Bidadi Township | ಬಿಡದಿ ಟೌನ್‌ಶಿಪ್ ನಿರ್ಮಾಣ ಯೋಜನೆ; ದೇವೇಗೌಡ- ಡಿಕೆಶಿ ಕುಟುಂಬಗಳ ರಾಜಕೀಯ ಹಗ್ಗಜಗ್ಗಾಟ
ಹಳೆ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯ ಮರುಸ್ಥಾಪಿಸುವುದು ಜೆಡಿಎಸ್‌ಗೆ ಅನಿವಾರ್ಯ. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ರಾಜಕೀಯ ಭದ್ರ ಬುನಾದಿ ಹಾಕಿಕೊಟ್ಟ ರಾಮನಗರ ಜಿಲ್ಲೆಯ ಜನರ ಆಶಯಗಳಿಗೆ ಸ್ಪಂದಿಸುವ ಸಲುವಾಗಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಲಾಗುತ್ತಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.;
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಂಡಿರುವ ರಾಮನಗರ ಜಿಲ್ಲೆ ಬಿಡದಿಯ ಟೌನ್‌ಶಿಪ್ ನಿರ್ಮಾಣ ಯೋಜನೆ ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಟೌನ್‌ಶಿಪ್ ನಿರ್ಮಿಸಲು ಭೂಸ್ವಾಧೀನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿಲುವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದು, ಟೌನ್ ಶಿಪ್ ಪಿತಾಮಹರೇ ದೇವೇಗೌಡರು ಹಾಗೂ ಕುಮಾರಸ್ವಾಮಿ. 2007ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲೇ ಬಿಡದಿ ಸೇರಿ ರಾಜ್ಯದ ಏಳು ಕಡೆ ಟೌನ್‌ಶಿಪ್ ನಿರ್ಮಾಣ ಯೋಜನೆ ಸಿದ್ಧಪಡಿಸಲಾಗಿತ್ತು. ಮಗನ ಅವಧಿಯಲ್ಲಾದ ಯೋಜನೆಗೆ ಈಗ ಅಪ್ಪ ವಿರೋಧಿಸುವುದು ಎಷ್ಟು ಸರಿ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವುದಿಲ್ಲ. ಗ್ರೇಟರ್ ಬೆಂಗಳೂರು ಮಾಡಿಯೇ ಸಿದ್ಧ ಎಂದು ಸವಾಲು ಹಾಕಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬದ ಆಸ್ತಿ ಸಾಕಷ್ಟು ಪ್ರಮಾಣದಲ್ಲಿ ಟೌನ್‌ಶಿಪ್ ನಿರ್ಮಾಣ ಯೋಜನೆಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಯೋಜನೆಗೆ ವಿರೋಧ ಏಕೆ ?
ಬಿಡದಿ ಹೋಬಳಿಯ ಬೈರಮಂಗಲ, ಕಂಚುಗಾರನಹಳ್ಳಿ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿ ಸುಮಾರು 10 ಸಾವಿರ ಎಕರೆ ಜಮೀನು ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ.
ಹಳೆ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯ ಮರುಸ್ಥಾಪಿಸುವುದು ಜೆಡಿಎಸ್‌ಗೆ ಅನಿವಾರ್ಯ. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ರಾಜಕೀಯ ಭದ್ರ ಬುನಾದಿ ಹಾಕಿಕೊಟ್ಟ ರಾಮನಗರ ಜಿಲ್ಲೆಯ ಜನರ ಆಶಯಗಳಿಗೆ ಸ್ಪಂದಿಸುವ ಸಲುವಾಗಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಲಾಗುತ್ತಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ಈಗಾಗಲೇ ಕೈಗಾರಿಕಾ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಾವಿರಾರು ಎಕರೆ ರೈತರ ಭೂಮಿ ವಶಪಡಿಸಿಕೊಂಡಿದೆ. ಖಾಸಗಿ ಉದ್ದಿಮೆಗಳು ತಲೆ ಎತ್ತಿವೆ. ಕರ್ನಾಟಕ ಗೃಹ ಮಂಡಳಿ ಮತ್ತಿತರ ಸರ್ಕಾರಿ ಪ್ರಾಧಿಕಾರಗಳು ಬಿಡದಿ ಸುತ್ತಮುತ್ತ ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಇಂತಹ ಸ್ಥಿತಿಯಲ್ಲಿ ಟೌನ್‌ಶಿಪ್ ಯೋಜನೆಗಾಗಿ ಇನ್ನಷ್ಟು ಸಾಗುವಳಿ ಭೂಮಿ ಸ್ವಾಧೀನ ಮಾಡಿಕೊಂಡರೆ ರೈತರನ್ನು ಒಕ್ಕಲೆಬ್ಬಿಸಿದಂತಾಗುತ್ತದೆ ಎಂಬುದು ಜೆಡಿಎಸ್ ವರಿಷ್ಠ ದೇವೇಗೌಡರ ಅಭಿಪ್ರಾಯವಾಗಿದೆ. ಹಾಗಾಗಿ ಟೌನ್‌ಶಿಪ್ ನಿರ್ಮಾಣವನ್ನು ಶತಾಯ ಗತಾಯ ತಡೆಯಲು ಜೆಡಿಎಸ್ ಮುಂದಾಗಿದೆ ಎನ್ನಲಾಗಿದೆ.
