ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ; ಎಚ್.ಡಿ. ದೇವೇಗೌಡ ಘೋಷಣೆ
ಪ್ರಧಾನಿ ನರೇಂದ್ರ ಮೋದಿ ಹಾಗೂ ನಾವು ಅನೋನ್ಯವಾಗಿದ್ದೇವೆ. ನಮ್ಮ ಈ ಮೈತ್ರಿಯನ್ನು ಯಾರೂ ಕೂಡ ಮುರಿಯಲು ಸಾಧ್ಯವಿಲ್ಲ. ಈಗ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ದೇವೇಗೌಡ ಸಲಹೆ ನೀಡಿದರು.
ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ- ಜೆಡಿಎಸ್ ಮೈತ್ರಿಗೆ ಮುಂದುವರಿಯಲಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಘೋಷಿಸಿದರು.
ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ನಿರಾತಂಕವಾಗಿದೆ. ಗ್ರೇಟರ್ ಬೆಂಗಳೂರು ಚುನಾವಣೆ, ಜಿ.ಪಂ, ತಾ,ಪಂ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೈತ್ರಿ ಮುಂದುವರಿಯಲಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ನಾವು ಅನೋನ್ಯವಾಗಿದ್ದೇವೆ. ನಮ್ಮ ಈ ಮೈತ್ರಿಯನ್ನು ಯಾರೂ ಕೂಡ ಮುರಿಯಲು ಸಾಧ್ಯವಿಲ್ಲ. ಈ ಹಿಂದೆ ಪಾಲಿಕೆ ಚುನಾವಣೆಯಲ್ಲಿ ಕನಿಷ್ಠ 60 ಸ್ಥಾನಗಳನ್ನು ಗೆಲ್ಲಬೇಕು ಎಂದು ತಿರ್ಮಾನಿಸಿದ್ದೆವು. ಈಗ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅ.12ಕ್ಕೆ ಮಹಿಳಾ ಸಮಾವೇಶ
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಅ.12 ರಂದು ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ ಆಯೋಜಿಸಬೇಕು. ಈ ಬಗ್ಗೆ ಪಕ್ಷದ ನಾಯಕರಿಗೆ ಸೂಚಿಸಲಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
ಸಮಾವೇಶಕ್ಕೆ ಹಣಕಾಸಿನ ಅಡಚಣೆ, ಬೇರೆ ಸಮಸ್ಯೆ ಇದ್ದರೆ ನನಗೆ ತಿಳಿಸಿ. ಯಾವುದೇ ಲೋಪಗಳಾಗದಂತೆ ಸಮಾವೇಶ ನಡೆಸಬೇಕು ಎಂದು ಹೇಳುವ ಮೂಲಕ ದೇವೇಗೌಡರೇ ಖುದ್ದು ಪಕ್ಷ ಸಂಘಟನೆಗೆ ಇಳಿದಿರುವುದು ಸ್ಥಳೀಯ ಸಂಸ್ಥೆಯ ಚುನಾವಣಾ ಕಾವು ಹೆಚ್ಚಿಸಲಿದೆ.
ಬಿಡದಿ ಟೌನ್ಶಿಪ್ ಯೋಜನೆಗೆ ವಿರೋಧ
ಬಿಡದಿ ಟೌನ್ಶಿಪ್ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತಂತೆ ಮಾತನಾಡಿದ ದೇವೇಗೌಡರು, ಸರ್ಕಾರ ಕಾಂಗ್ರೆಸ್ ಕೈಯಲ್ಲಿದೆ. ಚುನಾವಣೆ ಬಂದಾಗ ಜನ ತೀರ್ಪು ಕೊಡಬೇಕು, ಅಲ್ಲಿಯವರೆಗೂ ಕಾಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ʼನಮ್ಮಕುಟುಂಬವನ್ನು ಜೈಲಿಗೆ ಕಳಿಸಲು ದೇವೇಗೌಡರ ಕುಟುಂಬ ಷಡ್ಯಂತ್ರ ನಡೆಸುತ್ತಿದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನೀವು ಹೇಳುತ್ತಿರುವ ವ್ಯಕ್ತಿಯ ಹೆಸರನ್ನು ನಾನು ಪ್ರಸ್ತಾಪಿಸುವುದಿಲ್ಲ, ನನ್ನ ಮನೆಯ ಮುಂದೆ 1 ತಿಂಗಳು ದೃಶ್ಯ ಮಾಧ್ಯಮಗಳು ಬಂದು ನಿಂತಿದ್ದವು. ಇದರ ಹಿಂದೆ ಯಾರ ಚಿತಾವಣೆ ಇತ್ತು ಎಂಬುದು ಗೊತ್ತಿದೆ ಎಂದು ಕಿಡಿಕಾರಿದರು.
