಗಳೂರಿಗೆ ಕರೆತರುವುದು ಕಷ್ಟಕರವಾಗುತ್ತದೆ. ಆದ್ದರಿಂದ, ಎಲ್ಲಾ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ದರ್ಶನ್‌ಗೆ ಸೌಲಭ್ಯ ಕೋರಿ ಅರ್ಜಿ

ಇದೇ ವೇಳೆ, ನಟ ದರ್ಶನ್‌ಗೆ ಜೈಲಿನಲ್ಲಿ ದಿಂಬು, ಬೆಡ್‌ಶೀಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೋರಿ ಅವರ ಪರ ವಕೀಲರು ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯವು ಮುಂದೂಡಿದೆ.ಕಳೆದ ಬಾರಿ ದರ್ಶನ್ ಜೈಲಿನಲ್ಲಿದ್ದಾಗ ರೌಡಿಗಳ ಜೊತೆ ರಾಜಾತಿಥ್ಯ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ, ಈ ಬಾರಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ಸುಪ್ರೀಂ ಕೋರ್ಟ್ ಜೈಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.

Tags:    

Similar News