ಡಿ.ಕೆ.ಶಿಗೆ ಪ್ರತಿಷ್ಠೆಯಾದ ಟೌನ್‌ಶಿಪ್ ನಿರ್ಮಾಣ
ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ. ಈಗ ಬಿಡದಿಯಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡುವ ಮೂಲಕ ರಾಮನಗರ ಜಿಲ್ಲೆಯನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ತರುವುದು ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಯಾರೂ ಕೂಡ ಭೂಮಿ ಮಾರಾಟ ಮಾಡಬೇಡಿ. ನಾನು ನಿಮಗೆ ನೇರವಾಗಿ ಹಣ ನೀಡುವುದಿಲ್ಲ. ಆದರೆ ಆಸ್ತಿ, ಭೂಮಿ ಬೆಲೆ ಏರಿಕೆಯಾಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು.
ರಾಮನಗರ ಜಿಲ್ಲೆಯ ಹಲವು ಭಾಗಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸುವುದರಿಂದ ಭೂಮಿಯ ಮೌಲ್ಯ ಹೆಚ್ಚಲಿದೆ. ಮೂಲ ಸೌಕರ್ಯ ಒದಗಿಸಬಹುದು ಎಂಬುದು ಶಿವಕುಮಾರ್ ಅವರ ಆಲೋಚನೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿ ಹೆಚ್ಚಳದಿಂದ ರಿಯಲ್ ಎಸ್ಟೇಟ್‌ಗೂ ಹೆಚ್ಚು ಪ್ರೋತ್ಸಾಹ ಸಿಗಲಿದೆ ಎನ್ನಲಾಗಿದೆ.
ಗ್ರೇಟರ್ ಬೆಂಗಳೂರಿಗೆ ಸೇರುವ ಗ್ರಾಮಗಳು
ಪ್ರಸ್ತಾವಿತ ಟೌನ್‌ಶಿಪ್ ಯೋಜನೆಗೆ ಸುಮಾರು 8,935 ಎಕರೆ ಭೂಮಿ ಅಗತ್ಯವಾಗಿದೆ. ಇದರಲ್ಲಿ 2,742 ಎಕರೆ ಪ್ರದೇಶದಲ್ಲಿ ಎಕಾನಾಮಿಕ್ ಕಾರಿಡಾರ್ ಬರಲಿದೆ ಎಂದು ಹೇಳಲಾಗಿದೆ. ಯೋಜನೆಗೆ ಅಳ್ಳಾಲಸಂದ್ರ, ಕಂಚುಗಾರನಹಳ್ಳಿ ಕಾವಲ್, ಕಂಚುಗಾರನಹಳ್ಳಿ, ಗೊಲ್ಲರಪಾಳ್ಯ, ಕೆಂಪಯ್ಯನಪಾಳ್ಯ, ಬನ್ನಿಗೆರೆ, ಬೈರಮಂಗಲ, ಮಂಡಲಹಳ್ಳಿ, ಹೊಸೂರು ಮತ್ತು ವಡೇರಹಳ್ಳಿ ಗ್ರಾಮಗಳಲ್ಲಿ ಭೂಸ್ವಾಧೀನ ನಡೆಯಲಿದೆ. ಟೌನ್‌ಶಿಪ್ ಯೋಜನೆಯಲ್ಲಿ 37 ಕಿ.ಮೀ.ಎಕಾನಾಮಿಕ್ ಕಾರಿಡಾರ್ ಇರಲಿದೆ. ನೈಸ್ ರಸ್ತೆ, ಎನ್‌ಹೆಚ್ 204, ಎನ್‌ಹೆಚ್ 275 ಮತ್ತು ಎಸ್‌ಟಿಟಿಆರ್ ಸಂಪರ್ಕಿಸುವಂತೆ ಟೌನ್ ಶಿಪ್ ನಿರ್ಮಾಣವಾಗಲಿದೆ.
2031ಕ್ಕೆ ಟೌನ್‌ಶಿಪ್ ನಿರ್ಮಾಣ ಪೂರ್ಣ
ಬೆಂಗಳೂರು ನಗರದ ವಿಸ್ತರಣೆ ಭಾಗವಾಗಿ 2031ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್‌ಡಿಎ ಈ ಯೋಜನೆ ರೂಪಿಸಿದೆ. ಪಟ್ಟಣಗಳ ಅಭಿವೃದ್ಧಿ ಕಾರ್ಯಗಳನ್ನು ಮೂಲ ಸೌಕರ್ಯಗಳ ಜೊತೆಗೆ ಮಾಡಲಾಗುತ್ತದೆ. ಜ.30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಡದಿ ಮತ್ತು ಹಾರೋಹಳ್ಳಿ ನಡುವೆ ಸ್ಯಾಟಲೈಟ್ ಟೌನ್‌ಶಿಪ್ ನಿರ್ಮಾಣ ಮಾಡಲು ಒಪ್ಪಿಗೆ ದೊರೆತಿತ್ತು. ಇದಲ್ಲದೇ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿಯಲ್ಲೂ ಟೌನ್‌ಶಿಪ್ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು.