ʼನಾನೇ ಮಳೆಹಾನಿ ವೀಕ್ಷಿಸುತ್ತೇನೆʼ
ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯಿಂದ ತೀವ್ರ ಹಾನಿಯಾಗಿದೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿವೆ. ಬೆಳೆಹಾನಿ ಕುರಿತು ರೈತರಿಗೆ ಸ್ಪಂದಿಸುವ ಕೆಲಸವನ್ನು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಮಾಡಬೇಕು. ಮುಂದಿನ ನಾಲ್ಕು ದಿನಗಳ ಬಳಿಕ ನಾನೇ ಖುದ್ದು ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ ಎಂದು ದೇವೇಗೌಡರು ತಿಳಿಸಿದರು.
ಪ್ರವಾಹ ಹಾಗೂ ಮಳೆ ಪೀಡಿತ ಪ್ರದೇಶಗಳಲ್ಲಿ ಯಾವ ರೀತಿ ಪರಿಹಾರ ನೀಡಲಾಗಿದೆ ಎಂದು ವೀಕ್ಷಿಸುತ್ತೇನೆ. ಬೆಳೆಹಾನಿ ವೀಕ್ಷಣೆ ಬಳಿಕ ಅಗತ್ಯ ಬಿದ್ದರೆ ಪ್ರಧಾನಮಂತ್ರಿಗಳನ್ನು ಭೇಟಿಯಾಗುತ್ತೇನೆ ಎಂದು ಹೇಳಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಹೋಗಿ ಹಣಕಾಸಿನ ಸ್ಥಿತಿ ಬರಡಾಗಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಅತಿವೃಷ್ಠಿ ಬಂದಾಗ ರಾಜ್ಯ ಸರ್ಕಾರ ಶಕ್ತಿ ಮೀರಿ ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.
ಮೊಣಕಾಲು ನೋವು ಬಿಟ್ಟರೆ ಬೇರೆ ಸಮಸ್ಯೆಯಿಲ್ಲ
ಮಾಧ್ಯಮಗೋಷ್ಠಿ ಆರಂಭದಲ್ಲಿ ಕುಮಾರಸ್ವಾಮಿ ಆರೋಗ್ಯದ ಕುರಿತು ಮಾಹಿತಿ ನೀಡಿದ ದೇವೇಗೌಡರು, ಕುಮಾರಸ್ವಾಮಿ ಅವರ ಆರೋಗ್ಯ ಸಂಪೂರ್ಣ ಸರಿಹೋಗಿದೆ. ವೈದ್ಯರು ಸಂಪೂರ್ಣ ಪರೀಕ್ಷೆ ನಡೆಸಿ ಆರೋಗ್ಯ ಸರಿಯಾಗಿದೆ, ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಸೋಲಿನ ಅನುಭವದ ಆಧಾರದ ಮೇಲೆ 70 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು, ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ. ನನಗೆ ಮೊಣಕಾಲು ನೋವು ಬಿಟ್ಟರೆ ಬೇರೆ ಯಾವುದೇ ತೊಂದರೆ ಇಲ್ಲ ಎಂದು ದೇವೇಗೌಡರು ಹೇಳಿದರು.