Gold Smuggling : ರನ್ಯಾ ರಾವ್‌ಗೆ ಇಬ್ಬರು ಸಚಿವರ ನಂಟು: ನಾಳೆ ವಿಧಾನಸಭೆಯಲ್ಲಿ ಮಾಹಿತಿ ಬಹಿರಂಗ?

ರನ್ಯಾ ರಾವ್‌ ಪ್ರಕರಣ ಕುರಿತು ಸೋಮವಾರ ಸದನದಲ್ಲಿ ಮಾತನಾಡುವೆ. ಆಕೆಯೊಂದಿಗೆ ಸಂಪರ್ಕವಿರುವ ಇಬ್ಬರು ಸಚಿವರ ಹೆಸರನ್ನು ಸದನದಲ್ಲಿ ಹೇಳುವೆ. ಇದು ಸದನದ ರಹಸ್ಯ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ;

Update: 2025-03-16 14:33 GMT

ನಟಿ ರನ್ಯಾ ರಾವ್ ವಿದೇಶಗಳಿಂದ ಚಿನ್ನ ಅಕ್ರಮ ಸಾಗಾಟ ಮಾಡಿರುವ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಇಡೀ ಪ್ರಕರಣ ಕುರಿತು ಸೋಮವಾರ ಸದನದಲ್ಲಿ ಮಾತನಾಡುವೆ. ಆಕೆಯೊಂದಿಗೆ ಸಂಪರ್ಕವಿರುವ ಇಬ್ಬರು ಸಚಿವರ ಹೆಸರನ್ನು ಸದನದಲ್ಲಿ ಹೇಳುವೆ. ಈಗ ಆ ಬಗ್ಗೆ ಮಾಧ್ಯಮಗಳ ಮುಂದೆ ಹೇಳುವುದಿಲ್ಲ. ಇದು ಸದನದ ರಹಸ್ಯ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ರನ್ಯಾ ರಾವ್‌ಳಿಗೆ ಪ್ರೋಟೋಕಾಲ್‌ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಚಿನ್ನ ಎಲ್ಲಿಂದ ತಂದಿದ್ದಾರೆ? ಎಲ್ಲಿಟ್ಟು ತಂದಿದ್ದಾರೆ? ಎಂಬುದು ಗೊತ್ತಿದೆ ಎಂದು ಯತ್ನಾಳ್ ಹೇಳಿದರು.


ರನ್ಯಾ ಪ್ರಕರಣದಲ್ಲಿ ಕೇಂದ್ರದ ಕಸ್ಟಮ್ಸ್ ಆಧಿಕಾರಿಗಳೂ ತಪ್ಪು ಮಾಡಿದ್ದಾರೆಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಯಾರು ತಪ್ಪು ಮಾಡಿದ್ದರೂ ಅದು ತಪ್ಪೇ. ಕಸ್ಟಮ್ಸ್ ಆಧಿಕಾರಿಗಳು ತಪ್ಪು ಮಾಡಿದ್ದರೆ ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ದರೆ ಅದು ಕೂಡ ತಪ್ಪೇ ಎಂದರು.

ರನ್ಯಾಗೆ ಭೂಮಿ

ರನ್ಯಾಗೆ ಕೆಐಎಡಿಬಿಯಿಂದ 12 ಎಕರೆ ಜಮೀನು ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ, ಜಮೀನು ಕೊಟ್ಟಿದ್ದನ್ನು ಸ್ವತಃ ಮುರುಗೇಶ್ ನಿರಾಣಿ ಒಪ್ಪಿಕೊಂಡಿದ್ದಾರೆ. 12 ಎಕರೆ ಜಮೀನು ಕೊಟ್ಟಿದ್ದು, ಹಣ ಪಾವತಿ ಮಾಡದ ಕಾರಣ ಅದು ರದ್ದಾಗಿದೆ. 12 ಏಕರೆಗೆ ಜಮೀನಿಗೆ ಯಾರೋ ಒಬ್ಬರು ಹಣ ಕೊಡುತ್ತೇನೆ ಎಂದಿದ್ದರು. ಅವರು ಕೊಟ್ಟಿಲ್ಲ. ಹಾಗಾಗಿ ಜಮೀನು ಹಂಚಿಕೆ ಹಾಗಾಗಿ ರದ್ದಾಗಿದೆ ಎಂದರು.

ರಾಜಕೀಯ ಜಟಾಪಟಿ

ಈ ಪ್ರಕರಣದ ತನಿಖೆಯ ಮೇಲೆ ಪರಿಣಾಮ ಬೀರಲು ರನ್ಯಾ ರಾಜ್ಯದ ಕಾಂಗ್ರೆಸ್ ಸಚಿವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ ಎಂದು ರಾಜ್ಯ ಬಿಜೆಪಿಯ ನಾಯಕರೊಬ್ಬರು ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ ಅವರು ನಟಿ ಮತ್ತು ಅವರ ಕುಟುಂಬದೊಂದಿಗೆ ಇರುವ ಭಾವಚಿತ್ರವೊಂದನ್ನು ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಈ ಭಾವಚಿತ್ರ ರನ್ಯಾ ಮದುವೆ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ.

"ರಾಜ್ಯದಲ್ಲಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣವು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೆ ತಲುಪಿದೆ. ಈ ದಿನಾಂಕದ ಫೋಟೋದಲ್ಲಿ ಪ್ರಸ್ತುತ ಗೃಹ ಸಚಿವ ಪರಮೇಶ್ವರ ಕೂಡ ಇದ್ದಾರೆ" ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಪೋಸ್ಟ್‌ನಲ್ಲಿ ತಿಳಿಸಿದ್ದರು.

ಬಿಜೆಪಿಯ ಆರೋಪವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರಸ್ಕರಿಸಿದ್ದರು. ಈ ಪ್ರಕರಣಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ಯಾವುದೇ ಮಂತ್ರಿಗಳ ಭಾಗಿಯಾಗಿರುವ ಬಗ್ಗೆ ಪುರಾವೆಗಳನ್ನು ಒದಗಿಸುವಂತೆ ವಿರೋಧ ಪಕ್ಷಗಳಿಗೆ ಸವಾಲು ಹಾಕಿದ್ದಾರೆ. ಯಾವುದೇ ಕಾಂಗ್ರೆಸ್ ಸಚಿವರು ಇಂತಹ ಅಪರಾಧ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.


ಡಿಜಿಪಿ ನೆರವು?

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನದ ನಂತರ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಕಾನೂನುಬಾಹಿರವಾಗಿ ಶಿಷ್ಟಾಚಾರ (ಪ್ರೋಟೋಕಾಲ್) ಸೌಲಭ್ಯ ಒದಗಿಸಲಾಗಿತ್ತು ಎಂಬ ವಿಚಾರ ಬಹಿರಂಗವಾಗಿ ವಿವಾದಕ್ಕೆ ಕಾರಣವಾಗಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ, ಡಿಜಿಪಿ ರಾಮಚಂದ್ರರಾವ್ ವಿರುದ್ಧ ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ಮಧ್ಯೆ, ಅವರ ಮಲಮಗಳ ಮನೆಯ ಮೇಲೆ ಇನ್ಫೋರ್ಮೇಷನ್ ಡಿಪಾರ್ಟ್ಮೆಂಟ್ (ಇ.ಡಿ) ದಾಳಿ ನಡೆಸಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಡಿಜಿಪಿ ರಾಮಚಂದ್ರರಾವ್‌ ಅವರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.


Tags:    

Similar News