2005ರಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಯ ರೂಪುರೇಷೆ ರೂಪಿಸಲಾಗಿತ್ತು. 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ಟೌನ್‌ಶಿಪ್ ನಿರ್ಮಿಸಲು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಸರಿಯಾದ ನೀತಿ ರೂಪಿಸಲು ಸಾಧ್ಯವಾಗದ ಕಾರಣ ಯೋಜನೆ ವಿಫಲಗೊಂಡಿತ್ತು.
ಹಿರಿದಾಗಲಿದೆ ಬೆಂಗಳೂರು ವ್ಯಾಪ್ತಿ
ಗ್ರೇಟರ್ ಬೆಂಗಳೂರು ವಿಧೇಯಕದಿಂದಾಗಿ ಬೆಂಗಳೂರಿನ ವ್ಯಾಪ್ತಿ ಇನ್ನಷ್ಟು ಹಿಗ್ಗಲಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಒಳಗೊಂಡು ಒಟ್ಟು 92 ಸಾವಿರ ಜನಸಂಖ್ಯೆ ಹೊಂದಿರುವ 59 ಗ್ರಾಮಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸೇರ್ಪಡೆಯಾಗಲಿವೆ. ಈ ಪ್ರಾಧಿಕಾರದ ಯೋಜನಾ ಪ್ರದೇಶದ ವಿಸ್ತೀರ್ಣ 23361 ಹೆಕ್ಟೇರ್‌ಗೆ ವಿಸ್ತರಿಸಲಿದೆ. ರಾಮನಗರ ಜಿಲ್ಲೆಯ 8 ಗ್ರಾಮಗಳ 5,921 ಹೆಕ್ಟೇರ್ ಭೂ ಪ್ರದೇಶ, ಕನಕಪುರದ 14ಗ್ರಾಮಗಳ 3,986 ಹೆಕ್ಟೇರ್ ಪ್ರದೇಶ ಪ್ರಾಧಿಕಾರದ ವ್ಯಾಪ್ತಿಗೆ ಬರಲಿದೆ. ಭವಿಷ್ಯದಲ್ಲಿ ನೆರೆಯ ಜಿಲ್ಲೆಗಳು ಬೆಂಗಳೂರಿಗೆ ಪರ್ಯಾಯ ನಗರಗಳಾಗಿ ಬೆಳೆಯಲಿವೆ ಎಂದು ಅಂದಾಜಿಸಲಾಗಿದೆ.
ಸದ್ಯ ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ, ಕನಕಪುರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಈ ಪ್ರದೇಶಗಳನ್ನು ಹಿಂಪಡೆದು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಲಾಗಿದೆ. ಇದರಿಂದ ರಾಮನಗರ ತಾಲೂಕಿನ ಕಸಬಾ ಹೋಬಳಿಯ ಹಳ್ಳಿಮಾಳ, ಹರೀಸಂದ್ರ, ಬೊಮ್ಮಚನಹಳ್ಳಿ, ಲಕ್ಕಸಂದ್ರ, ಸುಗ್ಗನಹಳ್ಳಿ, ಚಿಕ್ಕಸೂಲಿಕೆರೆ, ಕೂಟಗಲ್ ಹೋಬಳಿ ವ್ಯಾಪ್ತಿಯ ದೊಡ್ಡಸೂಲಿಕೆರೆ, ಲಕ್ಷ್ಮೀಪುರ ಗ್ರಾಮಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಯೋಜನಾ ಭೂ ಪ್ರದೇಶದ ವ್ಯಾಪ್ತಿಗೆ ಬರಲಿವೆ.
ಕನಕಪುರ ಹಾಗೂ ಹಾರೋಹಳ್ಳಿ ತಾಲೂಕಿನ ಗಬ್ಬಾಡಿ, ಗಬ್ಬಾಡಿ ಕಾವಲ್, ಕಗ್ಗರೋಹಳ್ಳಿ, ಮುಡೇನಹಳ್ಳಿ, ವಡೇರಹಳ್ಳಿ, ಯಡಮಡು ಗ್ರಾಮಗಳು, ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಕೆ.ಜಿ.ಕಗ್ಗಲೀಪುರ, ಉತ್ತರಿ, ಕೆ.ಜಿ.ಚೌಡನಹಳ್ಳಿ, ಕೆ.ಜಿ.ನೆಲಗುಳಿ, ನಾಗನಾಯಕನಹಳ್ಳಿ, ನೆಟ್ಟಿಗೆರೆ, ರಾವುಗೋಡ್ಲು, ಸೋಮನಹಳ್ಳಿ ಗ್ರಾಮಗಳೂ ಪ್ರಾಧಿಕಾರಕ್ಕೆ ಸೇರಲಿವೆ.