ದರ್ಶನ್‌ಗೆ ಜೈಲಿನಲ್ಲಿ ಸೌಲಭ್ಯ: ಅಕ್ಟೋಬರ್ 9ಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ದರ್ಶನ್ ಪರ ವಕೀಲ ಸುನೀಲ್ ಅವರು ಜೈಲಾಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ನ್ಯಾಯಾಲಯ ಈ ಹಿಂದೆ ನೀಡಿದ್ದ ಸೂಚನೆಗಳನ್ನು ಜೈಲಾಧಿಕಾರಿಗಳು ಗಾಳಿಗೆ ತೂರಿದ್ದಾರೆ ಎಂದು ಹೇಳಿದ್ದಾರೆ.
ಕೊಲೆ ಆರೋಪಿ ನಟ ದರ್ಶನ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಜೈಲಿನಲ್ಲಿ ಹೆಚ್ಚುವರಿ ಹಾಸಿಗೆ ಹಾಗೂ ದಿಂಬುಗಳನ್ನು ನೀಡದ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ಆದೇಶವನ್ನು 57ನೇ ಸೆಷನ್ಸ್ ನ್ಯಾಯಾಲಯ ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದೆ. ವಿಚಾರಣೆ ವೇಳೆ ಜೈಲು ಅಧೀಕ್ಷಕ ಸುರೇಶ್ ಖುದ್ದು ಹಾಜರಾಗಿ, ದರ್ಶನ್‌ಗೆ ಒದಗಿಸಲಾದ ಸೌಲಭ್ಯಗಳ ಕುರಿತು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಜೈಲಾಧಿಕಾರಿಗಳ ಪರವಾಗಿ ವಾದ ಮಂಡಿಸಿದ ಸರ್ಕಾರಿ ವಕೀಲ ಪ್ರಸನ್ನ ಕುಮಾರ್, "ಜೈಲಿನ ನಿಯಮಗಳ ಪ್ರಕಾರವೇ ಆರೋಪಿಗೆ ಸೌಲಭ್ಯಗಳನ್ನು ನೀಡಲಾಗಿದೆ. ಮಲಗಲು ಪಲ್ಲಂಗ ಕೊಡಿ ಎಂದರೆ ಹೇಗೆ ಕೊಡಲು ಸಾಧ್ಯ? ಆರೋಪಿಗೆ ಬೆಳಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ವಾಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಅವರು ಹೊರಗೆ ಹೋಗಬೇಕು, ಇದೇ ಬ್ಯಾರಕ್‌ನಲ್ಲಿ ಇರಬಾರದು ಎಂದರೆ ಸಾಧ್ಯವಿಲ್ಲ. ಅವರಿಗೆ ಬಿಸಿಲು ಬರುತ್ತಿಲ್ಲ ಎಂದರೆ ಜೈಲಾಧಿಕಾರಿಗಳು ಹೊಣೆಯಾಗುವುದಿಲ್ಲ. ಮೂಲಭೂತ ಹಕ್ಕುಗಳು ಇರಬಹುದು, ಆದರೆ ಪ್ರತಿಯೊಬ್ಬರೂ ಜೈಲಿನ ನಿಯಮಗಳ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ," ಎಂದು ಸಮರ್ಥಿಸಿಕೊಂಡರು.
ನ್ಯಾಯಾಲಯದ ಆದೇಶ ಉಲ್ಲಂಘನೆ: ದರ್ಶನ್ ಪರ ವಕೀಲರ ಆರೋಪ
ದರ್ಶನ್ ಪರ ವಕೀಲ ಸುನೀಲ್ ಅವರು ಜೈಲಾಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. "ನ್ಯಾಯಾಲಯ ಈ ಹಿಂದೆ ನೀಡಿದ್ದ ಸೂಚನೆಗಳನ್ನು ಜೈಲಾಧಿಕಾರಿಗಳು ಗಾಳಿಗೆ ತೂರಿದ್ದಾರೆ. ನ್ಯಾಯಾಲಯದ ಸೂಚನೆಗಳು ಅವರಿಗೆ ಅರ್ಥವಾದಂತೆ ಕಾಣುತ್ತಿಲ್ಲ, ಬಹುಶಃ ಅವರಿಗೆ ಇಂಗ್ಲಿಷ್ ಅರ್ಥವಾಗಿಲ್ಲ," ಎಂದು ವಾದಿಸಿದರು. ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗ, ನ್ಯಾಯಾಧೀಶರು ನ್ಯಾಯಾಲಯದ ಘನತೆಗೆ ತಕ್ಕಂತೆ ವಾದಿಸುವಂತೆ ಸೂಚಿಸಿದರು.
ಮುಂದುವರೆದು ವಾದಿಸಿದ ಸುನೀಲ್, "ನಾವು ಆರೋಪಿಗಾಗಿ ಚಿನ್ನದ ಮಂಚವನ್ನೇನೂ ಕೇಳಿಲ್ಲ. ಅವರ ಆರೋಗ್ಯದ ದೃಷ್ಟಿಯಿಂದ ಕೆಲವು ಸಾಮಾನ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಕೋರಲಾಗಿದೆ. ಜೈಲಿನ ಕೈಪಿಡಿಯ ಪ್ರಕಾರ ಯಾವ ಕೈದಿಗೆ ಯಾವ ಸೆಲ್ ನೀಡಬೇಕೆಂಬ ನಿಯಮವಿದೆ, ಆದರೆ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ಅತ್ಯಾಚಾರ ಪ್ರಕರಣದ ಆರೋಪಿಗೆ ನೀಡುವ ಸವಲತ್ತುಗಳನ್ನೂ ದರ್ಶನ್‌ಗೆ ನೀಡುತ್ತಿಲ್ಲ. ಆರೋಪಿಯನ್ನು 14 ದಿನ ಮಾತ್ರ ಕ್ವಾರಂಟೈನ್ ಸೆಲ್‌ನಲ್ಲಿಡಬೇಕು, ಆದರೆ 45 ದಿನಗಳಿಂದಲೂ ಅವರನ್ನು ಅಲ್ಲಿಯೇ ಇರಿಸಲಾಗಿದೆ. ಅವರನ್ನು ಬೇರೆ ಬ್ಯಾರಕ್‌ಗೆ ವರ್ಗಾಯಿಸಬೇಕು," ಎಂದು ಮನವಿ ಮಾಡಿದರು.
ಭದ್ರತಾ ಕಾರಣ , ಸೌಲಭ್ಯ ದುರ್ಬಳಕೆ
ಪ್ರತಿವಾದ ಮಂಡಿಸಿದ ಸರ್ಕಾರಿ ವಕೀಲ ಪ್ರಸನ್ನ ಕುಮಾರ್, "ಕ್ವಾರಂಟೈನ್ ಸೆಲ್ ಕೂಡ ಕಾರಾಗೃಹದ ಒಂದು ಭಾಗವೇ. 1964ರ ಜೈಲು ನಿಯಮಗಳ ಪ್ರಕಾರ, ಭದ್ರತಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಆರೋಪಿಯನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಈ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಅವರು ತಮಗೆ ನೀಡಿದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ," ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಅಂತಿಮ ತೀರ್ಪನ್ನು ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದೆ.